ಬೆಂಗಳೂರು: ಅನುಕಂಪದ ಆಧಾರದಲ್ಲಿ ಕಂದಾಯ ಇಲಾಖೆಯಲ್ಲಿ ನೌಕರಿ ಪಡೆದು ಗ್ರೇಡ್-2 ತಹಶೀಲ್ದಾರ್ ಹುದ್ದೆಗೇರಿದ್ದ ಅಜಿತ್ ಕುಮಾರ್ ರೈ ಈಗ ಸುಮಾರು 500 ಕೋಟಿ ಮೌಲ್ಯದ ಆಸ್ತಿಗಳ ಒಡೆಯ!
ಕೆ.ಆರ್.ಪುರ ತಹಶೀಲ್ದಾರ್ ಹುದ್ದೆಯಲ್ಲಿದ್ದ ಅಜಿತ್ ಕುಮಾರ್ ರೈ ಮತ್ತು ಅವರ ಬೇನಾಮಿಗಳ ಮನೆ, ಕಚೇರಿ ಮತ್ತು ಇತರ ಸ್ಥಳಗಳ ಮೇಲೆ ಬುಧವಾರ ದಾಳಿಮಾಡಿದ್ದ ಲೋಕಾಯುಕ್ತ ಪೊಲೀಸರು, ಎರಡು ದಿನಗಳು ಕಳೆದರೂ ಶೋಧ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ದೊಡ್ಡಬಳ್ಳಾಪುರ, ದೇವನಹಳ್ಳಿ ಮತ್ತು ಕೆ.ಆರ್.ಪುರ ತಾಲ್ಲೂಕುಗಳಲ್ಲಿ 200 ಎಕರೆಗೂ ಹೆಚ್ಚು ಬೇನಾಮಿ ಆಸ್ತಿಗಳು ಪತ್ತೆಯಾಗಿದ್ದು, ವಿಚಾರಣೆಗೆ ಸಹಕರಿಸದ ಅಜಿತ್ ರೈ ಅವರನ್ನು ಗುರುವಾರ ಬೆಳಿಗ್ಗೆ ಬಂಧಿಸಲಾಗಿದೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಅಜಿತ್ ರೈ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಲೋಕಾಯುಕ್ತ ಪೊಲೀಸರು, 11 ಸ್ಥಳಗಳ ಮೇಲೆ ಬುಧವಾರ ಬೆಳಿಗ್ಗೆ ದಾಳಿಮಾಡಿ ಶೋಧ ಆರಂಭಿಸಿದ್ದರು. ಎರಡು ದಿನ ಕಳೆದರೂ ಶೋಧ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಬೇನಾಮಿ ಆಸ್ತಿಗಳ ಖರೀದಿ, ಹಣದ ಮೂಲದ ಕುರಿತು ಉತ್ತರ ನೀಡದೇ ಸತಾಯಿಸುತ್ತಿರುವ ಅಜಿತ್ ರೈ ಅವರನ್ನು ತನಿಖಾ ತಂಡ ಬಂಧಿಸಿದೆ. ಶುಕ್ರವಾರ ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಪುನಃ ತಮ್ಮ ವಶಕ್ಕೆ ನೀಡುವಂತೆ ಮನವಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದೆ.
ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಕೆಲವೇ ಕಿಲೋಮೀಟರ್ ದೂರದಲ್ಲಿ 98 ಎಕರೆಗೂ ಹೆಚ್ಚು ಜಮೀನು ಅಜಿತ್ ರೈ ಅವರ ಬೇನಾಮಿಗಳ ಹೆಸರಿನಲ್ಲಿದೆ. ದೊಡ್ಡಬಳ್ಳಾಪುರದ ಕೋಳೂರು ಗ್ರಾಮದಲ್ಲಿ 40 ಎಕರೆಗೂ ಹೆಚ್ಚು ಜಮೀನನ್ನು ಬೇನಾಮಿಗಳ ಹೆಸರಿನಲ್ಲಿ ಖರೀದಿಸಿರುವುದಕ್ಕೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ. ಬೆಂಗಳೂರು ನಗರದ ವಿವಿಧೆಡೆ ಮನೆ, ಫ್ಲ್ಯಾಟ್, ನಿವೇಶನಗಳನ್ನೂ ಹೊಂದಿರುವುದಕ್ಕೆ ಸಂಬಂಧಿಸಿದ ದಾಖಲೆಗಳೂ ಅಧಿಕಾರಿಯ ಮನೆಯಲ್ಲೇ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿವೆ.
ಅಜಿತ್ ರೈ ಅವರ ಅಣ್ಣ ಆಶಿತ್ ರೈ, ಸ್ನೇಹಿತರಾದ ಗೌರವ್ ಶೆಟ್ಟಿ ಮತ್ತು ಪ್ರವೀಣ್ ಹೆಸರಿನಲ್ಲಿ ಬಹುತೇಕ ಆಸ್ತಿಗಳಿವೆ. ಆದರೆ, ಈ ಆಸ್ತಿಗಳಿಗೆ ಸಂಬಂಧಿಸಿದ ಎಲ್ಲ ಆಸ್ತಿಗಳ ದಾಖಲೆಪತ್ರಗಳು ಅಜಿತ್ ರೈ ಅವರ ಮನೆಯ ಭದ್ರತಾ ಕಪಾಟಿನಲ್ಲಿ ಇದ್ದವು. ಹೀಗಾಗಿ ಅವೆಲ್ಲವೂ ಅಜಿತ್ ರೈ ಅವರ ಆಸ್ತಿಗಳಾಗಿದ್ದು, ಬೇನಾಮಿ ಹೆಸರಿನಲ್ಲಿ ಖರೀದಿಸಲಾಗಿತ್ತು ಎಂದು ಲೋಕಾಯುಕ್ತ ಪೊಲೀಸರು ಶಂಕಿಸಿದ್ದಾರೆ. ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕುಗಳಲ್ಲಿ ಈ ಅಧಿಕಾರಿಯ ಬೇನಾಮಿ ಆಸ್ತಿಗಳಿರುವ ಪ್ರದೇಶಗಳಲ್ಲಿ ಪ್ರತಿ ಎಕರೆಗೆ 1 ಕೋಟಿಯಿಂದ 3 ಕೋಟಿಯವರೆಗೂ ಮಾರುಕಟ್ಟೆ ಮೌಲ್ಯವಿದೆ. ಅಂದಾಜು, 500 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಮೌಲ್ಯದ ಆಸ್ತಿ ಅಜಿತ್ ರೈ ಅವರ ಬಳಿ ಇದೆ ಎಂಬುದು ಪ್ರಾಥಮಿಕ ಅಂದಾಜಿನಲ್ಲಿ ಗೊತ್ತಾಗಿದೆ ಎಂದು ಲೋಕಾಯುಕ್ತದ ಮೂಲಗಳು ತಿಳಿಸಿವೆ.
ಐಷಾರಾಮಿ ಕಾರುಗಳೂ ಬೇನಾಮಿ: ತಹಶೀಲ್ದಾರ್ ಹುದ್ದೆಯಲ್ಲಿದ್ದರೂ ಅಜಿತ್ ರೈಗೆ ಐಷಾರಾಮಿ ಕಾರುಗಳ ಬಳಕೆಯ ಶೋಕಿ ಹೆಚ್ಚಿತ್ತು. 2.5 ಕೋಟಿ ರೂಪಾಯಿಯ ಲ್ಯಾಂಡ್ ಕ್ರೂಸರ್, ನಾಲ್ಕು ಫಾರ್ಚೂನರ್, ನಾಲ್ಕಉ ಮಹಿಂದ್ರಾ ಥಾರ್ ಕಾರುಗಳು ಆರೋಪಿಯ ಬಳಿ ಇರುವುದು ಪತ್ತೆಯಾಗಿವೆ. ಹೆಚ್ಚಿನ ಕಾರುಗಳನ್ನು ಬೇನಾಮಿಗಳ ಹೆಸರಿನಲ್ಲಿ ಖರೀದಿಸಿದ್ದರೂ, ಹಣ ಪಾವತಿಸಿದ್ದು ಮಾತ್ರ ಅಜಿತ್ ರೈ. ಖರೀದಿ ದಾಖಲೆಗಳೂ ಅವರ ಬಳಿಯೇ ಇದ್ದವು.
ಕಂದಾಯ ನಿರೀಕ್ಷಕ, ಉಪ ತಹಶೀಲ್ದಾರ್ ಹುದ್ದೆಗಳನ್ನು ದಾಟಿ ಗ್ರೇಡ್-2 ತಹಶೀಲ್ದಾರ್ ಹುದ್ದೆಗೇರಿರುವ ಅಜಿತ್, ದೊಡ್ಡಬಳ್ಳಾಪುರ, ದೇವನಹಳ್ಳಿ, ಕೆ.ಆರ್.ಪುರ ತಾಲ್ಲೂಕುಗಳಲ್ಲೇ ಹೆಚ್ಚು ಕಾಲ ಕಳೆದಿದ್ದಾರೆ.
ಒತ್ತುವರಿದಾರರಿಗೆ ನೆರವು ನೀಡುತ್ತಿದ್ದ ಆರೋಪದ ಮೇಲೆ 2022ರಲ್ಲಿ ಅಜಿತ್ ರೈ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು. ಸೇವೆಗೆ ಮರಳಿದ ಬಳಿಕವೂ ಒತ್ತುವರಿದಾರರ ಜತೆ ಶಾಮೀಲಾಗಿದ್ದ ಆರೋಪಗಳಿದ್ದವು.