Homeಕರ್ನಾಟಕಶಿರೂರು ಗುಡ್ಡ ಕುಸಿತ | ಸ್ಥಳ ಪರಿಶೀಲಿಸಿದ ಸಿಎಂ, ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ,...

ಶಿರೂರು ಗುಡ್ಡ ಕುಸಿತ | ಸ್ಥಳ ಪರಿಶೀಲಿಸಿದ ಸಿಎಂ, ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ, ಹಾನಿ ವರದಿ ಸಲ್ಲಿಸಲು ಸಿದ್ದರಾಮಯ್ಯ ಸೂಚನೆ

ಮಳೆಯಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆ ಅನಾಹುತಕ್ಕೆ ಎನ್‌ಡಿಆರ್‌ಎಫ್‌ ಪ್ರಕಾರ ಪರಿಹಾರ ಒಗದಿಸುವ ಕುರಿತಂತೆ ತಕ್ಷಣ ಹಾನಿಯ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ‌ಸಿದ್ದರಾಮಯ್ಯ ಸೂಚನೆ ನೀಡಿದರು.

ಶಿರೂರು ಗುಡ್ಡ ಕುಸಿತದ ಸ್ಥಳ ಪರಿಶೀಲನೆ ಬಳಿಕ ಕಾರ್ಯದರ್ಶಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆಗಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಸೂಚನೆಗಳನ್ನು ನೀಡಿದರು.‌

ಕದ್ರಾ ಅಣೆಕಟ್ಟೆಯಿಂದ ಹೊರಬಿಡುವ ನೀರಿನಿಂದ ತೊಂದರೆಗೊಳಗಾಗುವ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಒದಗಿಸುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವಂತೆ ಸೂಚಿಸಿದರು.

ಮಳೆ ಅನಾಹುತ ಮತ್ತು‌ ಪ್ರವಾಹದಿಂದ ಆದ ಜೀವಹಾನಿಗೆ ನೀಡಲಾಗಿರುವ ಪರಿಹಾರದ ಕುರಿತು ಮಾಹಿತಿ ಪಡೆದ ಸಿಎಂ ಉಳಿದವರಿಗೆ ತುರ್ತಾಗಿ ಕೊಡಬೇಕು ಎಂದರು‌.

ಕೋಸ್ಟಲ್ ಲೈನ್ ನಲ್ಲಿ ವಿದ್ಯುತ್ ಕಂಬಗಳ ಅಳವಡಿಕೆ, ಅಗತ್ಯ ಇರುವ ಕಡೆ ವೈರ್ ಗಳ ದುರಸ್ತಿ ಮತ್ತು ಬದಲಾವಣೆಗೆ ಸೂಚಿಸಿದರು.

ಮಾಧ್ಯಮಗಳಿಗೆ ಸಿಎಂ ಪ್ರತಿಕ್ರಿಯೆ

ಶಿರೂರು ಭೂಕುಸಿತದ ಮಣ್ಣು ತೆರವು ಮತ್ತು ಶೋಧ ಕಾರ್ಯಾಚರಣೆಗೆ ಎಸ್.ಡಿ.ಆರ್. ಎಫ್ ನಿಂದ 46 ಜನ ಎನ್.ಡಿ.ಆರ್.ಎಫ್ ನಿಂದ 24 ಜನ ಹಾಗೂ 44 ಜನ ಮಿಲಿಟರಿಯವರು ಹಾಗೂ ನೌಕಾಪಡೆ ಯವರೂ ಕೂಡ ಕೈಜೋಡಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಭಾನುವಾರ ಶಿರೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಗೋವಾ ಮತ್ತು ಅಂಕೋಲಾ ನಡುವೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಜುಲೈ 16 ರಂದು ಭೂ ಕುಸಿತವಾಗಿದೆ. ಭೂ ಕುಸಿತದಿಂದ 10 ಜನ ಕಾಣೆಯಾಗಿದ್ದಾರೆ. ಅದರಲ್ಲಿ ಏಳು ಜನರ ಹೆಣಗಳು ಪತ್ತೆಯಾಗಿದ್ದು ಇನ್ನೂ ಮೂವರು ಕಾಣೆಯಾಗಿದ್ದು ಅವರ ಪತ್ತೆಗಾಗಿ ಪರಿಹಾರ ಕಾರ್ಯಾಚರಣೆ ಜಾರಿಯಲ್ಲಿದೆ ಎಂದು ವಿವರಿಸಿದರು.

“ಘಟನೆಯಲ್ಲಿ ಖಾಲಿ ಗ್ಯಾಸ್ ಟ್ಯಾಂಕರ್ ಹಾಗೂ ಭರ್ತಿಯಾಗಿರುವ ಗ್ಯಾಸ್ ಟ್ಯಾಂಕರ್ ಕೂಡ ಸಿಕ್ಕಿಹಾಕಿಕೊಂಡಿದ್ದು, ಅಲ್ಲಿಯೇ ವಾಸವಾಗಿರುವ ಒಂದೇ ಕುಟುಂಬದವರು ಟೀ ಅಂಗಡಿಯನ್ನು ಇಟ್ಟುಕೊಂಡಿದ್ದರು. ಅವರಲ್ಲಿ ಐವರು ಭೂ ಕುಸಿತದಲ್ಲಿ ಸಾವನ್ನಪ್ಪಿದ್ದಾರೆ. ರಿಸ್ಕ್ ಆಪರೇಶನ ನ್ನು ತ್ವರಿತವಾಗಿ ಮಾಡಬೇಕೆಂದು ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸ್ಪಷ್ಟವಾಗಿ ಸೂಚಿಸಿದ್ದೇನೆ” ಎಂದರು.

ಮೃತರ ಕುಟುಂಬಕ್ಕೆ ಐದು ಲಕ್ಷ ಪರಿಹಾರ

“ವಿಧಾನಸಭಾ ಅಧಿವೇಶನ ನಡೆಯುತ್ತಿದ್ದುದರಿಂದ ಇಂದು ಭೇಟಿ ನೀಡಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಎಲ್ಲಾ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಸೂಚಿಸಿದ್ದೆ. ಸಾವನ್ನಪ್ಪಿದವರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಬೇಕೆಂದು ಘೋಷಿಸಲಾಗಿದೆ. ಈಗಾಗಲೇ ಅದನ್ನು ವಿತರಿಸಲಾಗಿದೆ. ಒಂದು ವೇಳೆ ಭೂ ಕುಸಿತದಲ್ಲಿ ಇನ್ಯಾರಾದರೂ ಸಾವನ್ನಪ್ಪಿದ್ದಾರೆ ಅವರಿಗೂ 5 ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಲಾಗುವುದು” ಎಂದು ಹೇಳಿದರು.

“ನೌಕಾದಳ ಹಾಗೂ ರಕ್ಷಣಾ ತಂಡದವರಿಗೆ ಎಲ್ಲೆಡೆ ಹುಡುಕುವಂತೆ ಸೂಚನೆ ನೀಡಲಾಗಿದೆ ಎಂದರು. 10 ಜನರು ಕಾಣೆಯಾಗಿದ್ದಾರೆ. ಘಟನೆ ನಡೆದ ದಿನವೇ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರನ್ನೂ ಹಾಗೂ ಶಾಸಕರನ್ನು ಸ್ಥಳಕ್ಕೆ ಕಳುಹಿಸಲಾಗಿದೆ” ಎಂದರು.

ಅವೈಜ್ಞಾನಿಕ ಕಾಮಗಾರಿ: ತಪ್ಪಿತಸ್ಥರ ವಿರುದ್ಧ ಕ್ರಮ

“ಭೂ ಕುಸಿತವು ಪ್ರಕೃತಿ ವಿಕೋಪವಲ್ಲ ಐ.ಆರ್.ಬಿ ಸಂಸ್ಥೆಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಆಗಿದೆ. ಅವರ ವಿರುದ್ಧ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಯಾರೇ ತಪ್ಪು ಮಾಡಿದರೂ ಕೂಡ ಅವರ ಮೇಲೆ ಕ್ರಮ ವಹಿಸಲಾಗುವುದು, ರಸ್ತೆ ನಿರ್ಮಾಣ ಮಾಡಿರುವವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು. ಪರಿಹಾರ ಕಾಮಗಾರಿ ಮುಗಿದ ಮೇಲೆ ಪ್ರಕರಣದ ಬಗ್ಗೆ ಗಮನಹರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.

ಭೂ ಕುಸಿತ ತಡೆಗಟ್ಟಲು ಪ್ರಯತ್ನ

“34 ಸ್ಥಳಗಳಲ್ಲಿ ಭೂ ಕುಸಿತವಾಗುತ್ತದೆ ಎಂದು ಒಂದು ವರ್ಷದ ಹಿಂದೆಯೇ ವರದಿಯಾಗಿದೆ, ಸತ್ತ ಮೇಲೆಯೇ ಕ್ರಮವೇಕೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾಯಿತು. ಕಳೆದ ಬಾರಿ ಬರವಿದ್ದು, ಈ ಬಾರಿ ಮಳೆಯಾಗುತ್ತಿದೆ. ಬಹಳ ವರ್ಷ ಗಳಿಂದ ಇಲ್ಲಿ ಭೂ ಕುಸಿತವಾಗಿರಲಿಲ್ಲ. ಎಲ್ಲೆಲ್ಲಿ ಭೂ ಕುಸಿತವಾಗುತ್ತದೆಯೋ ಅದನ್ನು ತಡೆಗಟ್ಟಲು ಪ್ರಯತ್ನಿಸಲಾಗುವುದು” ಎಂದರು.

ರಾಜಕಾರಣ ಮಾಡಲ್ಲ

“ಪ್ರಕೃತಿ ವಿಕೋಪದ ಸಂದರ್ಭದಲ್ಲಿ ರಾಜಕಾರಣ ಮಾಡುವುದಿಲ್ಲ.ರಾತ್ರಿ ವೇಳೆ ಕಾರ್ಯಾಚರಣೆ ನಡೆಯುವುದಿಲ್ಲ ಎಂದು ತಿಳಿಸಿದ ಮುಖ್ಯಮಂತ್ರಿಗಳು ಪ್ರಕೃತಿ ವಿಕೋಪದ ಸಂದರ್ಭದಲ್ಲಿ ರಾಜಕಾರಣ ಮಾಡುವುದಿಲ್ಲ. ಕೇಂದ್ರ ಸರ್ಕಾರದ ತಂಡ ಎನ್.ಡಿ.ಆರ್. ಎಫ್ ಕೂಡ ಇಲ್ಲಿ ಕಾರ್ಯಾಚರಣೆ ಮಾಡುತ್ತಿದೆ. ನೌಕಾ ತಂಡವೂ ಇದೆ. ಇಲ್ಲಿ ಇನ್ಯಾರ ಮೇಲೆಯೂ ದೋಷ ಹೊರೆಸಲು ನಾನು ಹೋಗುವುದಿಲ್ಲ” ಎಂದು ಹೇಳಿದರು.

ಕಂದಾಯ ಸಚಿವ ಕೃಷ್ಣ ಬೈರೇಗೌಡ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ,ಶಾಸಕರಾದ ಸತೀಶ್ ಸೈಲ್, ಶಿವರಾಮ ಹೆಬ್ಬಾರ್, ಭೀಮಣ್ಣ ನಾಯ್ಕ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಶಾಲಿನಿ ರಜನೀಶ್, ಮುಖ್ಯಮಂತ್ರಿ ಅವರ ಅಪರ ಮುಖ್ಯ ಕಾರ್ಯದರ್ಶಿ ಅತೀಕ್ , ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಧಾನ ಕಾರ್ಯದರ್ಶಿ ರಶ್ಮಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ , ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯ, ಜಿ.ಪಂ. ಸಿಇಒ ಈಶ್ವರ ಕುಮಾರ್ ಕಾಂದು, ಎಸ್ಪಿ ನಾರಾಯಣ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments