Homeಕರ್ನಾಟಕಅನುದಾನ | ಕೇಂದ್ರದ ಅನ್ಯಾಯ ವಿರೋಧಿಸಿ ಫೆ.7ಕ್ಕೆ ದೆಹಲಿಯಲ್ಲಿ ಪ್ರತಿಭಟನೆ: ಸಿಎಂ ಸಿದ್ದರಾಮಯ್ಯ

ಅನುದಾನ | ಕೇಂದ್ರದ ಅನ್ಯಾಯ ವಿರೋಧಿಸಿ ಫೆ.7ಕ್ಕೆ ದೆಹಲಿಯಲ್ಲಿ ಪ್ರತಿಭಟನೆ: ಸಿಎಂ ಸಿದ್ದರಾಮಯ್ಯ

ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಎಸಗಿರುವ ಅನ್ಯಾಯವನ್ನು ವಿರೋಧಿಸಿ ಫೆಬ್ರವರಿ 7ರಂದು ನವದೆಹಲಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಹಂಪಿ ವಿಶ್ವವಿದ್ಯಾಲಯ ಆವರಣದ ಹೆಲಿಪ್ಯಾಡ್ ನಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ರಾಜ್ಯಕ್ಕೆ ಕೇಂದ್ರ ಬಜೆಟ್ ನಿಂದ ಅನ್ಯಾಯವಾಗಿರುವ ಕಾರಣಕ್ಕೆ ನವದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ರಾಜ್ಯ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ” ಎಂದರು.

“ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಕರ್ನಾಟಕಕ್ಕೆ ಏನನ್ನೂ ನೀಡದೇ ರಾಜ್ಯಕ್ಕೆ ಅನ್ಯಾಯವನ್ನು ಎಸೆಗಲಾಗಿದೆ. ರಾಜ್ಯಕ್ಕೆ ಬರಗಾಲದ ಪರಿಹಾರವಾಗಿ ಎನ್ ಡಿಆರ್ ಎಫ್ ನಿಂದ 4663 ಕೋಟಿ ರೂ. ಮೊತ್ತವನ್ನು ನೀಡಲು ಕೇಂದ್ರಕ್ಕೆ ಮನವಿ ಸಲ್ಲಿಸಿ ನಾಲ್ಕು ತಿಂಗಳೂ ಕಳೆದಿದ್ದರೂ ಕೇಂದ್ರದಿಂದ ಯಾವ ಸ್ಪಂದನೆಯೂ ದೊರೆತಿಲ್ಲ. ಈ ಎಲ್ಲ ಕಾರಣಗಳಿಗಾಗಿ ಅನಿವಾರ್ಯವಾಗಿ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ” ಎಂದು ಹೇಳಿದರು.

ದೇಶ ಅಖಂಡವಾಗಿರಬೇಕು

ಸಂಸದ ಡಿ.ಕೆ.ಸುರೇಶ್ ಅವರ ದೇಶವನ್ನು ಇಬ್ಭಾಗವಾಗಿಸುವ ಹೇಳಿಕೆ ಕೇಂದ್ರ ಅಧಿವೇಶನದಲ್ಲಿ ಚರ್ಚೆಯಾಗಿರುವ ಬಗ್ಗೆ ಬಿಜೆಪಿಯವರು ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, “ದೇಶವನ್ನು ಇಬ್ಬಾಗವಾಗಿಸುವ ಉದ್ದೇಶದಿಂದ ಸಂಸದ ಡಿ.ಕೆ.ಸುರೇಶ್ ಅವರು ಆ ಹೇಳಿಕೆಯನ್ನು ನೀಡಿರುವುದಿಲ್ಲ. ದೇಶ ಅಖಂಡವಾಗಿರಬೇಕೆಂಬುದು ನಾವು ಬಯಸುತ್ತೇವೆ. ಬಿಜೆಪಿಯವರು ಕೇಂದ್ರ ಬಜೆಟ್ ನಲ್ಲಿ ಬಡವರು, ರೈತರು, ನಿರುದ್ಯೋಗ ವಿಷಯಗಳ ಬಗ್ಗೆ ಚರ್ಚೆ ಮಾಡಿ, ಪರಿಹಾರ ನೀಡುವ ಬದಲು ಇಂತಹ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಾರೆ” ಎಂದರು.

“ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿದ್ದರೂ, ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ. 15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ 5495 ಕೋಟಿ ರೂ. ಹಾಗೂ ಇಲ್ಲಿನ ಫೆರಿಫೆರಲ್ ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಪ್ರಮುಖ ಯೋಜನೆಗಳಿಗೆ 6000 ಕೋಟಿ ರೂ. ಒದಗಿಸುವ ಸಾಧ್ಯತೆ ಇತ್ತು. ಆದರೆ ಯಾವುದೇ ಅನುದಾನ ನೀಡಿಲ್ಲ” ಎಂದು ತಿಳಿಸಿದರು.

ಜನರಿಗಾಗಿ ಸಾಂಸ್ಕೃತಿಕ ಉತ್ಸವ

“ಇಂದಿನಿಂದ ಮೂರು ದಿನಗಳ ಕಾಲ ಹಂಪ ಉತ್ಸವ ನಡೆಯಲಿದೆ. ಜನರಿಗಾಗಿ ಹಾಗೂ ಕಲಾವಿದರಿಗಾಗಿ ಉತ್ಸವಗಳನ್ನು ಆಚರಿಸಲಾಗುತ್ತದೆ. ಬರಗಾಲವಿದ್ದರೂ ಉತ್ಸವಗಳನ್ನು ಮಾಡದೇ ಇರಲು ಸಾಧ್ಯವಿಲ್ಲ. ಇದೊಂದು ಸಾಂಸ್ಕೃತಿಕ ಉತ್ಸವ” ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments