ರಾಜ್ಯವನ್ನು ಜಾಗತಿಕ ಮಟ್ಟದ ಉತ್ಪಾದನಾ ಕೇಂದ್ರವನ್ನಾಗಿ ರೂಪಿಸುವ ಉದ್ದೇಶದಿಂದ ಏಪ್ರಿಲ್ ಕೊನೆ ವಾರದಲ್ಲಿ ಎರಡು ದಿನಗಳ ʻಉದ್ಯಮ ಮಂಥನʼ ಕಾರ್ಯಕ್ರಮ ನಡೆಸಲಾಗುವುದು. ಇದರಲ್ಲಿ ಉತ್ಪಾದನಾ ವಲಯದಲ್ಲಿ ಮುಂಚೂಣಿಯಲ್ಲಿರುವ ಉದ್ದಿಮೆಗಳ ಮುಖ್ಯಸ್ಥರನ್ನು ಕರೆದು, ವಿಸ್ತೃತ ಚರ್ಚೆ ನಡೆಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಬುಧವಾರ ತಿಳಿಸಿದ್ದಾರೆ.
ವಿಧಾನಸೌಧದ ತಮ್ಮ ಕಚೇರಿಯಲ್ಲಿ ಈ ಕುರಿತು ತಮ್ಮ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಪ್ರಾಥಮಿಕ ಹಂತದ ಸಭೆ ನಡೆಸಿ ಮಾತನಾಡಿದ ಅವರು, “ಈ ಕಾರ್ಯಕ್ರಮದಲ್ಲಿ ವಿದೇಶಗಳ ಗಣ್ಯ ಉದ್ಯಮಿಗಳು ಮತ್ತು ಹೂಡಿಕೆದಾರರು ಕೂಡ ಭಾಗವಹಿಸಲಿದ್ದಾರೆ. ಇಲ್ಲಿ ತಂತ್ರಜ್ಞಾನ, ಬಂಡವಾಳ ಹೂಡಿಕೆ, ನೀತಿ ನಿರೂಪಣೆಯಲ್ಲಿ ಆಗಬೇಕಾದ ಸುಧಾರಣೆಗಳು ಮತ್ತು ಉದ್ಯಮಗಳಿಗೆ ಒದಗಿಸಬೇಕಾದ ಸೌಲಭ್ಯಗಳನ್ನು ಕುರಿತು ಅಗತ್ಯ ಚರ್ಚೆ ನಡೆಸಲಾಗುವುದು. ಸದ್ಯಕ್ಕೆ ಸೇವಾ ಮಾದರಿಯ ಚಟುವಟಿಕೆಗಳಿಗೆ ಹೆಸರಾಗಿರುವ ರಾಜ್ಯವನ್ನು ಉತ್ಪಾದನಾ ತಾಣವನ್ನಾಗಿ ಮಾಡಬೇಕಾದ ಸವಾಲು ನಮ್ಮ ಮುಂದಿದೆ. ಇದು ಸಾಧ್ಯವಾದರೆ, ರಾಜ್ಯದ ಆರ್ಥಿಕತೆಗೆ ಮತ್ತಷ್ಟು ಬಲ ಬರಲಿದೆ” ಎಂದಿದ್ದಾರೆ.
“ಮುಂದಿನ 6 ತಿಂಗಳಲ್ಲಿ ಕೈಗಾರಿಕಾ ಬೆಳವಣಿಗೆಗೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳು, ಯೋಜನೆಗಳು ಮತ್ತು ಹೂಡಿಕೆ ಆಕರ್ಷಣೆಗೆ ತೆಗೆದುಕೊಳ್ಳಬೇಕಾದ ಉಪಕ್ರಮಗಳನ್ನು ಉದ್ಯಮ ಮಂಥನದ ಆಧಾರದ ಮೇಲೆ ತೆಗೆದುಕೊಳ್ಳಲಾಗುವುದು. ಜತೆಗೆ ಉದ್ಯಮಗಳ ಸ್ಥಾಪನೆಗೆ ಭೂಮಿಯ ಲಭ್ಯತೆ, ಕೈಗಾರಿಕಾ ಮೂಲಸೌಕರ್ಯ ವೃದ್ಧಿಗೆ ಖಾಸಗಿ ಪಾಲುದಾರಿಕೆ, ಪ್ಲಗ್ & ಪ್ಲೇ ಮಾದರಿಯ ಸೌಲಭ್ಯ ಮತ್ತು ಕೆಲಸಗಾರರಿಗೆ ವಸತಿ ಸೌಕರ್ಯಕ್ಕಾಗಿ ಕೈಗಾರಿಕಾ ಡಾರ್ಮಿಟರಿ ಮುಂತಾದ ವಿಚಾರ ಕುರಿತು ಗಮನ ಹರಿಸಲಾಗುವುದು” ಎಂದು ವಿವರಿಸಿದ್ದಾರೆ.
ಅಧಿಕಾರಿಗಳಿಗೆ ತರಬೇತಿ
“ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಅಧಿಕಾರಿ/ಸಿಬ್ಬಂದಿ ವರ್ಗಕ್ಕೆಗೆ ಸಂವಹನ, ಸರಕಾರದ ನೀತಿಗಳು, ಸಾಮಾಜಿಕ ಮಾಧ್ಯಮಗಳು, ಏಕಗವಾಕ್ಷಿ ವ್ಯವಸ್ಥೆ ಇತ್ಯಾದಿಗಳನ್ನು ಕುರಿತು ಎರಡು ಹಂತಗಳಲ್ಲಿ ತರಬೇತಿ ನೀಡಲಾಗುವುದು. ಈ ಸಂಬಂಧ ಈಗಾಗಲೇ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ” ಎಂದು ಹೇಳಿದ್ದಾರೆ.
ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ, ತಾಂತ್ರಿಕ ನಿರ್ದೇಶಕ ರಮೇಶ ಮತ್ತಿತರರು ಸಭೆಯಲ್ಲಿ ಇದ್ದರು.