Homeಕರ್ನಾಟಕಆರ್.ಧ್ರುವನಾರಾಯಣ ಅವರು ಮಾದರಿ ಜನನಾಯಕರಾಗಿದ್ದರು: ಸಿಎಂ ಸಿದ್ದರಾಮಯ್ಯ

ಆರ್.ಧ್ರುವನಾರಾಯಣ ಅವರು ಮಾದರಿ ಜನನಾಯಕರಾಗಿದ್ದರು: ಸಿಎಂ ಸಿದ್ದರಾಮಯ್ಯ

ಆರ್.ಧ್ರುವನಾರಾಯಣ ಅವರು ಮಾದರಿ ಜನನಾಯಕರಾಗಿದ್ದರು. ಕಾಲಾನಂತರವೂ ಅವರ ಜನಪ್ರಿಯತೆ ಬೆಳೆಯುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಮರಿಸಿದರು.

ದಿವಂಗತ ಆರ್.ಧ್ರುವನಾರಾಯಣ ಅವರ ಪುಣ್ಯಸ್ಮರಣೆ ಕಾರ್ಯಕ್ರಮಕ್ಕಾಗಿ ಚಾಮರಾಜನಗರಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು, ಹೆಗ್ಗವಾಡಿಗೆ ತೆರಳಿ ಧ್ರುವನಾರಾಯಣ ಅವರ ಸಮಾಧಿಗೆ ನಮನ ಸಲ್ಲಿಸಿದರು. ಬಳಿಕ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿ ಅವರ ಭಾಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

“ಕ್ಷೇತ್ರದ ಅಭಿವೃದ್ಧಿ ಮತ್ತು ಚಾಮರಾಜನಗರ ಜಿಲ್ಲೆಯ ಪ್ರಗತಿ ನಿರಂತರ ಪ್ರಯತ್ನ ಮಾಡಿದ್ದ ಧ್ರುವನಾರಾಯಣ ಅವರು ಜನರ ಮಧ್ಯ ಓಡಾಡದ ದಿನವೇ ಇಲ್ಲ. ಇವರದ್ದು ಜನಪರ ರಾಜಕಾರಣಕ್ಕೆ ಮಾದರಿ ವ್ಯಕ್ತಿತ್ವ” ಎಂದರು.

“ಕಾಂಗ್ರೆಸ್ ಸಿದ್ಧಾಂತ ಮತ್ತು ಕಾಂಗ್ರೆಸ್ ಪಕ್ಷದ ಆಸ್ತಿಯಾಗಿದ್ದ ಧ್ರುವನಾರಾಯಣ ಅವರು ವಿದ್ಯಾರ್ಥಿ ಕಾಂಗ್ರೆಸ್ ಅವಧಿಯಿಂದ ಪಕ್ಷದ ಕಾರ್ಯಾಧ್ಯಕ್ಷರಾಗುವವರೆಗೂ ಬೆಳೆದರು. ಶಾಸಕರಾಗಿ, ಸಂಸದರಾಗಿ ಕ್ಷೇತ್ರದ ಅಭಿವೃದ್ಧಿಗೆ ನಿರಂತರ ಶ್ರಮಿಸಿದವರು. ಹೀಗಾಗಿ ಇವರ ಅಗಲಿಕೆ ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ, ಕನ್ನಡ ನಾಡಿಗೆ ತುಂಬಲಾರದ ನಷ್ಟ ಆಗಿದೆ” ಎಂದು ಹೇಳಿದರು.

“ಅಜಾತಶತ್ರು ಆಗಿದ್ದ ಧ್ರುವನಾರಾಯಣ ಅವರ ವ್ಯಕ್ತಿತ್ವವನ್ನೇ ಅವರ ಪುತ್ರ ಶಾಸಕ ದರ್ಶನ್ ಧ್ರುವನಾರಾಯಣ ಅವರೂ ಹೊಂದಿದ್ದು ಜನಪರತೆ ಬೆಳೆಸಿಕೊಂಡಿದ್ದಾರೆ. ಇವರಿಗೆ ನಾನು ಸಂಪೂರ್ಣ, ಸಹಕಾರ, ಬೆಂಬಲ ನೀಡುತ್ತೇನೆ” ಎಂದರು.

“ರಾಜಕಾರಣಿಗೆ ಸೈದ್ಧಾಂತಿಕ ಸ್ಪಷ್ಟತೆ ಮತ್ತು ಬದ್ಧತೆ ಅತ್ಯಗತ್ಯ. ಧ್ರುವನಾರಾಯಣ ಅವರಿಗೆ ಇವೆರಡೂ ಇತ್ತು. ಸಮಾಜದ ಅಸಮಾನತೆ ಅಳಿಸಲು, ದುರ್ಬಲರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುವ ಕೆಲಸವನ್ನು ಅವರು ಮಾಡುತ್ತಿದ್ದರು. ಅಂಬೇಡ್ಕರ್ ಅವರ ಸಂವಿಧಾನದ ಬಗ್ಗೆ ಧ್ರುವನಾರಾಯಣ ಅಪಾರವಾದ ನಂಬಿಕೆ, ಗೌರವ ಹೊಂದಿದ್ದರು. ಈಗ ಈ ಸಂವಿಧಾನವನ್ನು ಬದಲಾಯಿಸುವ ಪ್ರಯತ್ನಗಳು ನಡೆಯುತ್ತಿವೆ. ಸಂವಿಧಾನ ಉಳಿದರೆ ಮಾತ್ರ ನಾವೂ ನೀವೂ ಉಳಿಯುತ್ತೇವೆ” ಎಂದು ಎಚ್ಚರಿಸಿದರು.

ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಶಾಸಕ ದರ್ಶನ್ ದ್ರುವನಾರಾಯಣ್, ಅನಿಲ್ ಚಿಕ್ ಮಾದು, ರವಿಶಂಕರ್, ಮಾಜಿ ಶಾಸಕರಾದ ಯತೀಂದ್ರ ಸಿದ್ದರಾಮಯ್ಯ ಸೇರಿ ಮೈಸೂರು, ಚಾಮರಾಜನಗರ ಜಿಲ್ಲೆಯ ಶಾಸಕರುಗಳು, ಮುಖಂಡರು ಮತ್ತು ಜಿಲ್ಲಾ ಮುಖಂಡರುಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments