ಬಿಡದಿ ಟೌನ್‍ಶಿಪ್ ಪ್ರಸ್ತಾಪದಿಂದ ಹಿಂದೆ ಸರಿಯಬೇಕು; ವಿಮಾನನಿಲ್ದಾಣವನ್ನು ಕನಕಪುರದ ಬದಲಾಗಿ ತುಮಕೂರು ಸುತ್ತಮುತ್ತ ಅವಕಾಶ ಕೊಡಬೇಕೆಂದು ಆಗ್ರಹಿಸಿ ಬಿಡದಿಯಿಂದ ಬೆಂಗಳೂರುವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲು ಬಿಜೆಪಿ ನಿರ್ಧರಿಸಿದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಬಿಡದಿ ಟೌನ್‍ಶಿಪ್ ಸ್ಥಾಪನೆ ವಿರುದ್ಧ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಪಾದಯಾತ್ರೆಗೆ ದಿನಾಂಕವನ್ನು ನಮ್ಮ ಪಕ್ಷದ ಮುಖಂಡರ ಜೊತೆ ಚರ್ಚಿಸಿ ನಿರ್ಧರಿಸುತ್ತೇವೆ. ಅಧಿವೇಶನ ಪ್ರಾರಂಭ ಆಗುವುದಕ್ಕಿಂತ ಮುಂಚಿತವಾಗಿ ಪಾದಯಾತ್ರೆ ಹಮ್ಮಿಕೊಳ್ಳುತ್ತೇವೆ ಎಂದು ಪ್ರಕಟಿಸಿದರು.
ಕನಕಪುರದಲ್ಲಿ ತಮ್ಮ ಜಮೀನಿನ ಬೆಲೆ ಹೆಚ್ಚಾಗಬೇಕು; ಅಲ್ಲಿ ತಮ್ಮ ಕಂಪೆನಿಗಳೂ ಬರಬೇಕೆಂಬ ಆಲೋಚನೆಯನ್ನು ಬದಿಗಿಟ್ಟು ಎರಡನೇ ಅಂತರರಾಷ್ಟ್ರೀಯ ವಿಮಾನನಿಲ್ದಾಣವನ್ನು ರಾಜ್ಯದ ಒಳಿತಿಗಾಗಿ ತುಮಕೂರು ಅಕ್ಕಪಕ್ಕದಲ್ಲಿ ಸ್ಥಾಪಿಸುವಂತೆ ಕೈ ಜೋಡಿಸಿ ಪ್ರಾರ್ಥಿಸುವುದಾಗಿ ತಿಳಿಸಿದರು. ಇದರಿಂದ ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಪ್ರಯೋಜನ ಆಗಲಿದೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಅವರು ರಿಯಲ್ ಎಸ್ಟೇಟ್ ಏಜೆಂಟ್ ಎಂದು ಜನರು ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು. ಆ ಆರೋಪದಿಂದ ಹೊರಬರುವ ಅಪೇಕ್ಷೆ ನಿಮ್ಮಲ್ಲಿದ್ದರೆ ರಾಜ್ಯದಲ್ಲಿ ಹೋರಾಟ ಪ್ರಾರಂಭವಾಗುವ ಮುಂಚಿತವಾಗಿ ಎಚ್ಚೆತ್ತುಕೊಳ್ಳಿ ಎಂದು ತಿಳಿಸಿದರು.
ರೈತರ ಕಣ್ಣೀರಿನಿಂದ ನಿಮಗೆ ಒಳ್ಳೆಯದಾಗಲು ಸಾಧ್ಯವಿಲ್ಲ. ಬಿಡದಿ ಟೌನ್‍ಶಿಪ್‍ನ ನಿರ್ಧಾರದಿಂದ ಮುಖ್ಯಮಂತ್ರಿಗಳು ಹಿಂದೆ ಸರಿಯಬೇಕೆಂದು ಒತ್ತಾಯಿಸಿದರು. ಮುಖ್ಯಮಂತ್ರಿಯಾಗಿ ಎಷ್ಟು ದಿನ ಆ ಕುರ್ಚಿಯಲ್ಲಿ ಕುಳಿತಿದ್ದೀರಿ ಎಂಬುದು ಮುಖ್ಯವಲ್ಲ; ಮುಖ್ಯಮಂತ್ರಿಯಾಗಿ ಎಷ್ಟು ಸಂಪಾದನೆ ಮಾಡಿದ್ದೀರೆಂಬುದು ಮುಖ್ಯವಲ್ಲ; ರಾಜ್ಯದ ಮುಖ್ಯಮಂತ್ರಿಯಾಗಿ ಕರ್ನಾಟಕದ ಅಭಿವೃದ್ಧಿಗೆ ತಮ್ಮ ಕೊಡುಗೆ ಏನೆಂಬುದನ್ನು ಜನರು ಮುಂದೆ ಮಾತನಾಡುತ್ತಾರೆ ಎಂದು ತಿಳಿಸಿದರು.
ಬಿಡದಿ ಟೌನ್‍ಶಿಪ್, ಕನಕಪುರ ವಿಮಾನನಿಲ್ದಾಣದ ಬಗ್ಗೆ ತಲೆ ಕೆಡಿಸಿಕೊಂಡಿದ್ದೀರಲ್ಲವೇ? ಅದರ ಶೇ 20ರಷ್ಟು ಸಮಯವನ್ನು ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ, ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೊಡಿ. ಆಗ ಉತ್ತರ ಕರ್ನಾಟಕದ ಜನರೂ ನಿಮ್ಮನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ ಎಂದು ಹೇಳಿದರು.
ಪ್ರಧಾನಿಯವರಿಗೆ ಪತ್ರ ಬರೆದು ಕೈಕಟ್ಟಿ ಕೂತರೆ ರೈತರ ಸಮಸ್ಯೆ ಬಗೆಹರಿಯಲು ಸಾಧ್ಯವಿಲ್ಲ. ಮುಖ್ಯಮಂತ್ರಿಯಾಗಿ ಭೀಕರ ಬರಗಾಲ ಪರಿಸ್ಥಿತಿ ಎದುರಿಸುವ ಸಂದರ್ಭದಲ್ಲಿ ರೈತರಿಗೆ ಉಳುಮೆ ಮಾಡದೇ ಇರಲು ಸಲಹೆ ಕೊಟ್ಟಿದ್ದೀರಿ; ಅದರ ಬದಲಾಗಿ ರೈತರಿಗೆ ಕೊಡುವ ಪರಿಹಾರದ ಕುರಿತು ಘೋಷಿಸಬೇಕು ಎಂದು ಆಗ್ರಹಿಸಿದರು.


