ಅಭಿವೃದ್ಧಿ ಹೆಸರಿನ ಪರಿಸರ ನಾಶ ಗಂಭೀರವಾದ ಸಂಗತಿಯಾಗಿದ್ದು,
ಪ್ರಾಣಿ ಸಂಪತ್ತಿನ ಸಾಂಪ್ರದಾಯಿಕ ಜಾಗ ಒತ್ತುವರಿಯೇ ವನ್ಯಜೀವಿ-ಮಾನವ ಸಂಘರ್ಷಕ್ಕೆ ಕಾರಣ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.
ತುಮಕೂರಿನ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರವು ಆಯೋಜಿಸಿದ್ದ “ಪರಿಸರ ಪತ್ರಿಕೋದ್ಯಮ ಸಂಭ್ರಮ” ವಿಚಾರಗೋಷ್ಠಿಯಲ್ಲಿ ಸಮಾರೋಪ ಮಾತುಗಳನ್ನಾಡಿದರು.
ಇದು ಕೇವಲ ಒಂದು ಶೈಕ್ಷಣಿಕ ಕಾರ್ಯಕ್ರಮವಾಗಿರದೆ, ಇಂದಿನ ಪರಿಸರ ಬಿಕ್ಕಟ್ಟಿನ ಕಾಲದಲ್ಲಿ ಮಾಧ್ಯಮಗಳ ಜವಾಬ್ದಾರಿಯನ್ನು ನೆನಪಿಸುವ ಮಹತ್ವದ ವೇದಿಕೆಯಾಗಿದೆ ಎಂದರು.
ಪತ್ರಕರ್ತರಾಗುವವರಿಗೆ ನೋಟ ಮತ್ತು ಗ್ರಹಿಕೆ ಬಹಳ ಮುಖ್ಯ. ಒಂದು ಸಂಗತಿಯನ್ನು ಹೇಗೆ ನೋಡುತ್ತೇವೆ, ಹೇಗೆ ಗ್ರಹಿಸುತ್ತೇವೆ ಎನ್ನುವುದು ಪತ್ರಕರ್ತನ ವೃತ್ತಿಪರತೆಯನ್ನು ನಿರ್ಧರಿಸುತ್ತದೆ ಎಂದರು.
ಪತ್ರಕರ್ತರಾಗುವವರು ದಿನಕ್ಕೆ ಕನಿಷ್ಠ ಐದು ಪತ್ರಿಕೆಗಳನ್ನು ಓದಬೇಕು. ಈಗ ತಮ್ಮದೇ ಪತ್ರಿಕೆಗಳನ್ನು ಓದುವವರೇ ಕಡಿಮೆ. ಹಳ್ಳಿಯಿಂದ ದಿಲ್ಲಿಯವರೆಗೆ ಎಲ್ಲಾ ವಿದ್ಯಾಮಾನಗಳನ್ನು ಸರಿಯಾಗಿ ಗ್ರಹಿಸಿ ಜನರ ದೃಷ್ಟಿಕೋನದಿಂದ ಮಂಡಿಸುವುದು ಮುಖ್ಯ. ಹಿರಿಯರು ಹಾಕಿಕೊಟ್ಟ ಬುನಾದಿ ಕಾರಣದಿಂದ ನಮ್ಮ ಪತ್ರಿಕಾ ವೃತ್ತಿಯ ಘನತೆ ಈಗಲೂ ಉನ್ನತ ಮಟ್ಟದಲ್ಲಿದೆ. ಈ ಘತೆಯನ್ನು ಮುಂದುವರೆಸಬೇಕಿದೆ. ಇವತ್ತಿನ ಮಾಧ್ಯಮಗಳು ಕಾರ್ಪೋರೇಟ್ ಹಿಡಿತಕ್ಕೆ ಸಿಲುಕಿದ್ದರೂ ಈ ಮಿತಿಯಲ್ಲೇ ಹೊಸ ಹೊಸ ಮಾರ್ಗಗಳ ಮೂಲಕ ವೃತ್ತಿಪರತೆಯನ್ನು ಮುಂದುವರೆಸಬೇಕು ಎಂದು ಹೇಳಿದರು.
ಈ ಎರಡು ದಿನಗಳ ವಿಚಾರಗೋಷ್ಠಿ ಪರಿಸರ ಮತ್ತು ಪತ್ರಿಕೋದ್ಯಮದ ನಡುವಿನ ಕೊಂಡಿಯನ್ನು ಬಲಪಡಿಸುವ ದಿಕ್ಕಿನಲ್ಲಿ ಮಹತ್ವದ ಒಳನೋಟಗಳನ್ನು ಒದಗಿಸಿದೆ.
ಇಂದು ಜನಸಾಮಾನ್ಯರಲ್ಲಿ ಪರಿಸರ ಕಾಳಜಿಯನ್ನು ಬೆಳೆಸುವ ಅಗತ್ಯ ಇಲ್ಲ. ಏಕೆಂದರೆ ಪರಿಸರದ ಮೇಲಾಗುತ್ತಿರುವ ದೌರ್ಜನ್ಯದ ಅಡ್ಡ ಪರಿಣಾಮಗಳಿಗೆ ಮೊದಲ ಬಲಿ ಆಗುತ್ತಿರುವವರೇ ಜನ ಸಾಮಾನ್ಯರು. ಹೀಗಾಗಿ ಪತ್ರಕರ್ತರು ಜನರಿಗೆ ತಿಳಿವಳಿಕೆ ಹೇಳುವುದಕ್ಕಿಂತ ಹೆಚ್ಚಾಗಿ ಅವರ ಧ್ವನಿಯಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು.
ಮಾಧ್ಯಮ ವಿದ್ಯಾರ್ಥಿಗಳು ಪರಿಸರ ವರದಿಗಾರಿಕೆಯಲ್ಲಿರುವ ಸವಾಲುಗಳು ಮತ್ತು ಅವಕಾಶಗಳನ್ನು ಅರಿತುಕೊಳ್ಳಬೇಕು.
ತುಮಕೂರು ಜಿಲ್ಲೆಯೂ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಪರಿಸರ ಸಮಸ್ಯೆಗಳನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೇಗೆ ಬಿಂಬಿಸಬೇಕು, ಸ್ಥಳೀಯವಾಗಿ ನಡೆಯುವ ಪರಿಸರ ಹೋರಾಟಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಹೋರಾಟಗಳ ಜೊತೆ ಬೆಸೆಯುವ ಮೂಲಕ ಸ್ಥಳೀಯ ಹೋರಾಟಗಳಿಗೆ ನೈತಿಕ ಮತ್ತು ಜಾಗತಿಕ ಶಕ್ತಿ ಒದಗಿಸುವ ಅಗತ್ಯವಿದೆ ಎಂದು ತಿಳಿಸಿದರು.
ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಪರಿಸರ ನಾಶವನ್ನು ಪ್ರಶ್ನಿಸುವ ಧೈರ್ಯವನ್ನು ಪತ್ರಿಕೋದ್ಯಮ ತೋರಿಸಬೇಕು.
ಕೇವಲ ನಕಾರಾತ್ಮಕ ಸುದ್ದಿಗಳ ಬದಲಿಗೆ, ಪರಿಸರ ಹೋರಾಟ ಮತ್ತು ಪರಿಸರ ಸಂರಕ್ಷಣೆಯ ಯಶಸ್ವೀ ಹೋರಾಟಗಳ ಮಾದರಿಗಳನ್ನು ಸ್ಥಳೀಯ ಮಟ್ಟದಲ್ಲೂ ಪರಿಚಯಿಸುವ ಕೆಲಸ ಆಗಬೇಕಿದೆ ಎಂದರು.
ಇತ್ತೀಚಿಗೆ ಬೀದರ್ ನಲ್ಲಿ ಬಿಸಿಲಿನ ತಾಪಕ್ಕೆ ಯುವಕನೊಬ್ಬ ಮೃತಪಟ್ಟರೆ, ಇದಷ್ಟೆ ಸುದ್ದಿ ಆಗುವುದಕ್ಕಿಂತ
ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯಂತಹ ಸಂಕೀರ್ಣ ವಿಷಯಗಳನ್ನು ಸಾಮಾನ್ಯ ಜನರಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ವಿವರಿಸುವಂತಾಗಬೇಕು. ಪರಿಸರ ಪತ್ರಿಕೋದ್ಯಮವು ಕೇವಲ ಕಚೇರಿಯಲ್ಲಿ ಕುಳಿತು ಮಾಡುವ ಕೆಲಸವಲ್ಲ; ಇದು ಕಾಡು, ಮೇಡು ಹಾಗೂ ಹಳ್ಳಿಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಅರಿಯುವ ಕೆಲಸ ಎಂದು ತಿಳಿಸಿದರು.
ಪತ್ರಕರ್ತರಿಗೆ ದೇಶದ ಪರಿಸರ ಕಾಯ್ದೆಗಳ ಬಗ್ಗೆ ಕನಿಷ್ಠ ಜ್ಞಾನವಿರಬೇಕು, ಆಗ ಮಾತ್ರ ಅಕ್ರಮ ಗಣಿಗಾರಿಕೆ ಅಥವಾ ಅರಣ್ಯ ಒತ್ತುವರಿಯಂತಹ ಪ್ರಕರಣಗಳನ್ನು ಸಮರ್ಥವಾಗಿ ವರದಿ ಮಾಡಲು ಸಾಧ್ಯ. ಸಾಮಾಜಿಕ ಜಾಲತಾಣಗಳನ್ನು ಪರಿಸರ ಜಾಗೃತಿಯ ಅಭಿಯಾನಗಳನ್ನು ರೂಪಿಸಲು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಅರಿತುಕೊಳ್ಳಿ ಎಂದು ಸಲಹೆ ನೀಡಿದರು.
ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರವು ಇಂತಹ ಗೋಷ್ಠಿಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸೈದ್ಧಾಂತಿಕ ತಿಳುವಳಿಕೆಯ ಜೊತೆಗೆ ಸಾಮಾಜಿಕ ಕಳಕಳಿಯನ್ನು ಬಿತ್ತುವಲ್ಲಿ ಯಶಸ್ವಿಯಾಗುತ್ತಿರುವುದು ಅಭಿನಂದನೀಯ ಎಂದು ಮೆಚ್ವುಗೆ ವ್ಯಕ್ತಪಡಿಸಿದರು.


