Homeಕರ್ನಾಟಕಮೋದಿ ನೇತೃತ್ವದಲ್ಲಿ ಹೆಮ್ಮೆಪಡುವಂತಹ ಭಾರತ ನಿರ್ಮಿಸುತ್ತಿದ್ದೇವೆ: ಕುಮಾರಸ್ವಾಮಿ

ಮೋದಿ ನೇತೃತ್ವದಲ್ಲಿ ಹೆಮ್ಮೆಪಡುವಂತಹ ಭಾರತ ನಿರ್ಮಿಸುತ್ತಿದ್ದೇವೆ: ಕುಮಾರಸ್ವಾಮಿ

ಕಳೆದ ಹತ್ತು ವರ್ಷಗಳಲ್ಲಿ ಭಾರತದ ಅಟೋಮೊಬೈಲ್ ಕ್ಷೇತ್ರದಲ್ಲಿ ಅಭೂತಪೂರ್ವ ಕ್ರಾಂತಿ ಆಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜಾರಿಗೆ ಬಂದಿರುವ ಪಿಎಂ ಇ-ಡ್ರೈವ್ ಯೋಜನೆಯಿಂದ ಮಾಲಿನ್ಯರಹಿತ ಸಾರಿಗೆ ವ್ಯವಸ್ಥೆಯ ಪರಿಣಾಮಕಾರಿ ಅನುಷ್ಠಾನ ಸಾಧ್ಯವಾಗಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ನವದೆಹಲಿಯ ಭಾರತ್ ಮಂಟಪದಲ್ಲಿ ಐದು ದಿನಗಳ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೇಂದ್ರ ಸಚಿವರು ಭಾಷಣ ಮಾಡಿದರು.

ವಾಯುಮಾಲಿನ್ಯ ನಿವಾರಣೆ ನಿಟ್ಟಿನಲ್ಲಿ ಅನುಷ್ಠಾನಕ್ಕೆ ತರಲಾಗಿರುವ ಹಸಿರುಪೂರಕ ಉಪ ಕ್ರಮಗಳಿಂದ ದೇಶೀಯ ಎಕೋ ಅಟೋಮೊಬೈಲ್ ಕ್ಷೇತ್ರಕ್ಕೆ ಹೆಚ್ಚು ಅನುಕೂಲ ಆಗಿದೆ. ಎಲೆಕ್ಟ್ರಿಕ್ ವಾಹನಗಳು (ಇವಿಗಳು), ಶುದ್ಧ ಇಂಧನ ಪರಿಹಾರಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ಪರಿಸರ ಸ್ನೇಹಿ ಸಾರಿಗೆಯಲ್ಲಿ ಭಾರತವು ನಾಗಾಲೋಟದಲ್ಲಿ ಅಭಿವೃದ್ಧಿ ಹೊಂದುತ್ತಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.

ಸ್ವಚ್ಛ ಭಾರತ್ ಅಭಿಯಾನವೂ ಸೇರಿದಂತೆ ಪ್ರಧಾನಮಂತ್ರಿಗಳ ಪರಿಸರ ಸ್ನೇಹಿ ನೀತಿಗಳು ಭಾರತದ ಹಸಿರು ಅಟೋಮೊಬೈಲ್ ಭವಿಷ್ಯಕ್ಕೆ ಖಾತರಿಯಾಗಿವೆ. ಪಿಎಂ ಇ-ಡ್ರೈವ್ ಯೋಜನೆಯಿಂದ ಈ ಕ್ಷೇತ್ರವು ಪರಿಣಾಮಕಾರಿಯಾಗಿ ವಾಯುಮಾಲಿನ್ಯ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತಿದೆ ಎಂದು ಬೃಹತ್ ಕೈಗಾರಿಕೆ ಸಚಿವರು ಹೇಳಿದರು.

ಹಸಿರು ಅಟೋಮೊಬೈಲ್ ಕ್ಷೇತ್ರದ ಪ್ರಯೋಗಶೀಲತೆ ಹಾಗೂ ಸುಸ್ಥಿರ ಅಭಿವೃದ್ಧಿಗೆ ಕೇಂದ್ರ ಸರಕಾರ ಪಿಎಂ ಇ-ಡ್ರೈವ್ ಯೋಜನೆ ಹಾಗೂ ಉತ್ಪಾದನಾ ಸಂಪರ್ಕ ಸೌಲಭ್ಯ (PLI) ದಿಂದ ಹೆಚ್ಚು ಅನುಕೂಲ ಆಗಿದೆ ಎಂದು ಅವರು ಒತ್ತಿ ಹೇಳಿದರು.

ಕೇಂದ್ರದ ಹೆದ್ದಾರಿ ಮತ್ತು ಭೂಸಾರಿಗೆ ಸಚಿವರಾದ ನಿತಿನ್ ಗಡ್ಕರಿ, ವಸತಿ ಮತ್ತು ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಖಟ್ಟರ್, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಖಾತೆ ಸಚಿವರಾದ ಜಿತನ್ ರಾಮ್ ಮಾಂಝ, ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ಹಾಗೂ ಪೆಟ್ರೋಲಿಯ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸುಧಾರಿತ ಆಟೋಮೋಟಿವ್ ಟೆಕ್ನಾಲಜಿ ಉತ್ಪನ್ನಗಳನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರಕಾರ ಪಿಎಲ್‌ಐ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಪಿಎಂ ಇ-ಡ್ರೈವ್ ಯೋಜನೆಯಿಂದ ಎಲೆಕ್ಟ್ರಿಕ್ ಆಂಬ್ಯುಲೆನ್ಸ್‌ಗಳು, ಬಸ್‌ಗಳು, ಟ್ರಕ್‌ಗಳು ಮತ್ತು ಮೂಲಸೌಕರ್ಯಗಳನ್ನು ಉತ್ತೇಜಿಸುವ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಿಂದ ಇದೆಲ್ಲಾ ಸಾಧ್ಯವಾಗಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.

“ಭಾರತದ ಆಟೋಮೊಬೈಲ್ ಉದ್ಯಮವು ಈಗಾಗಲೇ ಜಾಗತಿಕವಾಗಿ 3ನೇ ಅತಿ ದೊಡ್ಡ ಉದ್ಯಮವಾಗಿ ಬೆಳೆದಿದೆ. ಸುಧಾರಿತ ವಾಹನ ತಂತ್ರಜ್ಞಾನ ಅಳವಡಿಕೆಯಲ್ಲಿ ಮುಂಚೂಣಿಯಲ್ಲಿದೆ. ಪ್ರಧಾನಿ ಮೋದಿ ಅವರ ಆತ್ಮನಿರ್ಭರ ಭಾರತ್ ಅಡಿಯಲ್ಲಿ ನಾವು ದೇಶೀಯ ಸ್ವಾವಲಂಬನೆಯತ್ತ ಮುನ್ನಡೆಯುತ್ತಿದ್ದೇವೆ. ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಪ್ರಮುಖ ರಫ್ತುದಾರರಾಗಿ ಹೊರಹೊಮ್ಮುತ್ತಿದ್ದೇವೆ ಎಂದು ಸಚಿವರು ಹೇಳಿದರು.

ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯಲ್ಲಿ ಭಾರತ ವೇಗವಾಗಿ ದಾಪುಗಾಲು ಇಡುತ್ತಿದೆ ಎಂದ ಸಚಿವರು; ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ನಾವು ಮುಂದಿನ ಪೀಳಿಗೆಗಳು ಹೆಮ್ಮೆಪಡುವಂತಹ ಭಾರತವನ್ನು ನಿರ್ಮಿಸುತ್ತಿದ್ದೇವೆ. ನಾವು ಪರಿಸರಪೂರಕ ಉಪಕ್ರಮಗಳನ್ನು ಬೆಂಬಲಿಸೋಣ ಮತ್ತು ಸ್ವಚ್ಛವಾದ, ಹಸಿರು ಭೂಮಿಯನ್ನು ಖಚಿತಪಡಿಸಿಕೊಳ್ಳೋಣ ಎಂದು ಪ್ರತಿಪಾದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments