Homeಕರ್ನಾಟಕಆಪರೇಷನ್ ಸಿಂಧೂರ್‌ನಲ್ಲಿ ಹುತಾತ್ಮರಾದ ಸೈನಿಕರ ಹೆಸರು ಮುಚ್ಚಿಟ್ಟಿದ್ದು ಏಕೆ: ಹರಿಪ್ರಸಾದ್ ಪ್ರಶ್ನೆ

ಆಪರೇಷನ್ ಸಿಂಧೂರ್‌ನಲ್ಲಿ ಹುತಾತ್ಮರಾದ ಸೈನಿಕರ ಹೆಸರು ಮುಚ್ಚಿಟ್ಟಿದ್ದು ಏಕೆ: ಹರಿಪ್ರಸಾದ್ ಪ್ರಶ್ನೆ

ಆಪರೇಷನ್ ಸಿಂಧೂರ್ ನಲ್ಲಿ ನಮ್ಮ ಯಾವುದೇ ಯೋಧರು ಸತ್ತಿಲ್ಲ ಎಂದು ಹೇಳಿದ್ದರು. ಆದರೆ ಮೊನ್ನೆ ರಾಜನಾಥ್ ಸಿಂಗ್ ಅವರು 6 ಸೈನಿಕರು ಸತ್ತಿದ್ದಾರೆ ಎಂದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಇವರು ಎಷ್ಟು ಸುಳ್ಳು ಹೇಳುತ್ತಾರೆ ಎಂದು ಇದರಲ್ಲೇ ಅರ್ಥವಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಹೇಳಿದರು.

ಭಾರತ ಜೋಡೋ ಭವನದಲ್ಲಿ ಬುಧವಾರ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ” ದೇಶಕ್ಕೆ ಪ್ರಾಣಕೊಟ್ಟವರ ಹೆಸರು ಹೇಳಲು ಇವರಿಗೆ ಸಾಧ್ಯವಾಗುವುದಿಲ್ಲ. ಆಪರೇಷನ್ ಸಿಂಧೂರ್ ಆಗಿ 2 ತಿಂಗಳಾಗಿದ್ದು, ಆಗಲೇ ರಾಮ್ ಮಾಧವ್ ಅವರು ಲಂಡನ್ ನಲ್ಲಿ ಸಭೆ ಮಾಡಿದ್ದಾರೆ. ನಮ್ಮ ಸರ್ಕಾರ ಕೇಂದ್ರದಲ್ಲಿದ್ದಾಗ ಭಯೋತ್ಪಾದನೆ ನಿಗ್ರಹವಾಗುವವರೆಗೂ ಪಾಕಿಸ್ತಾನದೊಂದಿಗೆ ಮಾತುಕತೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು” ಎಂದು ಕಿಡಿಕಾರಿದರು.

ಬಿಜೆಪಿಯವರು ಚುನಾವಣೆ ಬಂದಾಗ, ಪಾಕಿಸ್ತಾನ, ಚಿಕನ್, ಮಟನ್, ಹಲಾಲ್, ಹಿಜಾಬ್, ಮಂಗಲಸೂತ್ರದ ಬಗ್ಗೆ ಮಾತನಾಡುತ್ತಾರೆ. ರಾಮ್ ಮಾಧವ್ ಅವರು ಜಿಬಿಎ ಚುನಾವಣೆಗೆ ಬರುವಾಗ ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಪಾಕಿಸ್ತಾನದವರೊಂದಿಗೆ ರಹಸ್ಯ ಸಭೆ ಮಾಡಲು ಅಧಿಕಾರ ಕೊಟ್ಟವರು ಯಾರು? ಇವರು ವಿದೇಶಾಂಗ ಸಚಿವರೂ ಅಲ್ಲ, ಶಾಸಕರೂ ಅಲ್ಲ, ಸಂಸದರೂ ಅಲ್ಲ. ಆರ್ ಎಸ್ಎಸ್ ಪ್ರಚಾರಕರಾಗಿ ವಿದೇಶದಲ್ಲಿ ಸಭೆ ಮಾಡಲು ಅಧಿಕಾರ ಕೊಟ್ಟಿದ್ದು ಯಾರು ಎಂದು ಪ್ರಶ್ನಿಸಿದರು.

