Homeಅಭಿಮನ್ಯುಡಿಕೆ ಶಿವಕುಮಾರ್‌ ಆಟಕ್ಕೆ ಹೊಸ ದಾಳ ಎಸೆದ ಸತೀಶ ಜಾರಕಿಹೊಳಿ

ಡಿಕೆ ಶಿವಕುಮಾರ್‌ ಆಟಕ್ಕೆ ಹೊಸ ದಾಳ ಎಸೆದ ಸತೀಶ ಜಾರಕಿಹೊಳಿ

ಸತೀಶ ಜಾರಕಿಹೊಳಿ ಅವರನ್ನು ಸಮಾಧಾನ ಮಾಡುವ ಕೆಲಸ ನಡೆದಿರುವ ಬೆನ್ನಲ್ಲೇ "ಡಿ ಕೆ ಶಿವಕುಮಾರ್​ ಜೊತೆ ಹೊಂದಾಣಿಕೆ ಆಗುವ ಪ್ರಶ್ನೆಯೇ ಇಲ್ಲ. ಪಕ್ಷದ ಹಂತದಲ್ಲಿ ಚರ್ಚೆ ಆಗಬೇಕೇ ವಿನಃ ನಮ್ಮ ಹಂತದಲ್ಲಿ ಏನೂ ಇಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಬೆಳಗಾವಿ ರಾಜಕಾರಣ ಮತ್ತೆ ದೊಡ್ಡ ಸದ್ದು ಮಾಡುವ ಸಾಧ್ಯತೆ ಕಾಣುತ್ತಿದೆ. ಜಿಲ್ಲಾ ರಾಜಕಾರಣದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಅತಿಯಾದ ಹಸ್ತಕ್ಷೇಪದ ವಿರುದ್ಧ ಸಚಿವ ಸತೀಶ್ ಜಾರಕಿಹೊಳಿ ಸಿಡಿದೆದ್ದಿದ್ದಾರೆ.

ಜಾರಕಿಹೊಳಿ ಅವರನ್ನು ಸಮಾಧಾನ ಮಾಡುವ ಕೆಲಸ ನಡೆದಿರುವ ಬೆನ್ನಲ್ಲೇ “ಡಿ ಕೆ ಶಿವಕುಮಾರ್​ ಜೊತೆ ಹೊಂದಾಣಿಕೆ ಆಗುವ ಪ್ರಶ್ನೆಯೇ ಇಲ್ಲ. ಪಕ್ಷದ ಹಂತದಲ್ಲಿ ಚರ್ಚೆ ಆಗಬೇಕೇ ವಿನಃ ನಮ್ಮ ಹಂತದಲ್ಲಿ ಏನೂ ಇಲ್ಲ” ಎಂದು ಬೆಳಗಾವಿಯಲ್ಲಿ ಶನಿವಾರ ಸುದ್ದಿಗಾರರಿಗೆ ಸ್ಪಷ್ಟಪಡಿಸಿದ್ದಾರೆ.

ಏನಿದು ರಾಜಕಾರಣ?

ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮಹತ್ವಾಕಾಂಕ್ಷೆಯ ಪರಿಣಾಮವಾಗಿ ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಗಳು ಆಗುತ್ತಿವೆ. ಡಿಕೆ ಶಿವಕುಮಾರ್, ಲಕ್ಷ್ಮಿ ಹೆಬ್ಬಾಳ್ಕರ್‌ ಅವರ ಹಸ್ತಕ್ಷೇಪಕ್ಕೆ ಕಡಿವಾಣ ಹಾಕಲು ಜಾರಕಿಹೊಳಿ ಒಂದು ರೀತಿಯ ಚದುರಂಗದಾಟಕ್ಕೆ ವೇದಿಕೆ ಸೃಷ್ಟಿಸಿಕೊಂಡಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬೆಂಗಾಲಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಿಂತಿರುವ ಹಿನ್ನೆಲೆಯಲ್ಲಿ ಜಾರಕಿಹೊಳಿ ಅವರು ಇದೀಗ ಮುಖ್ಯಮಂತ್ರಿ ಪಾಳಯದಲ್ಲಿ ಅತಿಯಾಗಿ ಗುರುತಿಸಿಕೊಳ್ಳುತ್ತಿದ್ದು ಬೆಳಗಾವಿ ಜಿಲ್ಲಾ ರಾಜಕಾರಣವಾಷ್ಟೇ ಅಲ್ಲ ಪಕ್ಷದ ಮೇಲೆ ತಮ್ಮ ಹಿಡಿತ ಸಾಧಿಸಲು ತಂತ್ರ ಹೆಣೆದಿದ್ದಾರೆ.

ಉಪಮುಖ್ಯಮಂತ್ರಿಯಾಗಿರುವ ಡಿ ಕೆ ಶಿವಕುಮಾರ್ ಪಕ್ಷದ ಅಧ್ಯಕ್ಷರಾಗಿಯೂ ಚಟುವಟಿಕೆಗಳ ಮೇಲೆ ನಿಯಂತ್ರಣ ಸಾಧಿಸಿದ್ದಾರೆ. ಹೀಗಾಗಿ ಅದಕ್ಕೆ ಪ್ರತಿಯಾಗಿ ತಂತ್ರಗಾರಿಕೆ ರೂಪಿಸುತ್ತಿರುವ ಸತೀಶ್ ಜಾರಕಿಹೊಳಿ ಅವರು ಇದೀಗ ಪಕ್ಷದ ನೂತನ ಕಾರ್ಯಾಧ್ಯಕ್ಚ ಮತ್ತು ಮಹಿಳಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ವಿಷಯದಲ್ಲಿ ಹೊಸ ದಾಳ ಎಸೆದಿದ್ದಾರೆ.

ಮಾಜಿ ಶಾಸಕಿ ಹಾಗೂ ಮರಾಠ ಸಮುದಾಯದ ಪ್ರಬಲ ಬೆಂಬಲ ಹೊಂದಿರುವ ಅಂಜಲಿ ನಿಂಬಾಳ್ಕರ್ ಅವರನ್ನು ಮುನ್ನಲೆಗೆ ತಂದಿರುವ ಸತೀಶ್ ಜಾರಕಿಹೊಳಿ ಅವರು ಇದೀಗ ಅಂಜಲಿ ನಿಂಬಾಳ್ಕರ್ ಅವರನ್ನು ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.

ಎರಡು ದಿನಗಳ ಹಿಂದೆ ತಮ್ಮನ್ನು ಭೇಟಿ ಮಾಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರೊಂದಿಗೆ ಪಕ್ಷದ ಕೆಲವು ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದ ಸತೀಶ್ ಜಾರಕಿಹೊಳಿ ಅವರು ತಮ್ಮ ಹಲವು ಬೇಡಿಕೆ ಮತ್ತು ಅಭಿಪ್ರಾಯಗಳ ಬಗ್ಗೆ ಸದ್ಯದಲ್ಲೇ ತಿಳಿಸುವುದಾಗಿ ಹೇಳಿದ್ದರು.

ಅದರಂತೆ ಸತೀಶ್ ಜಾರಕಿಹೊಳಿ ಅವರನ್ನು ಸಂಸದ ಹಾಗೂ ಶಿವಕುಮಾರ್ ಅವರ ಸೋದರ ಡಿಕೆ ಸುರೇಶ್ ಭೇಟಿ ಮಾಡಿದ್ದು ಅವರಿಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಮುಖವಾಗಿ ಬೆಳಗಾವಿಯ ಹಲವು ಅಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ತಮ್ಮ ನಿಲುವು ಸ್ಪಷ್ಟಪಡಿಸಿರುವ ಜಾರಕಿಹೊಳಿ, ಹಂತ ಹಂತವಾಗಿ ಅವರುಗಳನ್ನೆಲ್ಲ ಬದಲಾಯಿಸಬೇಕು ಎಂದು ಹೇಳಿರುವುದಾಗಿ ಗೊತ್ತಾಗಿದೆ.

ಇದಲ್ಲದೆ ಪಕ್ಷದ ಕಾರ್ಯಾಧ್ಯಕ್ಷ ಹುದ್ದೆಯನ್ನು ತಾವು ತೊರೆಯುತ್ತಿದ್ದು ತಮ್ಮಿಂದ ತೆರವಾದ ಸ್ಥಾನಕ್ಕೆ ಕಿತ್ತೂರು ಕರ್ನಾಟಕ ಭಾಗಕ್ಕೆ ಸೇರಿದ ಮಾಜಿ ಮಂತ್ರಿ ವಿನಯ ಕುಲಕರ್ಣಿ ಅವರನ್ನು ನೇಮಕ ಮಾಡಬೇಕು. ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದ ಇವರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದರೆ ಸಂಘಟನೆಗೆ ಅನುಕೂಲವಾಗಲಿದೆ ಎಂಬ ವಾದ ಮಂಡಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ವಿನಯ್ ಕುಲಕರ್ಣಿ ಅವರ ಆಯ್ಕೆ ಕಿತ್ತೂರು ಕರ್ನಾಟಕದ ಭಾಗಗಳಲ್ಲಿ ಪರಿಣಾಮ ಬೀರಲಿದೆ ಎನ್ನುವುದು ಇವರ ವಾದವಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪಂಚಮಸಾಲಿ ಸಮುದಾಯಕ್ಕೆ ಸೇರಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇದೇ ಕಾರಣಕ್ಕಾಗಿ ಪಕ್ಷ ಮತ್ತು ಸರ್ಕಾರದ ಮೇಲೆ ಹಿಡಿತ ಸಾಧಿಸಲು ಹೊರಟಿದ್ದಾರೆ. ಹೀಗಾಗಿ ಅವರು ಇತ್ತೀಚೆಗಷ್ಟೇ ಪಕ್ಷಕ್ಕೆ ಬಂದಿರುವ ಮಾಜಿ ಮಂತ್ರಿ ಲಕ್ಷ್ಮಣ ಸವದಿ ಅವರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂಬ ವಾದ ಮಂಡಿಸಿದ್ದಾರೆ.

ಆದರೆ ಇದಕ್ಕೆ ಪ್ರತಿ ತಂತ್ರ ಹೆಣೆದಿರುವ ಸತೀಶ್ ಜಾರಕಿಹೊಳಿ ಅವರು ಲಕ್ಷ್ಮಣ ಸವದಿ ಅವರನ್ನು ಮಂತ್ರಿಯನ್ನಾಗಿ ಮಾಡಬೇಕು ಹಾಗೆ ಪಕ್ಷದ ಕಾರ್ಯಧ್ಯಕ್ಷರನ್ನಾಗಿ ವಿನಯ ಕುಲಕರ್ಣಿ ಅವರನ್ನು ನೇಮಿಸಬೇಕು ಎಂದು ಹೇಳಿದ್ದಾರೆ.

ಅದೇ ರೀತಿಯಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಅಂಜಲಿ ನಿಂಬಾಳ್ಕರ್ ಅವರನ್ನು ನೇಮಿಸಲು ಪಟ್ಟು ಹಿಡಿದಿದ್ದಾರೆ. ಈ ಮೂಲಕ ಜಿಲ್ಲಾ ರಾಜಕಾರಣದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೊಂದಿರುವ ಹಿಡಿತವನ್ನು ಸಡಿಲಗೊಳಿಸುವುದು ಜಾರಕಿಹೊಳಿ ಅವರ ಪ್ರಮುಖ ಉದ್ದೇಶವಾಗಿದೆ.

ಲಕ್ಷ್ಮಿ ಹೆಬ್ಬಾಳ್ಕರ್ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದವರಾದರು ಮರಾಠ ಸಮುದಾಯದ ಹೆಚ್ಚಿನ ಬೆಂಬಲ ಹೊಂದಿರುವ ಅಂಜಲಿ ನಿಂಬಾಳ್ಕರ್ ಜಿಲ್ಲಾ ರಾಜಕಾರಣದಲ್ಲಿ ಪ್ರಾಬಲ್ಯಕ್ಕೆ ಬಂದರೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವರ್ಚಸ್ಸು ಕಡಿಮೆಯಾಗಲಿದೆ ಎನ್ನುವುದು ಜಾರಕಿಹೊಳಿ ಅವರ ಲೆಕ್ಕಾಚಾರ.

ಲೋಕಸಭಾ ಚುನಾವಣೆಯ ಸಮಯದಲ್ಲಿ ಈ ಎಲ್ಲವೂ ತಮ್ಮ ಪರವಾಗಿದೆ ಎನ್ನುವುದು ಸತೀಶ್ ಜಾರಕಿಹೊಳಿ ಅಂಬೋಣ. ಇದಷ್ಟೇ ಅಲ್ಲ ಪಕ್ಷದ ಮೇಲು ನಿಯಂತ್ರಣ ಸಾಧಿಸಲು ತಂತ್ರ ಹೇಳಿದಿರುವ ಜಾರಕಿಹೊಳಿ ಕಲ್ಯಾಣ ಕರ್ನಾಟಕಕ್ಕೆ ಕಾರ್ಯಾಧ್ಯಕ್ಷ ಹುದ್ದೆ ದೊರಕಿಸಿಕೊಡಲು ಪ್ರಯತ್ನ ನಡೆಸಿದ್ದಾರೆ.

ಇದರ ಭಾಗವಾಗಿ ರಾಯಚೂರಿನ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮುಖಂಡ ವಸಂತಕುಮಾರ್ (ಪರಿಶಿಷ್ಟ ಜಾತಿ) ಅವರನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಲು ಪಟ್ಟು ಹಿಡಿದಿದ್ದಾರೆ. ಸದ್ಯ ಈ ಸಮುದಾಯಕ್ಕೆ ಸೇರಿರುವ ಚಂದ್ರಪ್ಪ ಅವರು ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದು ಅವರು ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಹುದ್ದೆ ತೆರವು ಮಾಡಲಿದ್ದಾರೆ.
ಈ ಸ್ಥಾನಕ್ಕೆ ತಮ್ಮ ಆಪ್ತ ನೇಮಕವಾದರೆ ಪಕ್ಷದ ಮೇಲೆ ಹಿಡಿತ ಸಾಧ್ಯ ಎನ್ನುವುದು ಇವರ ಲೆಕ್ಕಾಚಾರವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments