Homeಕರ್ನಾಟಕಪಹಲ್ಗಾಮ್ ಭಯೋತ್ಪಾದಕ ಕೃತ್ಯಕ್ಕೆ ತಕ್ಕ ಶಾಸ್ತಿ ಆಗಲೇಬೇಕು: ಹೆಚ್‌ ಡಿ ದೇವೇಗೌಡ

ಪಹಲ್ಗಾಮ್ ಭಯೋತ್ಪಾದಕ ಕೃತ್ಯಕ್ಕೆ ತಕ್ಕ ಶಾಸ್ತಿ ಆಗಲೇಬೇಕು: ಹೆಚ್‌ ಡಿ ದೇವೇಗೌಡ

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಎಲ್ಲ ಕ್ರಮಗಳನ್ನು ಮುಕ್ತವಾಗಿ ಬೆಂಬಲಿಸುವೆ. ಕೊಂದವರಿಗೆ ತಕ್ಕ ಶಾಸ್ತಿ ಆಗಲೇಬೇಕು. ಈ ಹಿನ್ನೆಲೆಯಲ್ಲಿ ಪ್ರಧಾನಿಗಳು ಕೈಗೊಳ್ಳುವ ನಿರ್ಧಾರಕ್ಕೆ ಜೆಡಿಎಸ್ ಬದ್ಧವಾಗಿರುತ್ತದೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದರು.

ನವದೆಹಲಿಯಲ್ಲಿ ಮಂಗಳವಾರ ಮಾಧ್ಯಮಗೋಷ್ಠಿ ಕರೆದು ಮಾತನಾಡಿದ ಅವರು, “ಪಹಲ್ಗಾಮ್ ಘಟನೆ ಅಮಾನವೀಯ. ಮೊದಲ ಬಾರಿಗೆ ಭಯೋತ್ಪಾದಕರು ಪ್ರವಾಸಿಗರ ಮೇಲೆ ದಾಳಿ ಮಾಡಿದ್ದಾರೆ. ಇದು ಅತ್ಯಂತ ಹೇಯ ಕೃತ್ಯ. ರಕ್ಷಣಾ ಪಡೆಗಳಿಗೆ ಮೋದಿ ಅವರು ಮುಕ್ತ ಸ್ವಾತಂತ್ರ್ಯ ನೀಡಿದ್ದಾರೆ. ಮೊದಲ ಬಾರಿಗೆ ದೇಶದ ಪ್ರಧಾನಿ ಮೋದಿ ಅವರು ಇಂತಹ ದಿಟ್ಟ ನಿರ್ಧಾರ ಮಾಡಿದ್ದಾರೆ. ಇತಿಹಾಸದಲ್ಲಿ ಈ ರೀತಿ ಎಂದೂ ನಿರ್ಧಾರ ಆಗಿರಲಿಲ್ಲ” ಎಂದು ತಿಳಿಸಿದರು.

“ಗೃಹ, ರಕ್ಷಣೆ ಹಾಗೂ ವಿದೇಶಾಂಗ ಖಾತೆಗಳನ್ನು ನಿಭಾಯಿಸುತ್ತಿರುವ ಸಚಿವರುಗಳು ಅತ್ಯಂತ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ. ಇಡೀ ದೇಶ ಪ್ರಧಾನಿ ಮೋದಿಯವರ ಜೊತೆ ನಿಂತಿದೆ. ಎಲ್ಲಾ ರಾಜಕೀಯ ಪಕ್ಷಗಳು ಮೋದಿಯವರ ನಿರ್ಧಾರವನ್ನು ಬೆಂಬಲಿಸಿವೆ. ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಬೇಕಾಗಿದೆ. ಪಾಕಿಸ್ತಾನ ಪ್ರೇರಿತ ಉಗ್ರರನ್ನು ಸದೆಬಡಿಯುವವರೆಗೆ ವಿರಮಿಸುವುದಿಲ್ಲ ಎಂದು ಮೋದಿ‌ ಹೇಳಿದ್ದಾರೆ. ನಾನು, ನಮ್ಮ ಪಕ್ಷ ಇಡೀ ದೇಶ ಪ್ರಧಾನಿ ಮೋದಿ ಜೊತೆಗಿರುತ್ತೇವೆ” ಎಂದು ದೇವೇಗೌಡರು ಎಂದು ಘೋಷಿಸಿದರು.

“1971ರ ಯುದ್ಧ ಕಾಲಕ್ಕೂ ಈಗಿನ ಪರಿಸ್ಥಿತಿಗೂ ಬಹಳ ವ್ಯತ್ಯಾಸವಿದೆ. ಹೋಲಿಕೆ ಮಾಡಲು ಸಾಧ್ಯವಿಲ್ಲ. ಭಾರತ ಅಗಾಧವಾಗಿ ಬೆಳೆದಿದೆ. ಕಳೆದ ಹತ್ತು ವರ್ಷಗಳಲ್ಲಿ ದೇಶವು ಸಾಕಷ್ಟು ಅಭಿವೃದ್ಧಿ, ಬದಲಾವಣೆಯನ್ನು ಕಂಡಿದೆ ಎಂದ ಅವರು; ಇಲ್ಲಿ ಹಿಂದೂ ಮುಸ್ಲಿಂ ಎನ್ನುವ ಪ್ರಶ್ನೆಯಲ್ಲ. ಧರ್ಮ, ಜಾತಿ ಪ್ರಶ್ನೆ ಉದ್ಭವವಾಗುವುದಿಲ್ಲ. ದೇಶದ ಭದ್ರತೆ ಮುಖ್ಯ. ಯುದ್ಧ ಮಾಡಬೇಕೋ ಬೇಡವೋ ಎನ್ನುವ ನಿರ್ಧಾರವನ್ನು ಸೇವೆಗೆ ಬಿಡಲಾಗಿದೆ. ಮೂರು ಸೇನೆಗಳ ಮುಖ್ಯಸ್ಥರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ” ಎಂದು ಹೇಳಿದರು.

ಜಾತಿ ಗಣತಿ ವಿಚಾರ: ಸಿಎಂ ವಿರುದ್ಧ ವಾಗ್ದಾಳಿ

“ಜಾತಿ ಸಮೀಕ್ಷೆಯ ಮೂಲಕ ಬೆಣ್ಣೆ ತಿಂದು, ಉಳಿದವರಿಗೆ ನೀರು ಮಜ್ಜಿಗೆ ಕೊಡಲು ಸಿದ್ದರಾಮಯ್ಯ ಹೊರಟಿದ್ದಾರೆ. ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಮುಂದಿನ ಜನಗಣತಿ ಜೊತೆಯಲ್ಲಿಯೇ ಜಾತಿ ಗಣತಿಯನ್ನು ಮಾಡುತ್ತಿರುವುದು ಸ್ವಾಗತಾರ್ಹ” ಎಂದು ದೇವೇಗೌಡರು ತಿಳಿಸಿದರು.

“ಕೇಂದ್ರ ನಿಲುವಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಕರ್ನಾಟಕದ ಜಾತಿಗಣತಿಗೆ ಸಿದ್ದರಾಮಯ್ಯ ಅವರ ಸಂಪುಟದಲ್ಲಿಯೇ ಸಹಮತ ಇಲ್ಲ. ಈ ಬಗ್ಗೆ ಸಿದ್ದರಾಮಯ್ಯ ಅವರಿಗೆ ನಾನು ಪತ್ರ ಬರೆದಿದ್ದೆ. ನನಗೆ ಅವರು ಈವರೆಗೆ ಉತ್ತರ ಕೊಟ್ಟಿಲ್ಲ. ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ಹಾಗಾದರೆ ಸಿಎಂ ಕಚೇರಿಯಲ್ಲಿ ಎಷ್ಟು ಹಿಂದುಳಿದವರು ಇದ್ದಾರೆ? ಸಿಎಂ ಕಚೇರಿಯಲ್ಲಿ ಅವರದ್ದೆ ಸಮುದಾಯದ ಉದ್ಯೋಗಿಗಳು ಎಷ್ಟಿದ್ದಾರೆ? ಎನ್ನುವುದನ್ನು ಹೇಳಬೇಕು. ಅವರು ಹೇಳುತ್ತಾರೆಯೇ? ಅಂತಹ ಸಿದ್ದರಾಮಯ್ಯನವರು ಮೋದಿ ಅವರಿಗೆ ಪಾಠ ಮಾಡುತ್ತಾರೆ” ಎಂದು ಟೀಕಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments