Homeಕರ್ನಾಟಕಸಚಿವಾಲಯದ ಸಿಬ್ಬಂದಿಗಾಗಿ 2 ದಿನಗಳ ಇವಿ ಮೇಳ: ಇಂಧನ ಸಚಿವ ಕೆ.ಜೆ.ಜಾರ್ಜ್ ಚಾಲನೆ‌

ಸಚಿವಾಲಯದ ಸಿಬ್ಬಂದಿಗಾಗಿ 2 ದಿನಗಳ ಇವಿ ಮೇಳ: ಇಂಧನ ಸಚಿವ ಕೆ.ಜೆ.ಜಾರ್ಜ್ ಚಾಲನೆ‌

ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗಾಗಿ ವಿಧಾನಸೌಧ ಬಳಿ ಹಮ್ಮಿಕೊಂಡಿರುವ ಎರಡು ದಿನಗಳ ವಿಶೇಷ ಇವಿ ಮೇಳ -2025ಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್ ಚಾಲನೆ ನೀಡಿದರು.

ಪರಿಸರ ಸ್ನೇಹಿ ಇಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬೆಸ್ಕಾಂ ಹಾಗೂ ಸಚಿವಾಲಯ ನೌಕರರ ಸಂಘ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮೇಳವನ್ನು ಉದ್ಘಾಟಿಸಿ ಮತನಾಡಿದ ಸಚಿವರು, “ಏರುತ್ತಿರುವ ಪೆಟ್ರೋಲ್ ಬೆಲೆ ಮತ್ತು ವಾಯು ಮಾಲಿನ್ಯ ನಿಯಂತ್ರಣಕ್ಕೆ ಇಲೆಕ್ಟ್ರಿಕ್ ವಾಹನಗಳು ಪರಿಹಾರವಾಗಿದೆ” ಎಂದರು.

“ಇವಿ ಬಳಕೆ ಉತ್ತೇಜಿಸಲು ಚಾರ್ಜಿಂಗ್ ಕೇಂದ್ರಗಳು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ಕರ್ನಾಟಕ ಮಾದರಿಯಾಗಿದೆ. ದೇಶದಲ್ಲಿ 2017ರಲ್ಲೇ ಇವಿ ನೀತಿ ಘೋಷಿಸುವ ಮೂಲಕ ಕರ್ನಾಟಕವು ದೇಶದಲ್ಲೇ ಮೊದಲ ರಾಜ್ಯವಾಗಿದೆ. 2017ರಲ್ಲಿ ವಾರ್ಷಿಕ 11 ಸಾವಿರದಷ್ಟಿದ್ದ ಇಲೆಕ್ಟ್ರಿಕ್ ವಾಹನಗಳ ನೋಂದಣಿ ಪ್ರಸ್ತುತ ಅಂದಾಜು ವಾರ್ಷಿಕ 1,50,000ಕ್ಕೆ ಏರಿದೆ. ಇದು ನಮ್ಮ ಇವಿ ನೀತಿಗೆ ಸ್ಪಷ್ಟ ಪುರಾವೆಯಾಗಿದೆ” ಎಂದು ಅಭಿಪ್ರಾಯಪಟ್ಟರು.

“ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಇಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಕೇಂದ್ರ ಸ್ಥಾಪಿಸುವಲ್ಲಿ ಕರ್ನಾಟಕದೇಶದಲ್ಲೇ ಮೊದಲ ಸ್ಥಾನದಲ್ಲಿದ್ದು, ಒಟ್ಟು 5,765 ಚಾರ್ಜಿಂಗ್‌ ಸ್ಟೇಷನ್‌ಗಳನ್ನುಸ್ಥಾಪಿಸಲಾಗಿದೆ. ಇದರಲ್ಲಿ ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಅಂದರೆ 4,462 ಚಾರ್ಜಿಂಗ್ ಕೇಂದ್ರಗಳಿದೆ. ಇದು ಇಂಧನ ಇಲಾಖೆ ಇವಿಗಳಿಗೆ ನೀಡುತ್ತಿರುವ ಪ್ರೋತ್ಸಾಹದ ಸಂಕೇತವಾಗಿದೆ” ಎಂದರು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮಾತನಾಡಿ, ” ‌ಸಚಿವಾಲಯದ ನೌಕರರು ಶುದ್ಧ ಇಂಧನದ ಬಳಕೆಗೆ ಒತ್ತು ನೀಡಲಿ ಎಂಬ ಉದ್ದೇಶದಿಂದ ಇವಿ ಮೇಳ ಆಯೋಜಿಸಲಾಗಿದೆ. ಇವಿ ಬಳಸುವ ಮೂಲಕ ಅವರು ಇತರರಿಗೂ ಮಾದರಿಯಾಗಲಿ” ಎಂದು ಹೇಳಿದರು.

“ನಮ್ಮ ಸಚಿವಾಲಯದ ನೌಕರರು ಇವಿ ವಾಹನಗಳನ್ನು ಖರೀದಿಸಲು ಇವಿ ತಯಾರಕರು ವಿಶೇಷ ರಿಯಾಯಿತಿ ನೀಡಿದ್ದರೆ, ಬ್ಯಾಂಕಿನವರು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ಮುಂದೆ ಬಂದಿದ್ದಾರೆ” ಎಂದರು.

ಇಂಧನ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಗುಪ್ತ ಮಾತನಾಡಿ, “ಪರಿಸರ ಸ್ನೇಹಿ ಇವಿಗಳನ್ನು ಸಚಿವಾಲಯ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಬಳಸಬೇಕು ಎಂಬ ಉದ್ದೇಶದಿಂದ ಇವಿ ಮೇಳ ಆಯೋಜಿಸಲಾಗಿದೆ. ಇವಿ ಮಾರಾಟಗಾರರು ವಿಶೇಷ ರಿಯಾಯಿತಿಗಳ್ನು ನೀಡುತ್ತಿದ್ದಾರೆ. ಎಲ್ಲರೂ ಇದರ ಸದುಪಯೋಗಪಡೆದುಕೊಳ್ಳಿ” ಎಂದು ಹೇಳಿದರು.

“ರಾಜ್ಯದಲ್ಲಿ ಇವಿ ಚಾರ್ಜಿಂಗ್ ಮೂಲ ಸೌಕರ್ಯವನ್ನು ಕಲ್ಪಿಸುವ ನೋಡಲ್ ಏಜನ್ಸಿಯಾಗಿರುವ ಬೆಸ್ಕಾಂ, ಇವಿ ಚಾರ್ಜಿಂಗ್ ಸಂಪರ್ಕ ಜಾಲವನ್ನು ವಿಸ್ತರಿಸುವ ಮತ್ತು ನಿರ್ವಹಿಸುವ ಜವಾಬ್ದಾರಿಯನ್ನು ನಿಭಾಯಿಸುತ್ತಿದೆ. ಮೂಲ ಸೌಕರ್ಯವನ್ನು ಹೆಚ್ಚಿಸಲು ಬೆಸ್ಕಾಂನ ಪ್ರಯತ್ನಗಳು ಇಲೆಕ್ಟ್ರಿಕ್ ವಾಹನಗಳ ಹೆಚ್ಚಳಕ್ಕೆ ಕಾರಣವಾಗಿವೆ‌‌”, ಎಂದು ತಿಳಿಸಿದರು.

ಬೆಸ್ಕಾಂ ವ್ಯವಸ್ಥಾಪಕ‌ ನಿರ್ದೇಶಕ ಮಹಾಂತೇಶ ಬೀಳಗಿ ಮಾತನಾಡಿ, “ಇಂಧನ ಸಚಿವ ಕೆ.ಜೆ.ಜಾರ್ಜ್ ಮತ್ತು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ನಿರ್ದೇಶನದ ಮೇರೆಗೆ ಸಚಿವಾಲಯದ ನೌಕರರಿಗೆ ಶುಕ್ರವಾರ ಮತ್ತು ಶನಿವಾರ ವಿಶೇಷ ಇವಿ ಮೇಳ-2025 ಆಯೋಜಿಸಲಾಗಿದೆ. ಇಲೆಕ್ಟ್ರಿಕ್ ವಾಹನಗಳಿಗೆ ರಸ್ತೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಈ ಮೇಳದಲ್ಲಿ ಸಚಿವಾಲಯ ಉದ್ಯೋಗಿಗಳು ಯಾವುದೇ ಡೌನ್ ಪೇಮೆಂಟ್ ಇಲ್ಲದೆ ಮತ್ತು ಕಡಿಮೆ ಬಡ್ಡಿ ದರದ ಸಾಲ ಸೌಲಭ್ಯದೊಂದಿಗೆ ವಾಹನ ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ. ಮೇಳದಲ್ಲಿ 16 ಇವಿ ಕಂಪನಿಗಳು ಭಾಗವಹಿಸಿದ್ದು, ಈ ರಿಯಾಯಿತಿ ಮಾರಾಟ ಮುಂದುವರಿಯಲಿದೆ”, ಎಂದು ಹೇಳಿದರು.

ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗ ಮಾತನಾಡಿ, “ಸಚಿವಾಲಯದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ನೆರವಾಗಲು ಬೆಸ್ಕಾಂ ಸಹಯೋಗದೊಂದಿಗೆ ಈ ಮೇಳ ಆಯೋಜಿಸಲಾಗಿದೆ. ಸಚಿವಾಲಯ ಉದ್ಯೋಗಿಗಳಲ್ಲಿ ಶೇ. 5 ರಷ್ಟು ಮಂದಿ ಇವಿ ದ್ವಿಚಕ್ರ ವಾಹನಗಳನ್ನು ಹೊಂದಿದ್ದಾರೆ. ಈ ಮೇಳದ ಮಲಕ ಇತರೂ ಇವಿ ವಾಹನಗಳನ್ನು ಖರೀದಿಸಬೇಕು”, ಎಂದು ಹೇಳಿದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ನಿರ್ದೇಶಕ ತಾಂತ್ರಿಕ ರಮೇಶ್ ಎಚ್.ಜೆ., ಬೆಸ್ಕಾಂ ಪ್ರಧಾನ ವ್ಯವಸ್ಥಾಪಕ ಎಚ್‌.ಆರ್.ದಯಾನಂದ್, ಬೆಸ್ಕಾಂ ಮತ್ತು ಸಚಿವಾಲಯದ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ಮೇಳದ ವಿಶೇಷತೆ
ಮೇಳದಲ್ಲಿ ಒಟ್ಟು 18 ಮಳಿಗೆಗಳಿದ್ದು,ಅವುಗಳಲ್ಲಿ ಕಾರ್ ಗಳಿಗೆ ಸಂಬಂಧಿಸಿದ ನಾಲ್ಕು ಮತ್ತು ದ್ವಿಚಕ್ರ ವಾಹನಗಳಿಗೆ ಸಂಬಂಧಿಸಿದ 15 ಮಳಿಗೆಗಳಿವೆ. ಇದಲ್ಲದೆ ಎರಡು ಬ್ಯಾಂಕ್ ಗಳು, ಬೆಸ್ಕಾಂನ ಒಂದು ಮಳಿಗೆಗಳಿವೆ .ಎರಡು ದಿನಗಳಲ್ಲಿ 5,000 ಜನರು ವೀಕ್ಷಿಸುವ ನಿರೀಕ್ಷೆಯಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments