ಕನ್ನಡ ಚಲನ ಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯ ಸೇರಿದಂತೆ ಇನ್ನಿತರೆ ಸಮಸ್ಯೆಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುವಂತೆ ‘ಫೈರ್’ (ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಆಂಡ್ ಇಕ್ವಾಲಿಟಿ ಸಂಸ್ಥೆ) ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಈ ಕುರಿತು ‘ಫೈರ್’ ಸಂಸ್ಥೆಯ ಅಧ್ಯಕ್ಷರು ಮತ್ತು ನಿರ್ದೇಶಕರಾದ ಕವಿತಾ ಲಂಕೇಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, “ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯು ಮಲೆಯಾಳಂ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಹಿಂಸೆ ಮತ್ತು ಇತರೆ ಸಮಸ್ಯೆಗಳನ್ನು ಬಹಿರಂಗಪಡಿಸಿದ ನಂತರ, ಕರ್ನಾಟಕ ಸರ್ಕಾರವು ಕನ್ನಡ ಚಲನ ಚಿತ್ರೋದ್ಯಮದಲ್ಲಿನ ಈ ರೀತಿಯ ಸಮಸ್ಯೆಗಳನ್ನು ಪರಿಹರಿಸಲು ಈ ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
“ಕನ್ನಡ ಚಲನಚಿತ್ರೋದ್ಯಮದಲ್ಲಿ ದೇಶದ ಮೊದಲ ಚಲನ ಚಿತ್ರೋದ್ಯಮದ ಆಂತರಿಕ ದೂರುಗಳ ಸಮಿತಿಯನ್ನು ಸ್ಥಾಪಿಸುವಲ್ಲಿ ನಮ್ಮ ‘ಫೈರ್’ ಸಂಸ್ಥೆಯು ಪ್ರಮುಖ ಪಾತ್ರ ವಹಿಸಿದೆ. ಹಾಗೆಯೇ ಲೈಂಗಿಕ ಕಿರುಕುಳದ ಸಂತ್ರಸ್ತರನ್ನು (2017 ರಿಂದ ಈ ವರೆಗೂ) ನಮ್ಮ ಸಂಸ್ಥೆ ಬೆಂಬಲಿಸುತ್ತಲೇ ಬಂದಿದೆ. ಸದ್ಯ ಚಲನ ಚಿತ್ರೋದ್ಯಮದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಸುರಕ್ಷಿತವಾದ ಕೆಲಸದ ವಾತಾವರಣವನ್ನು ನೀಡುವುದಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯವಾದ ಅಂಶವೆಂದು ನಾವು ಭಾವಿಸುತ್ತೇವೆ” ಎಂದು ತಿಳಿಸಿದ್ದಾರೆ.
“ಲೈಂಗಿಕ ಕಿರುಕುಳ ಸೇರಿದಂತೆ ಕನ್ನಡ ಚಲನ ಚಿತ್ರೋದ್ಯಮದಲ್ಲಿ (ಕೆಎಫ್‌ಐ) ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ತನಿಖೆ ಮಾಡುವುದು ಮತ್ತು ಚಿತ್ರೋದ್ಯಮದಲ್ಲಿ ಎಲ್ಲ ಮಹಿಳೆಯರಿಗೂ ಸುರಕ್ಷಿತವಾದ ಮತ್ತು ನ್ಯಾಯಯುತವಾದ ವಾತಾವರಣವನ್ನು ಸೃಷ್ಟಿಸಲು ಅದಕ್ಕೆ ತಕ್ಕ ಪಾಲಿಸಿಗಳನ್ನು ರಚಿಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ಈ ಸಮಿತಿಯ ನೇತೃತ್ವ ವಹಿಸಲು ತಮ್ಮ ವೃತ್ತಿಜೀವನದುದ್ದಕ್ಕೂ ಲಿಂಗ ಸಮಾನತೆಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರನ್ನು ನೇಮಿಸಬೇಕು. ಈ ಪ್ರಕ್ರಿಯೆಯಲ್ಲಿ ಸರ್ಕಾರಕ್ಕೆ ನಮ್ಮ ನೆರವು ಅಗತ್ಯವಾದಲ್ಲಿ ‘ಫೈರ್’ ಸಂಸ್ಥೆಯು ಸಹಾಯ ನೀಡಲು ಸಿದ್ಧವಾಗಿದೆ” ಎಂದಿದ್ದಾರೆ.
“ವರದಿಯನ್ನು 3 ತಿಂಗಳುಗಳ ಒಳಗಾಗಿ ಸಂಪೂರ್ಣಗೊಳಿಸಬೇಕೆಂದು ‘ಫೈರ್’ ಸಂಸ್ಥೆಯು ವಿನಂತಿಸಿಕೊಳ್ಳುತ್ತಿದೆ. ಅದರ ವಿವರಗಳನ್ನು ಮತ್ತು ಫಲಿತಾಂಶವನ್ನು ಶೀಘ್ರವಾಗಿ ಸಾರ್ವಜನಿಕಗೊಳಿಸಬೇಕೆಂದು ನಾವು ಬಯಸುತ್ತೇವೆ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ‘ಫೈರ್’ ಸಂಸ್ಥೆಯ ಪತ್ರಕ್ಕೆ ನೂರಾರು ನಟ, ನಟಿಯರು, ಪತ್ರಕರ್ತರು, ಹಿರಿಯ ಸಾಹಿತಿಗಳು ಬೆಂಬಲ ಸೂಚಿಸಿ ಸಹಿ ಮಾಡಿದ್ದಾರೆ.