Homeಕರ್ನಾಟಕವೀರಶೈವ ಲಿಂಗಾಯತ ಸಮಾವೇಶ | ಸ್ಟಾರ್ ಚಂದ್ರು ಬೆಂಬಲಿಸಲು ಸಚಿವ ಎಂ ಬಿ ಪಾಟೀಲ್ ಕರೆ

ವೀರಶೈವ ಲಿಂಗಾಯತ ಸಮಾವೇಶ | ಸ್ಟಾರ್ ಚಂದ್ರು ಬೆಂಬಲಿಸಲು ಸಚಿವ ಎಂ ಬಿ ಪಾಟೀಲ್ ಕರೆ

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಬಸವ ತತ್ವದ ಆಧಾರದ ಮೇಲೆ ಆಡಳಿತ ನಡೆಸುತ್ತಿದೆ. ಹಾಗಾಗಿ ವೀರಶೈವ- ಲಿಂಗಾಯತ ಸಮುದಾಯ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಲಿದೆ ಎಂದು ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹೇಳಿದರು.

ಮಂಡ್ಯ ನಗರದ ಕನಕ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಬೆಂಬಲಿತ ವೀರಶೈವ-ಲಿಂಗಾಯತ ಸಮಾಜ ಸಭೆ ಉದ್ಘಾಟಿಸಿ ಮಾತನಾಡಿದ ಅವರು, “ಬಿಜೆಪಿ ಸಮಾನತೆಯ ಹರಿಕಾರ ಬಸವಣ್ಣನವರ ತತ್ವ ಸಿದ್ಧಾಂತವನ್ನು ಎಂದಿಗೂ ಒಪ್ಪುವುದಿಲ್ಲ; ಅಷ್ಟೇ ಅಲ್ಲದೆ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂಬುದನ್ನೂ ಆ ಪಕ್ಷ ಒಪ್ಪುವುದಿಲ್ಲ. ಆದರೆ, ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರ ಸಂವಿಧಾನ ಮತ್ತು ಬಸವಣ್ಣನವರ ಸಿದ್ಧಾಂತದ ಮೇಲೆ ಹೆಚ್ಚಿನ ನಂಬಿಕೆ ಇಟ್ಟಿದೆ” ಎಂದು ವಿವರಿಸಿದರು.

“ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋತ ಹಿನ್ನೆಲೆಯಲ್ಲಿ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಆ ಪಕ್ಷ ರಾಜ್ಯಾಧ್ಯಕ್ಷರನ್ನಾಗಿ ಮಾಡಿದೆ. ವೀರಶೈವ-ಲಿಂಗಾಯತ ಸಮುದಾಯ ಓಲೈಕೆ ಮಾಡಲು ಈ ತಂತ್ರ ಮಾಡಿರುವ ಬಿಜೆಪಿ ವರಿಷ್ಠರು ವಿಜಯೇಂದ್ರ ಅವರ ಅವಧಿಯನ್ನು ಕೇವಲ 3 ವರ್ಷ ಮಾತ್ರ ನಿಗದಿಗೊಳಿಸಿದ್ದಾರೆ” ಎಂದರು.

“ಮುಂದಿನ ಅಸೆಂಬ್ಲಿ ಚುನಾವಣೆ ಹೊತ್ತಿಗೆ ಅವರು ಆ ಸ್ಥಾನದಲ್ಲಿ ಇರುವುದಿಲ್ಲ. ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಆ ಪಕ್ಷದ ಅಧ್ಯಕ್ಷ ಸ್ಥಾನವು ಲಿಂಗಾಯತ ಸಮುದಾಯದ ಕೈತಪ್ಪಲಿದೆ. ಆದರೆ ಕಾಂಗ್ರೆಸ್ ಪಕ್ಷ ಸಮುದಾಯದ ಹೆಚ್ಚಿನವರನ್ನು ಮುಖ್ಯಮಂತ್ರಿಯಾಗಲು ಅವಕಾಶ ಕಲ್ಪಿಸಿದೆ” ಎಂದು ಪಾಟೀಲ್ ನುಡಿದರು.

“ಈ ಹಿಂದೆ 20-20 ತಿಂಗಳ ಅಧಿಕಾರ ಹಂಚಿಕೆ ಸೂತ್ರದಂತೆ ಮುಖ್ಯಮಂತ್ರಿಯಾದ ಎಚ್.ಡಿ.ಕುಮಾರಸ್ವಾಮಿ 20 ತಿಂಗಳು ಆಡಳಿತ ನಡೆಸಿದ ಬಳಿಕ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಧಿಕಾರ ವಹಿಸಿಕೊಳ್ಳಲು ಬಿಡದೆ ವಂಚಿಸಿದ್ದನ್ನು ವೀರಶೈವ- ಲಿಂಗಾಯತರು ಮರೆತಿಲ್ಲ. ಈ ರೀತಿಯಲ್ಲಿ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಿ, ಈಗ ಯಡಿಯೂರಪ್ಪನವರನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವ ಕುಮಾರಸ್ವಾಮಿ ಅವರಿಗೆ ಈ ಬಾರಿ ಮಂಡ್ಯ ಜನರು ತಕ್ಕ ಪಾಠ ಕಲಿಸಲಿದ್ದಾರೆ” ಎಂದು ಗುಡುಗಿದರು.

ಕೃಷಿ ಸಚಿವ ಚಲುವರಾಯಸ್ವಾಮಿ‌ ಮಾತನಾಡಿ, “ಮಂಡ್ಯ ಜಿಲ್ಲೆಯ ಜನರು ಮರೆಯದಿರುವಂತಹ ಯಾವುದಾದರೂ ಕೊಡುಗೆಯನ್ನು ಎಚ್.ಡಿ.ಕುಮಾರಸ್ವಾಮಿ ನೀಡಿದ್ದಾರಾ? ನಿಜವಾಗಲೂ ಅವರ ಕೊಡುಗೆ ದೊಡ್ಡ ಶೂನ್ಯ. ಇಲ್ಲಸಲ್ಲದ ಸುಳ್ಳು ಭರವಸೆಗಳನ್ನು ಹೇಳಿದರೆ ನಂಬಲು ಸಾಧ್ಯವೇ” ಎಂದು ಛೇಡಿಸಿದರು.‌

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments