ಈ ಬಾರಿಯ ಬಜೆಟ್‌ನಲ್ಲಿ ಕೆಜಿಎಫ್‌ನಲ್ಲಿರುವ 965 ಕೈಗಾರಿಕಾ ಪ್ರದೇಶದವನ್ನು ಬಿ ಇ ಎಂ ಎಲ್ ನಿಂದ ಹಿಂಪಡೆದು ಅಲ್ಲಿ ಹೊಸ ಕೈಗಾರಿಕಾ ಟೌನ್ ಶಿಪ್ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕೋಲಾರ, ಬಂಗಾರಪೇಟೆ ತಾಲ್ಲೂಕು ಗಳಿಗೆ ಕುಡಿಯುವ ನೀರನ್ನು ಒದಗಿಸುವ ಯರಗೋಳ್ ಯೋಜನೆ ಹಾಗೂ ಜಿಲ್ಲೆಯ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
“ಹಿಂದೆ ಪ್ರತ್ಯೇಕವಾಗಿದ್ದ ಒಂದು ಮಾಡಲಾಗಿದ್ದ ಕೋಲಾರ- ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ವನ್ನು ಒಂದು ಮಾಡಲಾಗಿತ್ತು. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಪ್ರತ್ಯೇಕ ಡೈರಿ ಸ್ಥಾಪನೆಗೆ ಮಂಜೂರಾತಿ ನೀಡಲಾಗಿದೆ. ಪ್ರತಿ ತಿಂಗಳು 2 ತಿಂಗಳು ವಿದ್ಯುತ್ ಬಿಲ್ಲು ಕಟ್ಟಲಾಗುತ್ತಿತ್ತು. ಅದನ್ನು ತಪ್ಪಿಸಲು 50 ಎಕರೆ ಜಾಗದಲ್ಲಿ ಸ್ವಂತ ವಿದ್ಯುತ್ ಉತ್ಪಾದಿಸಲು ಸೋಲಾರ್ ಘಟಕ ಸ್ಥಾಪನೆಗೆ ಪರವಾನಗಿ ನೀಡಲಾಗಿದೆ. ಕೋಲಾರ ಹಾಲು ಒಕ್ಕೂಟದಿಂದ ರೈತರಿಗೆ ಅನುಕೂಲವಾಗಲಿದೆ” ಎಂದರು.
“ಬರಗಾರವಿದ್ದರೂ 2263 ಕೋಟಿ ರೂ.ಗಳನ್ನು ಜಿಲ್ಲೆಯ ಅಭಿವೃದ್ಧಿಗಾಗಿ ನೀಡಿದ್ದೇವೆ. ಕೆ.ಹೆಚ್.ಮುನಿಯಪ್ಪ ಅವರು ಸಚಿವರಾಗಿದ್ದಾಗ 83 ಕೋಟಿ ರೂ.ಗಳನ್ನು ಮಂಜೂರು ಮಾಡಿಸಿರುವುದಕ್ಕಾಗಿ ಹಾಗೂ ಯೋಜನೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು” ಎಂದು ಹೇಳಿದರು.
ಯರಗೋಳು ಯೋಜನೆಗೆ 23 ಸಾವಿರ ಕೋಟಿ ರೂ ವೆಚ್ಚ
“ಕೋಲಾರ, ಚಿತ್ರದುರ್ಗ ಬರಗಾಲಕ್ಕೆ ತುತ್ತಾಗಿರುವ ಜಿಲ್ಲೆಗಳು. ರಾಜಸ್ಥಾನ ಬಿಟ್ಟರೆ ಅತಿ ಹೆಚ್ಚು ಬರಗಾಲಕ್ಕೆ ತುತ್ತಾಗಿರುವ ರಾಜ್ಯ ಕರ್ನಾಟಕ. ಹೆಚ್.ಎನ್.ವ್ಯಾಲಿ, ಕೆ.ವ್ಯಾಲಿ, ಪುಷ್ಪಾವತಿ ವ್ಯಾಲಿ ಜಾರಿ ಮಾಡಿದ ನಾವು ಎತ್ತಿನಹೊಳೆ ಯೋಜನೆಯನ್ನು ಜಾರಿ ಮಾಡಲೇಬೇಕೆಂದು ಒತ್ತಾಯ ಮಾಡಿದ್ದು ಮಹಾಜನತೆ. ಯೋಜನೆ ಕಾರ್ಯಸಾಧುವಾಗಿದ್ದರೆ ಎಷ್ಟೇ ಖರ್ಚಾದರೂ ಯೋಜನೆ ಜಾರಿ ಮಾಡಲಾಗುವುದು ಎಂದು ಭರವಸೆ ನೀಡಲಾಗಿತ್ತು.ಯರಗೋಳು ಯೋಜನೆಗೆ 23 ಸಾವಿರ ಕೋಟಿ ರೂ ವೆಚ್ಚವಾಗಿದೆ. ಕೆ.ಸಿ.ವ್ಯಾಲಿಗೆ 1800 ಕೋಟಿ ರೂ ಹಾಗೂ ಹೆಚ್.ಎನ್.ವ್ಯಾಲಿಗೆ 800 ಕೋಟಿ ರೂ.ವೆಚ್ಚವಾಗಿದ್ದು, ಇದು ಅಭಿವೃದ್ಧಿ ಅಲ್ಲವೇ” ಎಂದು ಪ್ರಶ್ನಿಸಿದರು.
ಕೋಲಾರ ಮಲೆನಾಡು ಆಗುವ ದಿನಗಳು ದೂರವಿಲ್ಲ
“ನೀರನ್ನು ಪರೀಕ್ಷೆ ಮಾಡಿಸಿದ್ದು ಹಾನಿಕಾರಕ ಪದಾರ್ಥ ಇಲ್ಲ ಎಂದು ವಿಶ್ವಸಂಸ್ಥೆಯವರು ಭೇಟಿ ನೀಡಿ ಮೆಚ್ಚುಗೆ ನೀಡಿದ್ದಾರೆ. ಕುಮಾರಸ್ವಾಮಿ ಯವರು ಇದನ್ನು ಅರ್ಥಮಾಡಿಕೊಳ್ಳಬೇಕು. ಕೇರಳದ ಸಮಾಲೋಚಕರೂ ಕೂಡ ಇದನ್ನು ಇತರೆ ರಾಜ್ಯಗಳಲ್ಲಿ ಅನುಕರಿಸಬೇಕು ಎಂದಿದ್ದಾರೆ. ಕೇವಲ ರಾಜಕೀಯ ಕ್ಕಾಗಿ ಟೀಕೆ ಮಾಡಬಾರದು ಎಂದರು. ಪ್ರಜಾಪ್ರಭುತ್ವದ ವ್ಯವಸ್ಥೆ ಯಲ್ಲಿ ಜನರೇ ಮಾಲೀಕರು. ಜನರ ಸಮಸ್ಯೆಗಳಿಗೆ, ಜನರ ವಿರುದ್ಧವಾಗಿ, ದಾರಿತಪ್ಪಿಸುವ ಕೆಲಸವನ್ನು ಮಾಡಬಾರದು. ಕೋಲಾರ ಮಲೆನಾಡು ಆಗುವ ದಿನಗಳು ದೂರವಿಲ್ಲ” ಎಂದರು.
ವಿರೋಧಿಗಳೇ ಕಣ್ತೆರೆದು ನೋಡಿ
“ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಗ್ಯಾರಂಟಿ ಯೋಜನೆಗಳ ನಂತರ ಅಭಿವೃದ್ಧಿ ಕೆಲಸಗಳು ಸ್ಥಗಿತವಾಗಿವೆ ಎಂದು ಟೀಕಿಸುವ ವಿರೋಧಿಗಳಿಗೆ ಕಣ್ತೆರೆದು ನೋಡುವಂತೆ ತಿಳಿಸಿದ ಮುಖ್ಯಮಂತ್ರಿಗಳು, ಕಣ್ಣು ಮುಚ್ಚಿಕೊಂಡು , ರಾಜಕೀಯ ಕಾರಣಗಳಿಗಾಗಿ ಮಾತನಾಡಬೇಡಿ ಎಂದರು. ಇದು ಸಣ್ಣ ಅನುದಾನವಲ್ಲ. ಕೋಲಾರ ಜಿಲ್ಲೆ, ಚಿಕ್ಕಬಳ್ಳಾಪುರ, ತುಮಕೂರು,ಬೆಂಗಳೂರು ಗ್ರಾಮಾಂತರ, ಹಾಸನ ಜಿಲ್ಲೆಗಳಿಗೆ ಎತ್ತಿನಹೊಳೆ ಯೋಜನೆಯನ್ನು ಯಾರು ಜಾರಿಗೆ ಮಾಡಿದ್ದು? ವಿರೋಧಿಸುವವರು ಮಾಡಿಕೊಟ್ಟರೆ ಎಂದು ಪ್ರಶ್ನಿಸಿದರು. ಎತ್ತಿನಹೊಳೆ ಯೋಜನೆ ಜಾರಿಯಾಗುವುದಿಲ್ಲ ಎನ್ನುವವರಿಗೆ ಇಂದು ಉತ್ತರ ಸಿಕ್ಕಿದೆ” ಎಂದು ತಿಳಿಸಿದರು.