ಯಾವ ಅಧಿಕಾರ ಇಟ್ಟುಕೊಂಡು ಆರ್ ಎಸ್ಎಸ್ ನವರು ವಿದೇಶಾಂಗ ನೀತಿ ಬಗ್ಗೆ ತೀರ್ಮಾನ ಮಾಡುತ್ತಿದ್ದಾರೆ? ಪಾಕಿಸ್ತಾನದವರೊಂದಿಗಿನ ಗುಪ್ತ ಸಭೆ ಬಗ್ಗೆ ದೇಶದ ಜನರಿಗೆ ಯಾಕೆ ಮಾಹಿತಿ ನೀಡಿಲ್ಲ? ಆಪರೇಷನ್ ಸಿಂಧೂರ್ ನಲ್ಲಿ ಹುತಾತ್ಮರಾದ ಭಾರತೀಯ ಸೈನಿಕರ ಹೆಸರುಗಳನ್ನು ಇಷ್ಟು ದಿನ ಮುಚ್ಚಿಟ್ಟಿದ್ದು ಯಾಕೆ ಎಂದು ಕೇಳಿದರು.

ಬಿಜೆಪಿಯವರು ರಿವರ್ಸ್ ಗೇರ್ ನಲ್ಲಿ ಹೋಗುತ್ತಿದ್ದಾರೆ. ಜನರು ಅನಕ್ಷರಸ್ಥರಿದ್ದಷ್ಟು ಅಂಧಭಕ್ತರನ್ನು ಸೃಷ್ಟಿಸಬಹುದು. ಜಾತಿ ಹೆಸರಿನಲ್ಲಿ ಜಗಳ ಮಾಡಿಸಬಹುದು. ಜಾತಿ ಧರ್ಮದ ಹೆಸರಿನ ಗಲಾಟೆಯಲ್ಲಿ ಜೈಲಿಗೆ ಹೋಗುವವರು ದಲಿತರು, ಶೂದ್ರರು. ಆದರೆ ರಾಮಮಂದಿರ ಲೂಟಿ ಮಾಡಿದವರು ಯಾರು? ದಲಿತರು, ಶೂದ್ರರೇ? ದೇವಸ್ಥಾನ ಕಟ್ಟಲು ಹೊರಟವರೇ ಲೂಟಿ ಹೊಡೆದಿದ್ದಾರೆ. ಇತಿಹಾಸದಲ್ಲಿ ಮೊಹಮದ್ ಘಜ್ನಿ ಭಾರತವನ್ನು 17 ಬಾರಿ ಲೂಟಿ ಮಾಡಿದ್ದಾನೆ ಎಂದು ಓದಿದ್ದೇವೆ. ಅವರನ್ನು ಬಿಟ್ಟರೆ, ದೇವಸ್ಥಾನಗಳನ್ನು ಲೂಟಿ ಮಾಡಿರುವವರು ಆರ್ ಎಸ್ಎಸ್ ಹಾಗೂ ಬಿಜೆಪಿಯವರು. ಇವರು ನಮಗೆ ದೇವರ ಬಗ್ಗೆ ಪಾಠ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಪೂರ್ವಜರು ಬಹಳ ಹೋರಾಟ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ನಮಗೆ ಪ್ರಜಾಪ್ರಭುತ್ವ ವ್ಯವಸ್ಥೆ ಕೊಟ್ಟಿದ್ದಾರೆ. ಸ್ವಾತಂತ್ರ್ಯ ಸಿಕ್ಕ ಬಳಿಕ ಸುಮಾರು 6-7 ರಾಜ ಸಂಸ್ಥಾನಗಳು ಭಾರತದೊಂದಿಗೆ ಸೇರುವುದಿಲ್ಲ, ನಾವು ರಾಜರಾಗಿಯೇ ಉಳಿಯುತ್ತೇವೆ ಎಂದು ಹೇಳಿದ್ದರು. ಕಾಶ್ಮೀರ, ಗುಜರಾತ್, ಭೋಪ್ ನವಾಬರು, ಹೈದರಾಬಾದ್ ನಿಜಾಮ ಮನವೊಲಿಸಿದ ಬಳಿಕ ಭಾರತದೊಂದಿಗೆ ಸೇರ್ಪಡೆಯಾದರು. ಹೈದರಾಬಾದ್ 1 ವರ್ಷ ತಡವಾಗಿ ದೇಶವನ್ನು ಸೇರಿತು ಎಂದರು.

1952ರಲ್ಲಿ ನೆಹರು ಅವರು ಮೊದಲ ಬಜೆಟ್ ಮಂಡನೆ ಮಾಡಿದಾಗ 400 ಕೋಟಿ ಇತ್ತು. 1947ರಲ್ಲಿ ಮಧ್ಯಂತರ ಸರ್ಕಾರ ಬಂದಾಗ ನೆಹರು ಅವರು ಪ್ರಧಾನಮಂತ್ರಿಗಳಾಗಿದ್ದಾಗ 198 ಕೋಟಿ ಬಜೆಟ್ ಇಟ್ಟು. ಸಾಕ್ಷರತೆ 11% ಇತ್ತು. ದೇಶದ ಜನರು ಸ್ವಾತಂತ್ರ್ಯ ಹೋರಾಟದ 25% ಇತಿಹಾಸ ತಿಳಿದುಕೊಂಡರೆ ಸಾಕು, ಖಾಕಿ ಚಡ್ಡಿ, ಕರಿ ಟೋಪಿಯವರು ಊರು ಬಿಟ್ಟು ಹೋಗುತ್ತಾರೆ. ಆ ಸಂಘಟನೆಯವರು ಮಹಾತ್ಮಾ ಗಾಂಧಿ ಅವರ ಸರ್ವಧರ್ಮ ಸಮ ಎಂಬ ತತ್ವ ಸಿದ್ಧಾಂತ, ಭಾರತದ ಸಂವಿಧಾನ ಹಾಗೂ ತ್ರಿವರ್ಣ ಧ್ವಜ ಒಪ್ಪಿಕೊಂಡರೆ ನಾವು ಅವರನ್ನು ವಿರೋಧಿಸುವುದಿಲ್ಲ. ಅವರು ನಮ್ಮ ಶತ್ರುಗಳಲ್ಲ ಅವರು ನಮ್ಮ ಭಾರತ ದೇಶದವರೇ ಆದರೆ ದೇಶದ ಭದ್ರಬುನಾದಿಯಾಗಿರುವ ಸಂವಿಧಾನ, ಪ್ರಜಾತಂತ್ರ, ತ್ರಿವರ್ಣಧ್ವಜ, ಜಾತ್ಯಾತೀತ ತತ್ವ ಒಪ್ಪಿದರೆ ನಾವು ಅವರನ್ನು ವಿರೋಧ ಮಾಡುವುದಿಲ್ಲ ಎಂದು ಹೇಳಿದರು.

ನಾನು ಹೆಮ್ಮೆಯಿಂದ ಹಿಂದು ಎಂದು ಹೇಳಿಕೊಳ್ಳುತ್ತೇನೆ. ನಾನು ಪಾಲಿಸುವ ಹಿಂದು ಧರ್ಮ ಮಹಾತ್ಮಾ ಗಾಂಧಿ, ವಿವೇಕಾನಂದ, ನಾರಾಯಣಗುರು, ಕನಕದಾಸ, ಬಸವಣ್ಣ ಹೇಳುವ ಧರ್ಮಾ ಪಾಲಿಸುತ್ತೇನೆ. ಗೋಲ್ವಾಲ್ಕರ್, ಗೋಡ್ಸೆ, ಹೆಡಿಗೆವಾರ್ ಅವರು ಹೇಳುವ ಹಿಂದೂ ಧರ್ಮ ಪಾಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಜಾತ್ಯಾತೀತ ತತ್ವ ಎಂದರೆ ಎಲ್ಲಾ ಧರ್ಮಗಳು ಒಂದಾಗಿ ಸಾಗುವುದು. ಇಂತಹ ದೇಶ ಇಡೀ ಪ್ರಪಂಚದಲ್ಲಿ ಎಲ್ಲೂ ಸಿಕ್ಕುವುದಿಲ್ಲ. 7 ಧರ್ಮಗಳು ಇರುವ ದೇಶ ಭಾರತ. 21 ಅಧಿಕೃತ ಭಾಷೆ, ಅನಧಿಕೃತವಾಗಿರುವ 19 ಸಾವಿರ ಭಾಷೆಗಳಿವೆ. ಇಂತಹ ವೈವಿಧ್ಯತೆ ನಾಶ ಮಾಡುತ್ತಿದ್ದಾರೆ. ಒಂದು ರಾಷ್ಟ್ರ ಒಂದು ಶಿಕ್ಷಣ, ಒಂದು ದೇಶ ಒಬ್ಬ ನಾಯಕ, ಒಂದು ದೇಶ ಒಂದು ಧರ್ಮ ಮಾಡಲು ಹೊರಟಿದ್ದಾರೆ. ಕೆಲವರನ್ನು ದೂರವಿಡಲು ಈ ರೀತಿ ಮಾಡುತ್ತಿದ್ದಾರೆ. ಇದನ್ನು ಮಾಡಲು ಸಾಧ್ಯವಿಲ್ಲ. ಬಹುತ್ವ ಭಾರತದ ಆತ್ಮ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments