ತುಮಕೂರು ಸಂಸದ ಜಿ ಎಸ್ ಬಸವರಾಜ್ ನನಗೆ ಆತ್ಮೀಯರು. ತುಮಕೂರು ಕ್ಷೇತ್ರಕ್ಕೆ ನಾನು ಬರಬೇಕು ಎಂಬುದು ಅವರ ಅಪೇಕ್ಷೆ. ನಾನು ಸ್ಪರ್ಧೆ ಮಾಡಬೇಕೋ ಅಥವಾ ಬೇಡವೋ ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಬಿಜೆಪಿ ಹಿರಿಯ ನಾಯಕ ವಿ ಸೋಮಣ್ಣ ತಿಳಿಸಿದರು.
ನವದೆಹಲಿಯಲ್ಲಿ ಸೋಮವಾರ ಮಾತನಾಡಿದ ಅವರು, “ಖಾಸಗಿ ಕೆಲಸಕ್ಕಾಗಿ ದೆಹಲಿಗೆ ಬಂದಿದ್ದೇನೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಭೇಟಿಗೂ ಯತ್ನಿಸುತ್ತೇನೆ. ಸಾಧ್ಯವಾದರೆ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗುತ್ತೆನೆ” ಎಂದರು.
“ರಾಜ್ಯಸಭೆಗೆ ಆಯ್ಕೆ ವಿಚಾರ ಪಕ್ಷ ಏನು ಮಾಡುತ್ತೋ ನೋಡಬೇಕು. ನಾನು ಕಳೆದ ಬಾರಿ ದೆಹಲಿಗೆ ಬಂದಾಗಲೇ ಅಭಿಪ್ರಾಯ ತಿಳಿಸಿದ್ದೇನೆ. ಲೋಕಸಭೆಗೆ ಅವಕಾಶ ಸಿಗದಿದ್ದರೂ ಪಕ್ಷದ ಕೆಲಸ ಮಾಡುತ್ತೇನೆ. ಮಾಜಿ ಸಚಿವ ಕೆ.ಸುಧಾಕರ್ ಸ್ಪರ್ಧೆ ಮಾಡುವ ಬಗ್ಗೆ ಮಾಹಿತಿ ಇಲ್ಲ. ಸುಧಾಕರ್ ಏನು ಹೇಳಿದ್ದಾರೆ ಅಂತಲೂ ನನಗೆ ಗೊತ್ತಿಲ್ಲ” ಎಂದು ಹೇಳಿದರು.
ಕುಮಾರಸ್ವಾಮಿ ಭೇಟಿ ವಿಚಾರವಾಗಿ ಮಾತನಾಡಿ, “ಪಕ್ಷ ಬೇರೆ ಇರಬಹುದು, ಆದರೆ ನಾವು ಮೊದಲಿನಿಂದಲೂ ಪರಿಚಯ. ಮೊನ್ನೆ ಅವರ ತೋಟದ ಮನೆಯಲ್ಲಿ ಭೇಟಿ ಆಗಿದ್ದೇನೆ. ಅವರು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದವರು. ಹೀಗಾಗಿ ಸಹಜವಾಗಿ ಮಾತಾಡಿದ್ದೇವೆ. ನಾವು ಇವತ್ತು ಈ ರೀತಿ ಮಾತನಾಡಲು ದೇವೇಗೌಡರು ಕಾರಣ” ಎಂದರು.