Homeಕರ್ನಾಟಕಖಾಸಗಿ ಕ್ಷೇತ್ರದ ಪರಿಣತಿಯೊಂದಿಗೆ ಪ್ರವಾಸೋದ್ಯಮ ಇಲಾಖೆಯ ಹೋಟೆಲ್‌ಗಳ ಉನ್ನತೀಕರಣ: ಸಚಿವ ಕೆ ಜೆ ಜಾರ್ಜ್

ಖಾಸಗಿ ಕ್ಷೇತ್ರದ ಪರಿಣತಿಯೊಂದಿಗೆ ಪ್ರವಾಸೋದ್ಯಮ ಇಲಾಖೆಯ ಹೋಟೆಲ್‌ಗಳ ಉನ್ನತೀಕರಣ: ಸಚಿವ ಕೆ ಜೆ ಜಾರ್ಜ್

– ನಂದಿಗಿರಿಧಾಮದಲ್ಲಿ ಕೆಎಸ್‌ಟಿಡಿಸಿಯ ನೂತನ ‘ಮಯೂರ ಸನ್‌ರೈಸ್ ರೆಸ್ಟೋರೆಂಟ್’ ಉದ್ಘಾಟನೆ
– ಸರ್ಕಾರಿ ಆತಿಥ್ಯ ಕ್ಷೇತ್ರಕ್ಕೆ ವೃತ್ತಿಪರ ಆತಿಥ್ಯ ನಿರ್ವಹಣೆಯ ಅತ್ಯುತ್ತಮ ಪದ್ಧತಿಗಳ ಅಳವಡಿಕೆ
– ಮಧ್ಯಮ ವರ್ಗದ ಪ್ರವಾಸಿಗರಿಗೂ ಕೈಗೆಟಕುವ ದರದಲ್ಲಿ ಗುಣಮಟ್ಟದ ಆತಿಥ್ಯ ಒದಗಿಸುವ ಗುರಿ
– ನಂದಿಬೆಟ್ಟದ ಸಂಚಾರ ದಟ್ಟಣೆಗೆ ರೋಪ್‌ವೇ ಹಾಗೂ ಸಮಗ್ರ ಪಾರ್ಕಿಂಗ್ ಯೋಜನೆ

ರಾಜ್ಯದ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಜಾಗತಿಕ ಗುಣಮಟ್ಟಕ್ಕೆ ಏರಿಸುವ ಉದ್ದೇಶದಿಂದ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯಲ್ಲಿರುವ ಮಯೂರ ಹೋಟೆಲ್‌ಗಳು ಹಾಗೂ ಇತರೆ ಆತಿಥ್ಯ ಕೇಂದ್ರಗಳನ್ನು ಖಾಸಗಿ ಆತಿಥ್ಯ ಕ್ಷೇತ್ರದ ಪರಿಣತಿ ಮತ್ತು ಅತ್ಯುತ್ತಮ ನಿರ್ವಹಣಾ ಪದ್ಧತಿಗಳನ್ನು ಅಳವಡಿಸಿಕೊಂಡು ಹಂತ ಹಂತವಾಗಿ ಉನ್ನತೀಕರಿಸಲಾಗುವುದು ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ಅವರು ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿಧಾಮದಲ್ಲಿ ಕೆಎಸ್‌ಟಿಡಿಸಿಯಿಂದ ನಿರ್ಮಿಸಲಾದ ನೂತನ ‘ಮಯೂರ ಸನ್‌ರೈಸ್ ರೆಸ್ಟೋರೆಂಟ್’ ಉದ್ಘಾಟಿಸಿ ಮಾತನಾಡಿದರು.

ರಾಜ್ಯದ ಅತ್ಯಂತ ಸುಂದರ ಹಾಗೂ ಪ್ರಮುಖ ಪ್ರವಾಸಿ ತಾಣಗಳಲ್ಲಿ ಕೆಎಸ್‌ಟಿಡಿಸಿ ಹಾಗೂ ಜಂಗಲ್ ಲಾಡ್ಜ್‌ಸ್ ಆ್ಯಂಡ್ ರೆಸಾರ್ಟ್ಸ್ ಆಸ್ತಿಗಳಿದ್ದರೂ, ಅವುಗಳ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವ ಅಗತ್ಯವಿದೆ. ಉತ್ತಮ ನಿರ್ವಹಣೆ, ಆಧುನಿಕ ಸೌಲಭ್ಯಗಳು, ವೃತ್ತಿಪರ ಆತಿಥ್ಯ ಸೇವೆಗಳು ಹಾಗೂ ಅಂತರರಾಷ್ಟ್ರೀಯ ಮಟ್ಟದ ಕಾರ್ಯಾಚರಣಾ ಪದ್ಧತಿಗಳನ್ನು ಅಳವಡಿಸುವ ಮೂಲಕ ಈ ಆಸ್ತಿಗಳಿಗೆ ಹೊಸ ಮೆರುಗು ನೀಡಲಾಗುವುದು ಎಂದು ಸಚಿವರು ಹೇಳಿದರು.

ಚಿಕ್ಕಮಗಳೂರಿನಲ್ಲಿ ಪ್ರವಾಸೋದ್ಯಮ ಇಲಾಖೆ ಮತ್ತು ತಾಜ್ ಸಂಸ್ಥೆಯ ಸಹಯೋಗದ ಅನುಭವವು ಸರ್ಕಾರಿ ಆತಿಥ್ಯ ಕ್ಷೇತ್ರದಲ್ಲಿ ವೃತ್ತಿಪರ ನಿರ್ವಹಣೆಯ ಮಹತ್ವವನ್ನು ತೋರಿಸಿದೆ. ಇದೇ ಅನುಭವದ ಆಧಾರದ ಮೇಲೆ ರಾಜ್ಯದ ಇತರೆ ಪ್ರಮುಖ ಪ್ರವಾಸಿ ತಾಣಗಳಲ್ಲಿರುವ ಮಯೂರ ಹೋಟೆಲ್‌ಗಳು ಮತ್ತು ಪ್ರವಾಸೋದ್ಯಮ ಇಲಾಖೆಯ ಆಸ್ತಿಗಳಲ್ಲಿ ಖಾಸಗಿ ಆತಿಥ್ಯ ಕ್ಷೇತ್ರದ ಅತ್ಯುತ್ತಮ ಕಾರ್ಯಪದ್ಧತಿಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

“ಪ್ರೀಮಿಯಂ ಆತಿಥ್ಯ ಸೇವೆಗಳು ಕೇವಲ ಐಷಾರಾಮಿ ಪ್ರವಾಸಿಗರಿಗೆ ಮಾತ್ರ ಸೀಮಿತವಾಗಬಾರದು. ಉತ್ತಮ ಗುಣಮಟ್ಟದ ವಸತಿ, ಆಹಾರ ಹಾಗೂ ಸೇವೆಗಳು ಮಧ್ಯಮ ವರ್ಗದ ಕುಟುಂಬಗಳಿಗೂ ಕೈಗೆಟಕುವ ದರದಲ್ಲಿ ದೊರೆಯಬೇಕು. ಪ್ರವಾಸೋದ್ಯಮವನ್ನು ಜನಸ್ನೇಹಿಯಾಗಿ ಹಾಗೂ ಎಲ್ಲರಿಗೂ ಲಭ್ಯವಾಗುವಂತೆ ರೂಪಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ,” ಎಂದು ಸಚಿವರು ಹೇಳಿದರು.

ಮಯೂರ ಹೋಟೆಲ್‌ಗಳ ಉನ್ನತೀಕರಣಕ್ಕೆ ಸಂಬಂಧಿಸಿದಂತೆ ದೇಶದ ಪ್ರಮುಖ ಹೋಟೆಲ್ ಉದ್ಯಮಿಗಳು, ಆತಿಥ್ಯ ಕ್ಷೇತ್ರದ ಪರಿಣಿತರು ಹಾಗೂ ಪ್ರವಾಸೋದ್ಯಮ ತಜ್ಞರನ್ನು ಒಳಗೊಂಡ ಸಲಹಾ ಸಮಿತಿಯನ್ನು ರಚಿಸಲಾಗುವುದು ಎಂದರು.

ಈ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಮಯೂರ ಹೋಟೆಲ್‌ಗಳ ವಿನ್ಯಾಸ, ಕೊಠಡಿ ಸೌಲಭ್ಯಗಳು, ಆಹಾರ ಸೇವೆ, ಕಾರ್ಯಾಚರಣೆ, ಅತಿಥಿ ಸೇವೆ ಹಾಗೂ ನಿರ್ವಹಣಾ ಗುಣಮಟ್ಟವನ್ನು ಹಂತ ಹಂತವಾಗಿ ಉನ್ನತೀಕರಿಸಲಾಗುವುದು. ಹೋಟೆಲ್‌ಗಳ ಮಾಲೀಕತ್ವ ಸರ್ಕಾರದ ಬಳಿಯೇ ಮುಂದುವರಿಯಲಿದ್ದು, ಖಾಸಗಿ ಆತಿಥ್ಯ ಕ್ಷೇತ್ರದ ಪರಿಣತಿಯನ್ನು ಮಾತ್ರ ಬಳಸಿಕೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ನಂದಿಬೆಟ್ಟದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಕುರಿತು ಮಾತನಾಡಿದ ಸಚಿವರು, ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಬೆಟ್ಟದ ಮೇಲ್ಭಾಗಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನು ನಿಯಂತ್ರಿಸಿ, ಕೆಳಭಾಗದಲ್ಲಿಯೇ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಅಭಿವೃದ್ಧಿಪಡಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಹೇಳಿದರು.

ಅಲ್ಲಿಂದ ಪ್ರವಾಸಿಗರ ಸಂಚಾರಕ್ಕಾಗಿ ನಿಯೋಜಿತ ವಾಹನಗಳ ವ್ಯವಸ್ಥೆ ಕಲ್ಪಿಸಲಾಗುವುದು. ಜೊತೆಗೆ, ಬಹುನಿರೀಕ್ಷಿತ ನಂದಿಬೆಟ್ಟ ರೋಪ್‌ವೇ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ಮೂಲಕ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಒದಗಿಸಲಾಗುವುದು ಎಂದು ಅವರು ಹೇಳಿದರು.

ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, “ಸರ್ಕಾರಿ ಆತಿಥ್ಯ ಕ್ಷೇತ್ರದ ಗುರುತನ್ನು ಉಳಿಸಿಕೊಂಡೇ, ಖಾಸಗಿ ಆತಿಥ್ಯ ಕ್ಷೇತ್ರದ ಪರಿಣತಿ, ಸೇವಾ ಗುಣಮಟ್ಟ ಹಾಗೂ ನಿರ್ವಹಣಾ ಕಾರ್ಯಪದ್ಧತಿಗಳನ್ನು ಅಳವಡಿಸಿಕೊಂಡು ಮಯೂರ ಹೋಟೆಲ್‌ಗಳನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುವ ಗುರಿಯನ್ನು ಇಲಾಖೆ ಹೊಂದಿದೆ ಎಂದು ತಿಳಿಸಿದರು.

ನಂದಿಬೆಟ್ಟ ರೋಪ್‌ವೇ ಯೋಜನೆ ಇಲಾಖೆಯ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಯೋಜನೆಗೆ ಅಗತ್ಯವಿರುವ ಅರಣ್ಯ ಇಲಾಖೆಯ ಅನುಮತಿ ಪಡೆಯುವ ಪ್ರಕ್ರಿಯೆಯನ್ನು ವೇಗಗೊಳಿಸಲಾಗಿದ್ದು, ಸಚಿವರ ನಿರ್ದೇಶನದಂತೆ ದೆಹಲಿಯಲ್ಲಿ ವಿಶೇಷ ಸಮನ್ವಯ ವ್ಯವಸ್ಥೆ ರೂಪಿಸಲಾಗಿದೆ. ಅಗತ್ಯ ಅನುಮತಿಗಳನ್ನು ಶೀಘ್ರದಲ್ಲೇ ಪಡೆದು ಯೋಜನೆಯನ್ನು ಅನುಷ್ಠಾನದ ಹಂತಕ್ಕೆ ತರಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಶ್ರೀನಿವಾಸ್, ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಪ್ರವಾಸೋದ್ಯಮ ಇಲಾಖೆ ಆಯುಕ್ತ ಶಿವಪ್ರಸಾದ್ ಪಿ.ಆರ್. ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments