ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಗಾಯಾಳುಗಳ ರಕ್ಷಣೆಗೆ ಕೇಂದ್ರ ಸರಕಾರ ಮುಂದಾಗಿದ್ದು ಅದರಂತೆ ರಸ್ತೆ ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳಿಗೆ ನಗದು ರಹಿತ ಚಿಕಿತ್ಸೆ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಮಂಗಳವಾರ ಜಾರಿಗೊಳಿಸಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಈ ಯೋಜನೆಯಡಿಯಲ್ಲಿ ಅಪಘಾತ ಸಂಭವಿಸಿದ ದಿನಾಂಕದಿಂದ ಏಳು ದಿನಗಳವರೆಗೆ ಗಾಯಾಳು ಕೇಂದ್ರ ಸರಕಾರ ಗುರುತಿಸಿದ ಆಸ್ಪತ್ರೆಯಲ್ಲಿ ಗರಿಷ್ಠ 1.5 ಲಕ್ಷ ರೂ.ಗಳವರೆಗೆ ನಗದು ರಹಿತ ಚಿಕಿತ್ಸೆ ಪಡೆಯಲು ಅರ್ಹತೆ ಹೊಂದಿರುತ್ತಾರೆ ಎಂದು ಹೇಳಲಾಗಿದೆ.
ಈ ಯೋಜನೆ ಮೇ 5, 2025 ರಿಂದ ಜಾರಿಗೆ ಬಂದಿದ್ದು, ದೇಶದಾದ್ಯಂತ ಯಾವುದೇ ಪ್ರದೇಶದಲ್ಲೂ ರಸ್ತೆ ಅಪಘಾತದಿಂದ ಗಾಯಗೊಂಡ ಗಾಯಾಳು ನಗದು ರಹಿತ (ಗರಿಷ್ಠ 1.5 ಲಕ್ಷ ರೂ.) ಚಿಕಿತ್ಸೆಗೆ ಅರ್ಹನಾಗಿರುತ್ತಾನೆ ಎಂದು ತಿಳಿಸಲಾಗಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕಳೆದ ಮಾರ್ಚ್ 14, 2024 ರಂದು ರಸ್ತೆ ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳಿಗೆ ನಗದು ರಹಿತ ಚಿಕಿತ್ಸೆ ನೀಡುವ ಪೈಲಟ್ ಕಾರ್ಯಕ್ರಮವನ್ನು ಪ್ರಾರಂಭಿಸಿತ್ತು.