Homeಅಭಿಮನ್ಯುಪಂಚರಾಜ್ಯಗಳ ಫಲಿತಾಂಶ; ಕಾಂಗ್ರೆಸ್‌ ಕಳೆದುಕೊಂಡಿದ್ದೇ ಹೆಚ್ಚು, ಬಿಜೆಪಿ ಗೆಲವು ಗಮನಾರ್ಹ

ಪಂಚರಾಜ್ಯಗಳ ಫಲಿತಾಂಶ; ಕಾಂಗ್ರೆಸ್‌ ಕಳೆದುಕೊಂಡಿದ್ದೇ ಹೆಚ್ಚು, ಬಿಜೆಪಿ ಗೆಲವು ಗಮನಾರ್ಹ

ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಪೂರ್ಣವಾಗಿ ಪ್ರಕಟವಾಗಿದ್ದು, ಮೂರು ರಾಜ್ಯಗಳಲ್ಲಿ ಬಿಜೆಪಿ, ಒಂದು ರಾಜ್ಯದಲ್ಲಿ ಕಾಂಗ್ರೆಸ್‌ ಹಾಗೂ ಮಿಜೋರಾಂ ರಾಜ್ಯದಲ್ಲಿ ಜೋರಾಮ್‌ ಪೀಪಲ್ಸ್‌ ಪಾರ್ಟಿ(ಜೆಡ್‌ಪಿಎಂ) ಬಹುಮತ ಸಾಧಿಸಿದೆ.

ದಕ್ಷಿಣ ಭಾರತದ ತೆಲಂಗಾಣದಲ್ಲಿ ಸತತ ಮೂರನೇ ಅವಧಿಗೆ ಅಧಿಕಾರ ಹಿಡಿಯಲು ಕೆ. ಚಂದ್ರಶೇಖರ ರಾವ್‌ ನೇತೃತ್ವದ ಬಿಆರ್‌ಎಸ್‌ಗೆ (ಈ ಹಿಂದಿನ ಟಿಆರ್‌ಎಸ್‌) ಸಾಧ್ಯವಾಗಿಲ್ಲ. ಈ ಮೂಲಕ ಆಡಳಿತ ವಿರೋಧಿ ಅಲೆಯನ್ನು ಅನುಕೂಲಕರವಾಗಿ ಬಳಸಿಕೊಂಡ ಕಾಂಗ್ರೆಸ್‌ ತೆಲಂಗಾಣದ 119 ಸ್ಥಾನಗಳಲ್ಲಿ 64 ಸ್ಥಾನಗಳಲ್ಲಿ ಗೆದ್ದು ಬೀಗಿದೆ.

ಉತ್ತರ ಭಾರತದ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ಬಿಜೆಪಿ ಭಾರಿ ಗೆಲುವು ಸಾಧಿಸಿದೆ. ಮಧ್ಯಪ್ರದೇಶದಲ್ಲಿ 230 ಸ್ಥಾನಗಳ ಪೈಕಿ 163 ಸ್ಥಾನ, ರಾಜಸ್ಥಾನದಲ್ಲಿ 199 ಸ್ಥಾನಗಳ ಪೈಕಿ 115 ಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ 90 ಸ್ಥಾನಗಳ ಪೈಕಿ 54 ಸ್ಥಾನಗಳಲ್ಲಿ ಜಯ ಸಾಧಿಸುವ ಮೂಲಕ ಬಿಜೆಪಿ ಗೆಲುವಿನ ನಗೆ ಬೀರಿದೆ.

2018ರಲ್ಲಿ ಐದು ರಾಜ್ಯಗಳಿಗೆ ನಡೆದ ಚುನಾವಣೆಯಲ್ಲಿ ರಾಜಸ್ಥಾನ ಮತ್ತು ಛತ್ತೀಸಗಢ ಕಾಂಗ್ರೆಸ್ ಪಾಲಾಗಿತ್ತು. ಮಧ್ಯಪ್ರದೇಶದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಸರ್ಕಾರವನ್ನೂ ರಚಿಸಿತ್ತು. ನಂತರ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಬಿದ್ದು ಬಿಜೆಪಿ ಪಾಲಾಗಿತ್ತು. ಆದರೆ 2023ರಲ್ಲಿ ಕಾಂಗ್ರೆಸ್‌ ಹೀನಾಯ ಸೋಲು ಕಂಡಿದೆ.

ಮುಂಬರುವ ಲೋಕಸಭಾ ಚುನವಣೆಗೆ ಛತ್ತೀಸ್ ಗಢ್, ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಚುನಾವಣೆ ಫಲಿತಾಂಶ ಪ್ರಮುಖ ಪಾತ್ರ ವಹಿಸುತ್ತದೆ ಎಂದೇ ವ್ಯಾಖ್ಯಾನಿಸಲಾಗಿತ್ತು. ಇಂತಹ ಸಂದರ್ಭದಲ್ಲಿ ಮೂರು ರಾಜ್ಯಗಳು ಕಾಂಗ್ರೆಸ್‌ ಕೈತಪ್ಪಿ, ಬಿಜೆಪಿ ಪಾಲಾಗಿರುವುದು ಗಮನಿಸಬೇಕಾದ ಸಂಗತಿ.

ಹಾಗೆಯೇ ರಾಜಸ್ಥಾನದ ಮತದಾರರು ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರವನ್ನು ಬದಲಿಸುವ ಪರಂಪರೆಯನ್ನು ಮುಂದುವರಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಗೃಹ ಸಚಿವ ನರೋತ್ತಮ್‌ ಮಿಶ್ರಾ ಸೇರಿದಂತೆ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಸಂಪುಟದ 12 ಸಚಿವರು ಸೋಲು ಕಂಡಿದ್ದಾರೆ.

ಮತ ಪ್ರಮಾಣ

ರಾಜಸ್ಥಾನದಲ್ಲಿ ಬಿಜೆಪಿ – ಶೇ. 41.69 ಕಾಂಗ್ರೆಸ್‌ – ಶೇ. 39.53 ಇತರೆ – ಶೇ. 12.69 ಆರ್‌ಎಲ್‌ಟಿಪಿ ಶೇ.2.39 ಬಿಎಸ್‌ಪಿ – ಶೇ. 1.82 ನೋಟಾ – ಶೇ.0.96 ಸಿಪಿಎಂ – ಶೇ.0.96 ಮತ ಪ್ರಮಾಣ ಹೊಂದಿವೆ.

ಛತ್ತೀಸ್‌ಗಢದಲ್ಲಿ ಬಿಜೆಪಿ–ಶೇ.46.29 ಕಾಂಗ್ರೆಸ್ – ಶೇ. 42.23 ಇತರೆ – ಶೇ. 8.17 ಬಿಎಸ್‌ಪಿ– ಶೇ.2.05 ನೋಟಾ – ಶೇ. 1.26 ಮತ ಪ್ರಮಾಣ ಇದೆ.

ಮಧ್ಯಪ್ರದೇಶದಲ್ಲಿ ಬಿಜೆಪಿ– ಶೇ. 48.56 ಕಾಂಗ್ರೆಸ್ – ಶೇ. 40.40 ಇತರೆ – ಶೇ. 6.66 ಬಿಎಸ್‌ಪಿ – ಶೇ.3.40 ನೋಟಾ – ಶೇ. 0.98 ಮತ ಪ್ರಮಾಣ ಹೊಂದಿದೆ.

ತೆಲಂಗಾಣದಲ್ಲಿ ಕಾಂಗ್ರೆಸ್ – ಶೇ.39.40 ಬಿಆರ್‌ಎಸ್‌– ಶೇ.37.35 ಬಿಜೆಪಿ– ಶೇ.13.89 ಇತರೆ – ಶೇ. 6.41 ಎಐಎಂಐಎಂ– ಶೇ.2.21 ನೋಟಾ – ಶೇ. 0.73 ಮತ ಪ್ರಮಾಣ ಇದೆ.

ಲೋಕಸಭೆಗೆ ದಿಕ್ಸೂಚಿ?

ಈ ಫಲಿತಾಂಶದಿಂದ ನಿಚ್ಚಳವಾಗುವ ಸಂಗತಿ ಉತ್ತರ ಭಾರತದಲ್ಲಿ ಗಟ್ಟಿ ನೆಲೆ ಕಂಡುಕೊಳ್ಳುವುದು ಕಾಂಗ್ರೆಸ್‌ಗೆ ಕಷ್ಟವಾಗಿದೆ. ಆದರೆ, ದಕ್ಷಿಣ ಭಾರತದ ಜನರು ಬಿಜೆಪಿಗಿಂತ ಕಾಂಗ್ರೆಸ್‌ನ ಮೇಲೆ ಹೆಚ್ಚು ಒಲವು ಇರಿಸಿಕೊಂಡಿದ್ದಾರೆ ಎಂಬುದು ಮತ್ತೆ ಸಾಭೀತಾಗಿದೆ.

ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದು ರಾಜಕೀಯ ವಿಶ್ಲೇಷಕರು ಈ ಐದು ರಾಜ್ಯಗಳ ಚುನಾವಣೆಯನ್ನು ವ್ಯಾಖ್ಯಾನಿಸಿದ್ದರು. ಪ್ರತಿಕೂಲ ಸನ್ನಿವೇಶದಲ್ಲೂ ಪರಿಸ್ಥಿತಿಯನ್ನು ತನ್ನ ಪರವಾಗಿ ಪರಿವರ್ತಿಸಿಕೊಳ್ಳಬಲ್ಲ ಬಿಜೆಪಿಯ ಶಕ್ತಿಯನ್ನು ಗಮನಿಸಿದರೆ, ಈ ಫಲಿತಾಂಶ ಲೋಕಸಭಾ ಚುನಾವಣೆಯ ದಿಕ್ಸೂಚಿ ಆದರೂ ಆಶ್ಚರ್ಯ ಪಡಬೇಕಿಲ್ಲ.

ಮಿಜೋರಾಂ ಫಲಿತಾಂಶ

ಮಿಜೋರಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆ ಸೋಮವಾರ ನಡೆದಿದ್ದು, ಬಹುತೇಕ ಮುಕ್ತಾಯವಾಗಿದೆ. ಒಟ್ಟು 40 ಕ್ಷೇತ್ರಗಳಲ್ಲಿ ಜೆಡ್‌ಪಿಎಂ 27 ಕ್ಷೇತ್ರಗಳು ಗೆಲ್ಲುವುದರೊಂದಿಗೆ ಸ್ಪಷ್ಟ ಬಹುಮತ ಸಾಧಿಸಿದೆ.

ಆಡಳಿತಾರೂಢ ಎಂಎನ್ಎಫ್ 10 ಸ್ಥಾನಗಳಲ್ಲಿ ಜಯ ಗಳಿಸಿದೆ. ಉಳಿದಂತೆ ಕಾಂಗ್ರೆಸ್ 1 ಹಾಗೂ ಬಿಜೆಪಿ 2 ಸ್ಥಾನಗಳನ್ನು ತನ್ನ ತೆಕ್ಕೆಗೆ ಪಡೆದುಕೊಂಡಿವೆ.

ಇಂದಿರಾ ಗಾಂಧಿ ಭದ್ರತಾ ಉಸ್ತುವಾರಿಯಾಗಿದ್ದವ ಈಗ ನೂತನ ಸಿಎಂ

ಜೆಡ್‌ಪಿಎಂ ಮುಖ್ಯಸ್ಥ ಮತ್ತು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಲಾಲ್ದುಹೋಮ ಅವರ ರಾಜಕೀಯ ಜೀವನ ಒಂದು ಹೋರಾಟದ ಹಾದಿಯಾಗಿದೆ. ಐಪಿಎಸ್‌ ಅಧಿಕಾರಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಭದ್ರತಾ ಅಧಿಕಾರಿ, ಕಾಂಗ್ರೆಸ್ ಸಂಸದ ಸೇರಿದಂತೆ ಇನ್ನು ಹಲವು ಬದುಕಿನ ದಾರಿಗಳು ಲಾಲ್ದುಹೋಮ ಅವರದ್ದಾಗಿದೆ.

74 ವರ್ಷದ ಲಾಲ್ಡುಹೋಮ ಅವರು ಎಪ್ಪತ್ತರ ದಶಕದಲ್ಲಿಯೇ ಐಪಿಎಸ್‌ ಅಧಿಕಾರಿಯಾಗಿ ಗೋವಾ ರಾಜ್ಯದ ಕೇಡರ್‌ ಆಗಿ ಸೇರ್ಪಡೆಗೊಂಡರು. ಅವರ ಸೇವೆ ಗುರುತಿಸಿದ ಅಂದಿನ ಕೇಂದ್ರ ಸರ್ಕಾರ ಅವರನ್ನು ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರ ಭದ್ರತಾ ಅಧಿಕಾರಿಯನ್ನಾಗಿ ನೇಮಿಸಿತ್ತು. ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದರಿಂದ ಐಪಿಎಸ್‌ ಹುದ್ದೆಗೆ ಎಂಬತ್ತರ ದಶಕದಲ್ಲಿಯೇ ರಾಜೀನಾಮೆ ನೀಡಿದರು. ಆನಂತರ 1984ರಲ್ಲಿ ಮಿಜೋರಾಂನಿಂದ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದರು.

ಆದರೆ ಕೆಲವೇ ಸಮಯದಲ್ಲಿ ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಅನರ್ಹತೆ ಎದುರಿಸಿದ ಮೊದಲ ಸಂಸದರಾಗಿ ಲಾಲ್ದುಹೋಮ ಅವರ ರಾಜಕೀಯ ಹಾದಿ ಮಹತ್ವದ ತಿರುವು ಪಡೆಯಿತು. ಪಕ್ಷಾಂತರ ನಿಷೇಧ ಕಾಯಿದೆ ಅಡಿ ಶಿಕ್ಷೆಗೆ ಗುರಿಯಾದ ದೇಶದ ಮೊದಲ ಸಂಸದರು ಇವರಾದರು. ಆದರೆ ಮಿಜೋರಾಂನಲ್ಲಿ ಶಾಂತಿ ಹೋರಾಟವನ್ನು ಮುಂದುವರೆಸಿದರು.

ಜೋರಾಮ್‌ ನ್ಯಾಷನಲ್‌ ಪಾರ್ಟಿ ಸ್ಥಾಪನೆ

1997ರಲ್ಲಿ ಜೋರಾಮ್‌ ನ್ಯಾಷನಲ್‌ ಪಾರ್ಟಿಯನ್ನು ಲಾಲ್ಡುಹೋಮ ಆರಂಭಿಸಿ ವಿಧಾನಸಭೆಗೆ ಆಯ್ಕೆಯಾದರೂ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಧ್ಯವಾಗಲಿಲ್ಲ. ಆನಂತರ ಇದನ್ನು ಜೋರಾಮ್‌ ಪೀಪಲ್ಸ್‌ ಮೂವ್ ಮೆಂಟ್‌ ಎಂದು ಬದಲಿಸಿ 2018ರ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದರು. ಎರಡನೇ ಬಾರಿವೂ ತಾವೂ ಎರಡು ಕಡೆ ಗೆದ್ದರೂ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿಲ್ಲ. ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾದರು.

ಆದರೆ, ಅವರ ಪಕ್ಷಕ್ಕೆ ಮಾನ್ಯತೆ ಇಲ್ಲದ್ದರಿಂದ ಪಕ್ಷೇತರ ಶಾಸಕರಾಗಿ ಲಾಲ್ಡುಹೋಮ ಅವರನ್ನು ಪ್ರತಿಪಕ್ಷ ನಾಯಕರನ್ನಾಗಿ ನೇಮಿಸಲಾಯಿತು. ಇದು ಸರಿಯಲ್ಲವೆಂದು ಪಕ್ಷಾಂತರ ಕಾಯಿದೆಯಡಿ ರಾಜ್ಯ ಸರ್ಕಾರ ದೂರು ನೀಡಿತ್ತು. ಇದರಿಂದಾಗಿ ಎರಡನೇ ಬಾರಿಗೆ ಪಕ್ಷಾಂತರ ಕಾಯಿದೆಯಡಿ ಮತ್ತೆ ಸ್ಥಾನ ಕಳೆದುಕೊಂಡರು.

ನ್ಯಾಯಾಲಯದ ಮೊರೆ ಹೋಗಿ ಮರು ಚುನಾವಣೆ ಎದುರಿಸಿ ಗೆದ್ದು ಬಂದರು. ಇದಾದ ಬಳಿಕ ಎಂಎನ್‌ಎಫ್‌ ಆಡಳಿತದ ವಿರುದ್ದ ಸದನದ ಹೊರಗೆ ಹಾಗೂ ಸಾರ್ವಜನಿಕರೊಂದಿಗೆ ಹೋರಾಟ ಮಾಡಿಕೊಂಡು ಬಂದ ಲಾಲ್ಡುಹೋಮ ಈ ಬಾರಿ ಭಾರೀ ಅಂತರದೊಂದಿಗೆ ಜಯಗಳಿಸಿ ಮುಖ್ಯಮಂತ್ರಿಯಾಗಲಿದ್ದಾರೆ. ನಾಲ್ಕು ದಶಕದ ಕನಸು ಈಗ ನನಸಾಗಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments