ಕೊಳೆಗೇರಿ ಎಂದು ಘೋಷಣೆ ಆಗದಿರುವ ಪ್ರದೇಶಗಳಲ್ಲಿ ಜೀವನ ನಡೆಸುತ್ತಿರುವ ಕುಟುಂಬಗಳದು ಒಂದು ಕಥೆ ಆದರೆ ಕೊಳೆಗೇರಿ ಎಂದು ಘೋಷಣೆ ಆಗಿದ್ದರೂ ಮೂಲ ಸೌಕರ್ಯ ಇಲ್ಲದೆ ಬದುಕು ಸಾಗಿಸುತ್ತಿರುವರದು ಇನ್ನೊಂದು ಕಥೆ.
ಕೊಳೆಗೇರಿ ಆಗಿದ್ದರೂ
ಸರ್ಕಾರಿ ಕೆರೆ, ಅರಣ್ಯ ಪ್ರದೇಶ, ಮಳೆ ನೀರು ಹರಿಯುವ ಕಾಲುವೆ, ವಿದ್ಯುತ್ ತಂತಿ ಹಾದು ಹೋಗಿರುವ ಮಾರ್ಗ ದಲ್ಲಿ ವಾಸಿಸುತ್ತಿದ್ದಾರೆ ಎಂಬ ಕಾರಣಕ್ಕೆ ಶಾಶ್ವತ ಸೂರು ಇಲ್ಲದಂತಾಗಿದೆ. ಇನ್ನೂ ವಿಚಿತ್ರ ಎಂದರೆ ಖಾಸಗಿ ಜಾಗದಲ್ಲಿ ಕೊಳೆಗೇರಿ ಸೃಷ್ಟಿ ಆಗಿ ಆ ಪ್ರದೇಶ ಮಂಡಳಿಯ ಸ್ವಾಧೀನಕ್ಕೆ ಬಾರದೆ ನೆಲ ಬಾಡಿಗೆ ಕೊಟ್ಟು ಜೀವನ ಸಾಗಿಸುವಂತಾಗಿದೆ.
ಇಂತಹ ಸಮಸ್ಯೆ ಗೆ ಪರಿಹಾರ ಕಲ್ಪಿಸಲು ಸೂರು ವ್ಯವಸ್ಥೆ ಇಲ್ಲದ ಸುಮಾರು ಮೂರು ಸಾವಿರ ಕುಟುಂಬಗಳಿಗೆ ಶಾಶ್ವತ ಸೂರು ಕಲ್ಪಿಸಲು ಯೋಜನೆ ರೂಪಿಸಲು ವಸತಿ ಸಚಿವ ಜಮೀರ್ ಅಹಮದ್ ಖಾನ್ ಸೂಚನೆ ನೀಡಿದ್ದಾರೆ.
ಕೊಳೆಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ವೆಂಕಟೇಶ್ ಹಾಗೂ ಪ್ರಧಾನ ಅಭಿಯಂತರ ಬಾಲರಾಜು ಅವರ ಜತೆ ಈ ಕುರಿತು ಸಮಾಲೋಚನೆ ನಡೆಸಿ,
ಹತ್ತಾರು ವರ್ಷಗಳಿಂದ ಗುಡಿಸಲು ಹಾಗೂ ಕಚ್ಚಾ ಮನೆಗಳಲ್ಲಿ ವಾಸಿಸುತ್ತಿರುವವರು, ಕೆಲವೆಡೆ ನೆಲ ಬಾಡಿಗೆ ನೀಡಿ ಜೀವನ ಮಾಡುತ್ತಿರುವ ಕುಟುಂಬಗಳಿಗೆ ಸ್ವಂತ ಮನೆ ಕಟ್ಟಿಕೊಡಲು ಪ್ರಸ್ತಾವನೆ ಸಿದ್ದಪಡಿಸಲು ನಿರ್ದೇಶನ ನೀಡಿದ್ದಾರೆ
ಕೊಳೆಗೇರಿ ಎಂದು ಘೋಷಣೆ ಆಗಿದ್ದರೂ ಕೆರೆಯಂಗಳ, ಮಳೆ ನೀರು ಹರಿಯುವ ಕಾಲುವೆ, ವಿದ್ಯುತ್ ತಂತಿ ಹಾದು ಹೋಗಿರುವ ಮಾರ್ಗ, ಅರಣ್ಯ ಪ್ರದೇಶ ಎಂಬ ಕಾರಣಕ್ಕೆ ಮನೆ ಕಟ್ಟಿಕೊಡಲು ಸಾಧ್ಯವಾಗಿಲ್ಲ. ಯಾವುದೇ ಮೂಲ ಸೌಕರ್ಯ ಇಲ್ಲದೆ ಹತ್ತಾರು ವರ್ಷ ಗಳಿಂದ ಸಾವಿರಾರು ಕುಟುಂಬಗಳು ಸಂಕಷ್ಟ ದಲ್ಲಿ ಅಲ್ಲಿ ವಾಸಿಸುತ್ತಿವೆ. ಹೀಗಾಗಿ ಅವರಿಗೆಲ್ಲ ಶಾಶ್ವತ ಸೂರು ಕಲ್ಪಿಸಲು ತೀರ್ಮಾನ ಮಾಡಲಾಗಿದೆ.
ಕೆ. ಆರ್. ಪುರ ಹೋಬಳಿ ಬಿದರಹಳ್ಳಿ ಯಲ್ಲಿ ಎಂಟು ಎಕರೆ ಈಗಾಗಲೇ ಗುರುತಿಸಲಾಗಿದೆ. ಇದೇ ರೀತಿ ನಗರದ ಇತರೆಡೆ ಇರುವ ಸರ್ಕಾರಿ ಜಮೀನು ಪಡೆಯುವ ಬಗ್ಗೆ ಕಂದಾಯ ಸಚಿವರ ಜತೆ ಚರ್ಚಿಸಲಾಗುವುದು. ಅಲ್ಲಿ ಪಡೆದು ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ವಸತಿ ಸಮುಚ್ಚಯ ನಿರ್ಮಿಸಿ ಎಲ್ಲ ಕುಟುಂಬಗಳನ್ನು ಶಿಫ್ಟ್ ಮಾಡಲಾಗುವುದು ಎಂದು ಸಚಿವರು ತಿಳಿಸುತ್ತಾರೆ.
ಶಾಶ್ವತ ಸೂರು ಕಲ್ಪಿಸಿದರೆ ನಾವು ಬೇರೆಡೆ ಶಿಫ್ಟ್ ಆಗಲು ಸಿದ್ದ ಎಂದು ಅಲ್ಲಿನ ನಿವಾಸಿಗಳು ಒಪ್ಪಿಗೆ ನೀಡಿದ್ದಾರೆ. ಹೀಗಾಗಿ ಆದಷ್ಟು ಬೇಗ ಈ ಯೋಜನೆ ಸಂಬಂಧ ಪ್ರಸ್ತಾವನೆ ಸಿದ್ದ ಪಡಿಸಲು ಸೂಚಿಸಲಾಗಿದೆ.
ಕಾಚರಕನಹಳ್ಳಿ ಕೆರೆ ವ್ಯಾಪ್ತಿ,ಗೋವಿಂದರಾಜ ನಗರದ ವಿನಾಯಕ ನಗರ, ಉತ್ತರಹಳ್ಳಿಯ ರಸ್ತೆಯ ಕೊಡಿಪಾಳ್ಯ, ದೊಡ್ಡ ಆಲದ ಮರ ಸಮೀಪದ ಭೀಮನಕುಪ್ಪೆ, ದಾಸರಹಳ್ಳಿ, ಮಹಾಲಕ್ಷ್ಮೀ ಲೇ ಔಟ್, ಬ್ಯಾಟರಾಯನಪುರ ಭಾಗದ ಕೊಳೆಗೇರಿಗಳಲ್ಲಿ ಶೆಡ್, ಗುಡಿಸಲು, ಕಚ್ಚಾ ಮನೆ ಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಇದರಿಂದ ನೆರವಾಗಲಿದೆ ಎಂದು ಹೇಳುತ್ತಾರೆ.