Homeಕರ್ನಾಟಕವಿಧಾನಸೌಧದ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬ: ಕರ್ನಾಟಕ ರಕ್ಷಣಾ ವೇದಿಕೆಯಿಂದ ತೀವ್ರ ಖಂಡನೆ

ವಿಧಾನಸೌಧದ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬ: ಕರ್ನಾಟಕ ರಕ್ಷಣಾ ವೇದಿಕೆಯಿಂದ ತೀವ್ರ ಖಂಡನೆ

ವಿಧಾನಸೌಧದ ಮೆಟ್ಟಿಲುಗಳ ಮೇಲೆ ರಾಜ್ಯ ಸರ್ಕಾರವು ಉರ್ದು ಹಬ್ಬ ಆಯೋಜಿಸುವ ನಿರ್ಧಾರ ತೆಗೆದುಕೊಂಡಿದೆ ಎಂಬ ಮಾಧ್ಯಮ ವರದಿಗಳನ್ನು ಗಮನಿಸಿದ ಕರ್ನಾಟಕ ರಕ್ಷಣಾ ವೇದಿಕೆ ಇದನ್ನು ಅವಿವೇಕದ, ಅಪ್ರಬುದ್ಧ ಮತ್ತು ದುರಹಂಕಾರದ ನಡೆ ಎಂದು ತೀವ್ರವಾಗಿ ಖಂಡಿಸಿದೆ.

“ಏನು ಮಾಡಿದರೂ ನಡೆಯುತ್ತದೆ ಎಂಬ ಅಧಿಕಪ್ರಸಂಗದ ನಿಲುವು ಇದು. ಸರ್ಕಾರವೇ ಮುಂದೆ ನಿಂತು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡಲು ನಿಂತಂತೆ ಕಾಣುತ್ತಿದೆ. ಈ ಕಾರ್ಯಕ್ರಮ ನಡೆಯಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ.” ಎಂದು ಸಂಘಟನೆ ಹೇಳಿದೆ.

“ಸರ್ಕಾರಕ್ಕೆ ಮಾಡಲು ಬೇಕಾದಷ್ಟು ಕೆಲಸಗಳಿವೆ. ಅವುಗಳನ್ನು ಅದು ಮಾಡಲಿ. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬದ ತಲೆಹರಟೆ ನಿರ್ಧಾರ ಎಲ್ಲಿಂದ ಬಂತು? ಯಾರು ಕೇಳಿದ್ದರು? ಸ್ಪಷ್ಟವಾಗಿ ಹೇಳುವುದಾದರೆ ಕನ್ನಡಿಗರ ಮೇಲೆ ಉರ್ದು ಭಾಷಿಕರನ್ನು, ಉರ್ದು ಭಾಷಿಕರ ಮೇಲೆ ಕನ್ನಡಿಗರನ್ನು ಎತ್ತಿಕಟ್ಟುವ ಹುನ್ನಾರ ಇದು. ಹಿಂದೆ ಉರ್ದು ವಾರ್ತೆ ಸಂಬಂಧ ನಡೆದ ಕೋಮುಗಲಭೆಯನ್ನು ಸರ್ಕಾರ ಮರೆತಿದೆಯೇ? ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಳ್ಳುವುದು ಎಂದರೆ ಇದೇ ಅಲ್ಲವೇ?” ಎಂದು ಕರ್ನಾಟಕ ರಕ್ಷಣಾ ವೇದಿಕೆಯು ಪ್ರಶ್ನಿಸಿದೆ.

“ವಿಧಾನಸೌಧದ ಮುಂದೆ ಉರ್ದು ಹಬ್ಬ ಮಾಡಿದ ನಂತರ ಉರ್ದು ನುಡಿಯ ಮಗಳ ಸ್ಥಾನದಲ್ಲಿರುವ ಹಿಂದಿ ಹಬ್ಬ ಮಾಡುತ್ತಾರೆ, ನಂತರ ತಮಿಳು ಹಬ್ಬ, ತೆಲುಗು ಹಬ್ಬ, ಮರಾಠಿ ಹಬ್ಬ ಎಲ್ಲ ಮಾಡಿ ಕೊನೆಗೆ ಕರ್ನಾಟಕವನ್ನು ಕನ್ನಡೇತರರಿಗೆ ಮಾರಾಟ ಮಾಡಿಬಿಡುತ್ತಾರೆ.” ಎಂದು ಎಚ್ಚರಿಕೆ ನೀಡಿದೆ.

ಕರ್ನಾಟಕ ರಕ್ಷಣಾ ವೇದಿಕೆಯು ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಉದ್ದೇಶಿಸಿ “ಅವರು ಕೂಡಲೇ ಈ ಉರ್ದು ಹಬ್ಬದ ಹುಚ್ಚಾಟವನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ನಾವೇ ಈ ಸರ್ಕಾರಕ್ಕೆ ಚಳಿ ಬಿಡಿಸಬೇಕಾಗುತ್ತದೆ. ಇಂಥ ವಿವಾದ ಸೃಷ್ಟಿಸುವ ಮೂಲಕ ರಾಜ್ಯದಲ್ಲಿ ಕೋಮುಗಲಭೆಗೆ ಸಂಚು ರೂಪಿಸಿರುವವರನ್ನು ಸರ್ಕಾರ ದೂರ ಇಡಬೇಕು.” ಎಂದು ಹೇಳಿದೆ.

“ನಾವು ಉರ್ದು ಸೇರಿದಂತೆ ಯಾವುದೇ ಭಾಷೆಯ ವಿರೋಧಿಗಳಲ್ಲ. ಉರ್ದು ಹಬ್ಬ ಮಾಡಲು ಬೆಂಗಳೂರಿನಲ್ಲಿ ಬೇಕಾದಷ್ಟು ಜಾಗಗಳಿವೆ. ನಾಡಿನ ಶಕ್ತಿಸೌಧ ವಿಧಾನಸೌಧವೇ ಬೇಕಾಗಿಲ್ಲ. ರಾಜ್ಯ ಸರ್ಕಾರವೇ ಮುಂದೆ ನಿಂತು ನಾಡಿನ ನೆಮ್ಮದಿಯನ್ನು, ಸೌಹಾರ್ದವನ್ನು ಹಾಳುಗೆಡವಲು ನಿಂತರೆ ನಾವು ಸುಮ್ಮನಿರುವುದಿಲ್ಲ. ಸರ್ಕಾರ ಏನಾದರೂ ತಾನು ಮಾಡಿದ್ದೆ ಸರಿ ಎಂದು ದುಸ್ಸಾಹಸಕ್ಕೆ ಇಳಿದರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ.” ಎಂದು ಸಂಘಟನೆ ಹೇಳಿದೆ.

ಸಚಿವ ಯು.ಟಿ. ಖಾದರ್ ಅವರು ನವೆಂಬರ್ 9ರಂದು ಉರ್ದು ದಿನದ ಅಂಗವಾಗಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ ‘ಉರ್ದು ಹಬ್ಬ’ ಆಯೋಜಿಸಲಾಗುವುದು ಎಂದು ಘೋಷಿಸಿದ್ದು, ಇದು ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರದ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮವಾಗಿದೆ. ಈ ನಿರ್ಧಾರವನ್ನು ಕನ್ನಡಪರ ಸಂಘಟನೆಗಳು ತೀವ್ರವಾಗಿ ವಿರೋಧ ಮಾಡುತ್ತವೆ ಎಂದು ವೇದಿಕೆಯು ಸ್ಪಷ್ಟಪಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments