Homeಕರ್ನಾಟಕಪೋಡಿ ಮುಕ್ತ ಗ್ರಾಮ: ಅಭಿಯಾನದ ರೀತಿ ನಡೆಸಿ, ರೈತರ ಸಮಸ್ಯೆಗೆ ಮುಕ್ತಿ: ಸಚಿವ ಕೃಷ್ಣಬೈರೇಗೌಡ ಭರವಸೆ

ಪೋಡಿ ಮುಕ್ತ ಗ್ರಾಮ: ಅಭಿಯಾನದ ರೀತಿ ನಡೆಸಿ, ರೈತರ ಸಮಸ್ಯೆಗೆ ಮುಕ್ತಿ: ಸಚಿವ ಕೃಷ್ಣಬೈರೇಗೌಡ ಭರವಸೆ

ರಾಜ್ಯಾದ್ಯಂತ ಪೋಡಿಗೆ ಸಂಬಂಧಿಸಿದಂತೆ ಶೇ.70 ರಷ್ಟು ಬಗೆಹರಿಸಬಹುದಾದ ಸಮಸ್ಯೆಯಾಗಿದ್ದು ನಾವೇ ಪ್ರತಿ ಹಳ್ಳಿಗೂ ಹೋಗಿ “ಪೋಡಿ ಮುಕ್ತ ಗ್ರಾಮ” ಯೋಜನೆಯನ್ನು ಅಭಿಯಾನದ ರೀತಿಯಲ್ಲಿ ನಡೆಸಲಿದ್ದೇವೆ. ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಸಂಕಲ್ಪ ಮಾಡಿದ್ದೇವೆ ಎಂದು ಸಚಿವ ಕೃಷ್ಣಬೈರೇಗೌಡ ಭರವಸೆ ನೀಡಿದರು.

ಬೆಳಗಾವಿ ಅಧಿವೇಶನದ ಮೊದಲ ದಿನ “ಪೋಡಿ ಮುಕ್ತ ಗ್ರಾಮ” ಬಗೆಗಿನ ವಿರೋಧ ಪಕ್ಷದ ಶಾಸಕ ಸಿ ಎನ್ ಅಶ್ವತ್ಥನಾರಾಯಣ ಅವರ ಪ್ರಶ್ನೆಗೆ ಸಚಿವ ಕೃಷ್ಣಬೈರೇಗೌಡ ಅವರು ಉತ್ತರಿಸಿದರು.

“ಪೋಡಿ ಬಾಕಿ ಪ್ರಕರಣಗಳಿಂದಾಗಿ ರೈತರಿಗೆ ಸಾಕಷ್ಟು ಸಮಸ್ಯೆಯಾಗಿದೆ. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಡೆಸಿದ ಜನತಾದರ್ಶನ ಕಾರ್ಯಕ್ರಮದಲ್ಲೂ ಸಹ ರೈತರ ಪೋಡಿ ಸಮಸ್ಯೆಗಳ ಸಂಖ್ಯೆಯೇ ಹೆಚ್ಚಾಗಿ ಕಂಡು ಬಂದಿದೆ. ಹೀಗಾಗಿ ಪೋಡಿ ಮುಕ್ತ ಗ್ರಾಮಕ್ಕೆ ನಮ್ಮ ಸರ್ಕಾರ ಸಂಕಲ್ಪ ಮಾಡಿದೆ. ಅಭಿಯಾನದ ಮಾದರಿಯಲ್ಲಿ ಶೀಘ್ರ ನಾವೇ ಗ್ರಾಮಗಳಿಗೆ ತೆರಳಿ ರೈತರಿಗೆ ಪೋಡಿ ಮಾಡಿಕೊಡುತ್ತೇವೆ” ಎಂದು ಭರವಸೆ ನೀಡಿದರು.

“ಪೋಡಿ ಮುಕ್ತ ಗ್ರಾಮ ಯೋಜನೆ ಆರಂಭವಾದದ್ದು 2015ರಲ್ಲಿ. ಆ ವರ್ಷ 1791 ಹಳ್ಳಿಗಳನ್ನು ಪೋಡಿ ಮುಕ್ತ ಗ್ರಾಮ ಎಂದು ಘೋಷಿಸಲಾಗಿತ್ತು. 2017 ರಲ್ಲಿ 1634, 2018 ರಲ್ಲಿ 4337. 2019 ರಲ್ಲಿ 4647, 2020 ರಲ್ಲಿ 2977, 2021ರಲ್ಲಿ 1016 ಹಾಗೂ 2022ರಲ್ಲಿ 228 ಗ್ರಾಮಗಳನ್ನು ಪೋಡಿ ಮುಕ್ತ ಮಾಡಲಾಗಿದೆ. ಈವರೆಗೆ ಒಟ್ಟಾರೆ 16,430 ಗ್ರಾಮಗಳನ್ನು ಪೋಡಿ ಮುಕ್ತ ಮಾಡಲಾಗಿದೆ. ಇನ್ನೂ 16,085 ಗ್ರಾಮಗಳು ಬಾಕಿ ಇವೆ. ಹಿಂದಿನ ವರ್ಷಗಳ ಸಾಧನೆಗೆ ಹೋಲಿಸಿದರೆ ಕಳೆದ ಮೂರು ವರ್ಷದಿಂದ ಪೋಡಿ ಮುಕ್ತ ಗ್ರಾಮ ಯೋಜನೆಯ ಸಾಧನೆ ಸಮಾಧಾನಕರವಾಗಿಲ್ಲ. ಹೀಗಾಗಿ ಸಾಧ್ಯವಾದಷ್ಟು ಶೀಘ್ರದಲ್ಲಿ ಈ ಪ್ರಕರಣಗಳನ್ನೂ ಇತ್ಯರ್ಥ ಮಾಡಲು ಕಂದಾಯ ಇಲಾಖೆ ಬದ್ದವಾಗಿದೆ. ಈ ಬಗ್ಗೆ ಸರ್ವೇ ಇಲಾಖೆಗೂ ಅಗತ್ಯ ಸೂಚನೆ ನೀಡಲಾಗಿದೆ” ಎಂದು ಅವರು ತಿಳಿಸಿದರು.

ಪೋಡಿ ಸಮಸ್ಯೆಯ ಹಿಂದಿನ ಕಾರಣಗಳ ಬಗ್ಗೆಯೂ ಸದನದಲ್ಲಿ ಚರ್ಚಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, “ ರೈತರ ಹೆಸರಲ್ಲಿ ಆರ್ ಟಿಸಿ ಇದೆ. ಆದರೆ, ಸರ್ವೇ, ನಕ್ಷೆ ಮತ್ತು ಹಕ್ಕಿನ ದಾಖಲೆಗಳನ್ನು ನೀಡಲಾಗಿಲ್ಲ. ಅಲ್ಲದೆ, ಭೂಮಿಯ ವಿಸ್ತೀರ್ಣಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪಹಣಿಗಳಿರುವುದು ಪೋಡಿ ಸಮಸ್ಯೆ ಬಗೆಹರಿಯದೆ ಇರುವುದಕ್ಕೆ ಮುಖ್ಯ ಕಾರಣ. ಆದರೂ, ರಾಜ್ಯಾದ್ಯಂತ ಇರುವ ಶೇ.70 ರಷ್ಟು ಪ್ರಕರಣಗಳಲ್ಲಿ ಸಮಸ್ಯೆ ಬಗೆಹರಿಸಬಹುದು” ಎಂದರು.

“ಈ ಪ್ರಕರಣಗಳಲ್ಲಿ ಯಾವುದಾದರೂ ಮಾರ್ಗ ಹುಡುಕಿ ರೈತರ ಸಮಸ್ಯೆಯನ್ನು ತುರ್ತು ಬಗೆಹರಿಸಿ ಎಂದು ನಾನು ಈಗಾಗಲೇ ನಮ್ಮ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆದರೆ, ಉಳಿದ ಶೇ.30 ರಷ್ಟು ಪ್ರಕರಣಗಳಲ್ಲಿ ಸಮಸ್ಯೆ ಬಗೆಹರಿಸುವುದು ಅಷ್ಟು ಸುಲಭದ ಕೆಲಸವಲ್ಲ. ಪರಿಹಾರ ಕೆಲಸಕ್ಕೆ ಕೈಹಾಕುತ್ತಿದ್ದಂತೆ ತಕರಾರುಗಳು ಎದುರಾಗುತ್ತವೆ ಇವನ್ನೂ ಸಹ ಎದುರುಗೊಳ್ಳಲು ನಾವು ಸಿದ್ದರಿದ್ದೇವೆ” ಎಂದರು.

ಪರವಾನಗಿ ಹೊಂದಿರುವ 1800 ಭೂಮಾಪಕರ ನೇಮಕ!

ಪೋಡಿ ಮುಕ್ತ ಗ್ರಾಮ ಯಶಸ್ವಿಯಾಗದಿರುವುದಕ್ಕೆ ಮಾನವ ಸಂಪ ನ್ಮೂಲ ಕೊರತೆಯೂ ಕಾರಣ ಎಂದು ಸದನದಲ್ಲಿ ತಿಳಿಸಿದ ಸಚಿವರು, “ಈಗಾಗಲೇ ಪರವಾನಗಿ ಹೊಂದಿರುವ 1800 ಭೂ ಮಾಪಕರು (ಸರ್ವೇಯರ್) ಗಳನ್ನು ನೇಮಕ ಮಾಡಲಾಗಿದೆ. ಇದರ ಜೊತೆಗೆ 364 ಸರ್ಕಾರಿ ಭೂ ಮಾಪಕರು ಹಾಗೂ 27 ಎಡಿಎಲ್ ಆರ್ ಗಳನ್ನೂ ಸಹ ನೇಮಕ ಮಾಡಲಾಗಿದೆ. ಮಾನವ ಸಂಪನ್ಮೂಲಗಳನ್ನು ಹೆಚ್ಚು ಮಾಡಿಕೊಂಡು ಪೋಡಿ ಸಮಸ್ಯಗಳಿಗೆ ಪರಿಹಾರ ನೀಡುವುದಕ್ಕೆ ನಾವು ಸಂಕಲ್ಪ ಮಾಡಿದ್ದೇವೆ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments