ಲೋಕಸಭೆ ಚುನಾವಣೆಯಲ್ಲಿ ಹೊತ್ತಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಯಡಿಯೂರಪ್ಪ ಕುಟುಂಬದ ವಿರುದ್ಧ ಕಿಡಿಕಾರಿದ್ದಾರೆ. ಯಾದಗಿರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಯಡಿಯೂರಪ್ಪ ಮತ್ತು ವಿಜಯೇಂದ್ರ ಮುಖ ನೋಡಿ ಜನರು ಓಟು ಹಾಕುವುದಿಲ್ಲ”ಎಂದಿದ್ದಾರೆ.
“ನಮ್ಮಿಂದೇ ಓಟು ಬರುತ್ತವೆ ಎಂಬುದು ಅಪ್ಪ-ಮಕ್ಕಳದ್ದು ಬರೀ ಕಲ್ಪನೆ. ನರೇಂದ್ರ ಮೋದಿ ಅವರ ಮುಖ ನೋಡಿ ಓಟು ಹಾಕುತ್ತಾರೆ. ನರೇಂದ್ರ ಮೋದಿ, ಭಾರತ, ಹಿಂದೂತ್ವ, ಅಯೋಧ್ಯೆ ರಾಮ ಮಂದಿರ ಮೇಲೆಯೇ ಚುನಾವಣೆ ನಡೆಯಲಿದೆ” ಎಂದರು.
“ಕುತಂತ್ರಿಗಳು ಮಾಡಿಸುತ್ತಿರುವ ಗೋಬ್ಯಾಕ್ ಹಾಗೂ ಕಮ್ ಇನ್ ನಡೆಯಲ್ಲ. ತಮ್ಮ ಕುಟುಂಬದವರೇ ಕೇಂದ್ರದಲ್ಲಿ ಮಂತ್ರಿಯಾಗಬೇಕು. ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಬೇಕೆಂದು ಕಲ್ಪನೆಯಿಟ್ಟುಕೊಂಡು ಹೋಗುತ್ತಾರಲ್ಲ. ಇದು ಸಾಧ್ಯವಿಲ್ಲ. 2024ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ವಂಶವಾದ, ಭ್ರಷ್ಟಾಚಾರ, ಅಡ್ಜೆಸ್ಟ್ಮೆಂಟ್ ಮೂರನ್ನೂ ಕಿತ್ತಿಹಾಕಲಿದ್ದಾರೆ” ಎಂದು ಹೇಳಿದರು.
“ಅವರಿಗೆ ಒಮ್ಮೆಯಾದರೂ 120 ಬಂದಿವೆಯೇ, ಅಪ್ಪ-ಮಕ್ಕಳು ಎಲ್ಲರನ್ನೂ ಮುಗಿಸಬೇಕೆಂದು ಪ್ರಯತ್ನಿಸುತ್ತಿದ್ದಾರೆ. ನನಗೂ ಲೋಕಸಭೆ ಚುನಾವಣೆಗೆ ನಿಲ್ಲಿ ಎಂದರು. ಬಾಗಲಕೋಟೆ, ಬೆಳಗಾವಿ, ಕೊಪ್ಪಳ ಎಲ್ಲಿಯಾದರೂ ನಿಲ್ಲಿ ಎಂದು ಚಾಯಸ್ ಕೊಟ್ಟರು. ನಾನು ಕೇಂದ್ರದಲ್ಲಿ ಮಂತ್ರಿ ಮಾಡ್ತೀವಿ ಅಂದರೂ ನಿಲ್ಲೋದಿಲ್ಲ ಎಂದು ಹೇಳಿದ್ದೇನೆ” ಎಂದು ತಿಳಿಸಿದರು.
“ರಾಜ್ಯದಲ್ಲಿ ಹೊಂದಾಣಿಕೆ ರಾಜಕಾರಣ ಯಾರು ಮಾಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ನಾನು ವಿಧಾನಸಭೆಯಲ್ಲೇ ಹೇಳಿದ್ದೇನೆ. ಕದ್ದು ಮುಚ್ಚಿ ಹೇಳಿಲ್ಲ. ಅವರೆಲ್ಲರ ಅಂತ್ಯ ಲೋಕಸಭೆ ಚುನಾವಣೆ ನಂತರ ಆಗಲಿದೆ. ಅಂತಹವರಿಗೆ ಗೇಟ್ ಪಾಸ್ ನೀಡಲಾಗುತ್ತದೆ” ಎಂದು ಹೇಳಿದರು.
ಸಿಎಎ ಬಿಜೆಪಿಯ ಸಂಕಲ್ಪ
ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದಲ್ಲಿ ಹಿಂದೂಗಳು ಅಸುರಕ್ಷಿತವಾಗಿದ್ದಾರೆ. ಆದ್ದರಿಂದ, ಜಗತ್ತಿನೆಲ್ಲೆಡೆ ಅಸುರಕ್ಷಿತವಾಗಿರುವ ಹಿಂದೂಗಳಿಗೆ ನಾಗರಿಕತ್ವ ಕೊಡಬೇಕೆಂಬುದು ಮೊದಲಿನಿಂದಲೂ ಬಿಜೆಪಿಯ ಸಂಕಲ್ಪ ಇತ್ತು. ಸಿಎಎ ಜಾರಿಯಿಂದ ಜಗತ್ತಿನ ವಿವಿಧ ದೇಶದಲ್ಲಿ ಅಸುರಕ್ಷಿತವಾಗಿರುವ ಹಿಂದೂಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಭಾರತೀಯ ನಾಗರಿಕತ್ವ ಕೊಡುವ ಒಳ್ಳೆಯ ಅವಕಾಶವನ್ನು ಕೊಟ್ಟಿದ್ದಾರೆ” ಎಂದರು.