ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಸರಕಾರವಾಗಿದ್ದು, ಹುಬ್ಬಳ್ಳಿಯಲ್ಲಿ 31 ವರ್ಷದ ಹಳೆಯ ಕೇಸನ್ನು ರೀ ಓಪನ್ ಮಾಡಿ ಹಿಂದೂ ಕಾರ್ಯಕರ್ತ ಶ್ರೀಕಾಂತ ಪೂಜಾರಿಯವರನ್ನು ಬಂಧಿಸಿದ್ದನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, “ತಾನು ಹಿಂದೂ ವಿರೋಧಿ ಎಂಬುದನ್ನು ಈ ಸರಕಾರವು ರಾಜ್ಯ ಮತ್ತು ದೇಶದ ಜನತೆಗೆ ಪದೇಪದೇ ನೆನಪು ಮಾಡುವ ಕೆಲಸ ಮಾಡುತ್ತಿದೆ” ಎಂದರು.
“ಜನವರಿ 22ರಂದು ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಪ್ರತಿಷ್ಠಾಪನೆ ಆಗುವ ಶುಭ ಸಂದರ್ಭದಲ್ಲಿ ಇಡೀ ರಾಜ್ಯ ಮಾತ್ರವಲ್ಲದೆ ದೇಶದಾದ್ಯಂತ ಕೋಟ್ಯಂತರ ಹಿಂದೂ ಕಾರ್ಯಕರ್ತರು ಸಂತಸದಲ್ಲಿದ್ದಾರೆ; ದೇಶದೆಲ್ಲೆಡೆ ಸಂಭ್ರಮದ ವಾತಾವರಣ ಇದೆ. ಇಂತಹ ಸಂದರ್ಭವನ್ನು ಆಯ್ಕೆ ಮಾಡಿಕೊಂಡು ಕೈಗೊಂಡ ಕ್ರಮದ ಮೂಲಕ ತಮ್ಮದು ಹಿಂದೂ ವಿರೋಧಿ ಸರಕಾರ ಎಂದು ದೇಶಕ್ಕೇ ತೋರಿಸಿಕೊಟ್ಟಿದ್ದಾರೆ” ಎಂದು ಟೀಕಿಸಿದರು.
“ಹಳೆಯ ಕೇಸನ್ನು ಮತ್ತೆ ಓಪನ್ ಮಾಡಿ ಶ್ರೀಕಾಂತ ಪೂಜಾರಿಯವರನ್ನು ಬಂಧಿಸಿರುವುದು ಖಂಡನೀಯ. ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಬುಧವಾರ ರಾಜ್ಯಾದ್ಯಂತ ಹೋರಾಟ ಮಾಡಲು ಕರೆ ನೀಡುತ್ತಿದ್ದೇವೆ. ಬೆಂಗಳೂರಿನ ಫ್ರೀಡಂ ಪಾರ್ಕ್ ಮಾತ್ರವಲ್ಲದೆ, ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ” ಎಂದು ಪ್ರಕಟಿಸಿದರು.
ದುಸ್ಸಾಹಸಕ್ಕೆ ಕೈಹಾಕಿದ ಸಿಎಂ
ದೇಶವೇ ಸಂಭ್ರಮದಲ್ಲಿ ಇರುವಾಗ ರಾಮಭಕ್ತನನ್ನು ಬಂಧಿಸುವುದಾದರೆ ನಿಮಗೆಷ್ಟು ಧೈರ್ಯ? ಕಾನೂನು- ಸುವ್ಯವಸ್ಥೆಗೆ ಭಂಗ ತರುವ ದುಸ್ಸಾಹಸಕ್ಕೆ ಮುಖ್ಯಮಂತ್ರಿಗಳೇ ಕೈ ಹಾಕುತ್ತಿದ್ದಾರೆ. ರಾಜ್ಯ ಸರಕಾರಕ್ಕೆ ಆದ್ಯತೆ ಯಾವುದು? ಸಂದರ್ಭ ಮತ್ತು ನಿಮ್ಮ ಉದ್ದೇಶ ಏನು? ತಪ್ಪು ಮಾಡಿದ್ದಾರೆ ಅಥವಾ ಇಲ್ಲವೇ ಎಂದು ನೀವು ತೀರ್ಮಾನ ಮಾಡುವುದಲ್ಲ; 31 ವರ್ಷ ಹಳೆಯ ಕೇಸನ್ನು ಈಗಲೇ ರೀ ಓಪನ್ ಮಾಡಬೇಕಿತ್ತೇ? ಮುಂದೆ ನಡೆಯುವ ಘಟನೆಗೆ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರೇ ಹೊಣೆಗಾರರಾಗುತ್ತಾರೆ” ಎಂದು ಎಚ್ಚರಿಸಿದರು.
“ಹಿಂದೂಗಳು, ಹಿಂದೂ ಕಾರ್ಯಕರ್ತರ ಭಾವನೆಗೆ ಧಕ್ಕೆ ತರುವುದರಲ್ಲಿ ಇವರು ನಿಸ್ಸೀಮರು. ಹಿಂದೂಗಳಿಗೆ ನೋವು ಕೊಡುವುದರಲ್ಲಿ ಕಾಂಗ್ರೆಸ್ಸಿಗರಿಗೆ ಎಲ್ಲಿಲ್ಲದ ಸಂತೋಷ” ಎಂದು ಟೀಕಿಸಿದರು.