Homeಕರ್ನಾಟಕಕಾಂಗ್ರೆಸ್‌ ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಗೂಬೆ: ಪ್ರಲ್ಹಾದ್ ಜೋಶಿ

ಕಾಂಗ್ರೆಸ್‌ ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಗೂಬೆ: ಪ್ರಲ್ಹಾದ್ ಜೋಶಿ

ಕರ್ನಾಟಕದಲ್ಲಿ ಸ್ವತಃ ಉಪ ಮುಖ್ಯಮಂತ್ರಿ ಸೇರಿ ಹಲವಾರು ಶಾಸಕರು ಅಭಿವೃದ್ಧಿಗೆ ಅನುದಾನ ಇಲ್ಲ ಎಂದಿದ್ದಾರೆ. ಕಾಂಗ್ರೆಸ್ಸಿನ ಘೋಷಣೆಗಳು ಅರ್ಧಂಬರ್ಧ ಆಶ್ವಾಸನೆಗಳು. ಅವನ್ನು ಈಡೇರಿಸಲಾಗದೆ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಕ್ಷೇಪಿಸಿದರು.

ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕರ್ನಾಟಕದ ಬಜೆಟ್ 2.98 ಲಕ್ಷ ಕೋಟಿ ಇದ್ದು, ಫೆಬ್ರವರಿ ಮಧ್ಯಭಾಗಕ್ಕೆ ಬಂದರೂ ಶೇ 38 ರಷ್ಟು ಹಣ ವ್ಯಯಿಸದೆ ಬಾಕಿ ಇದೆ. 1.13 ಲಕ್ಷ ಕೋಟಿ ಹಣ ಖರ್ಚಾಗಿಲ್ಲ. ನಮ್ಮ ಕಡೆ ಒಮ್ಮೆ ಬಂದು ಚೆಕ್ ಮಾಡಿ ಎಂದರಲ್ಲದೆ, ನಮ್ಮಲ್ಲಿ ಪ್ರತಿ ತಿಂಗಳೂ ಪ್ರಧಾನಿಯವರು ಹಣ ಖರ್ಚಾದುದರ ಕುರಿತು ಸಭೆ ನಡೆಸುತ್ತಾರೆ. ಇಲ್ಲಿ ಮಾರ್ಚ್‍ನಲ್ಲಿ ಲೆಕ್ಕ ತೋರಿಸುತ್ತಾರಷ್ಟೇ” ಎಂದು ಟೀಕಿಸಿದರು.

“ಕೇಂದ್ರ ಪ್ರಾಯೋಜಿತ ವಿವಿಧ ಯೋಜನೆಗಳ ಶೇ 34 ರಷ್ಟು (5,727 ಕೋಟಿ ರೂ) ಹಣ ಖರ್ಚಾಗದೆ ಉಳಿದಿದೆ. ಇದು ರಾಜ್ಯ ಸರ್ಕಾರದ ಡ್ಯಾಶ್ ಬೋರ್ಡಿನ ಮಾಹಿತಿ. ಕೇಂದ್ರ ಸರ್ಕಾರ ರಾಜ್ಯದ ಕೃಷಿ ಇಲಾಖೆಗೆ ಕೊಟ್ಟ ಹಣವೂ ಸರಿಯಾಗಿ ಖರ್ಚಾಗಿಲ್ಲ. ಪಶು ಚಿಕಿತ್ಸಾಲಯ, ಪಶುಗಳಿಗೆ ಬೇಕಾದ ಔಷಧಿಗೆ ಬೇಡಿಕೆ ಇದೆ. ಆದರೆ, ಆ ಸಂಬಂಧ ಕೇಂದ್ರ ಕೊಟ್ಟ ಅನುದಾನವನ್ನು ಸರಿಯಾಗಿ ಬಳಸಿಲ್ಲ” ಎಂದು ಆರೋಪಿಸಿದರು.

ಬರ ಪರಿಹಾರ

“2004-05ರಲ್ಲಿ ಸರಕಾರ ಯಾರದಿತ್ತು ಸಿದ್ದರಾಮಯ್ಯನವರೇ? ಅದು ಯುಪಿಎ ಸರಕಾರ. ಆಗ ನೀವು ಕೇಂದ್ರದಿಂದ ಎಷ್ಟು ಹಣ ಕೇಳಿದ್ದಿರಿ. 2004-05ರಲ್ಲಿ ನಿಮ್ಮ ಸಮ್ಮಿಶ್ರ ಸರಕಾರ ಇತ್ತು. ಆಗ ಧರ್ಮಸಿಂಗ್ ಮುಖ್ಯಮಂತ್ರಿ ಆಗಿದ್ದರು. ಬರ ಸಂಬಂಧ ನೀವು ಕೇಳಿದ್ದು, 1,147 ಕೋಟಿ. 131 ಕೋಟಿ ಬಿಡುಗಡೆ ಆಗಿತ್ತು; ಜಸ್ಟ್ ಶೇ 10 ಎಂದು ಅಂಕಿ ಅಂಶ ನೀಡಿದರು.
2006-07ರಲ್ಲಿ 1,595 ಕೋಟಿ ಕೇಳಿದ್ದು, 340 ಕೋಟಿ ರಿಲೀಸ್ ಆಗಿತ್ತು. 2006ರಲ್ಲಿ ನೆರೆ ಸಂಬಂಧ 406 ಕೋಟಿ ಕೇಳಿದ್ದರು. 249 ಕೋಟಿ ಬಿಡುಗಡೆ ಮಾಡಿದ್ದರು. 2008-09ರಲ್ಲಿ ಬರಗಾಲ ಮತ್ತು ನೆರೆ ಸಂಬಂಧ ಸುಮಾರು 2600 ಕೋಟಿ ಕೇಳಿದ್ದರು. 178 ಕೋಟಿ ಕೊಟ್ಟಿದ್ದಾರೆ. 2004-09 ನಡುವಿನ 5 ವರ್ಷಗಳ ಯುಪಿಎ ಆಡಳಿತದಲ್ಲಿ 15,541 ಕೋಟಿ ಕೇಳಿದ್ದು, 1,524 ಕೋಟಿಯಷ್ಟೇ ರಾಜ್ಯಕ್ಕೆ ಬಿಡುಗಡೆ ಆಗಿತ್ತು” ಎಂದು ಹೇಳಿದರು.

ಎನ್‍ಡಿಆ‌ರ್‌ಎಫ್‌ ಅಡಿಯಲ್ಲಿ ಜಾಸ್ತಿನೇ ಕೊಟ್ಟಿದ್ದೇವೆ

“2009-10ರಿಂದ 2013-14ರ ಯುಪಿಎ ಎರಡನೇ ಅವಧಿಯಲ್ಲಿ 29,097 ಕೋಟಿ ಕೇಳಿದ್ದು, 3,297 ಕೋಟಿ ಬಿಡುಗಡೆ ಆಗಿತ್ತು. ಇದು ಕೂಡ ಶೇ 10 ಎಂದು ಪ್ರಲ್ಹಾದ್ ಜೋಶಿ ಅವರು ಹೇಳಿದರು. ನಮ್ಮ ಕಾಲದಲ್ಲಿ 2014ರಿಂದ 2023-24ರ ನಡುವಿನ ಅವಧಿಯಲ್ಲಿ ಸುಮಾರು 63,440 ಕೋಟಿ ರೂ. ಕೇಳಿದ್ದು, 13,378 ಕೋಟಿ ರೂ. ಬಿಡುಗಡೆ ಆಗಿದೆ. ಎನ್‍ಡಿಆರ್‍ಎಫ್ ಅಡಿಯಲ್ಲಿ ಜಾಸ್ತಿನೇ ಕೊಟ್ಟಿದ್ದೇವೆ. ಮುಂಚಿತವಾಗಿಯೇ ಹಣ ಬಿಡುಗಡೆ ಮಾಡಿದ್ದೇವೆ” ಎಂದರು.

“ಮುಂಚಿತವಾಗಿಯೇ ಸುಮಾರು 700 ಕೋಟಿ ಬಿಡುಗಡೆ ಮಾಡಿದ್ದೇವೆ. ಪ್ರತಿಯೊಂದು ಹಣಕಾಸು ಆಯೋಗವೂ ಅದರದೇ ಆದ ನಿಯಾಮಾವಳಿ ಹೊಂದಿರುತ್ತದೆ. ಆಯೋಗವು 2016-17ರಲ್ಲಿ ಕರ್ನಾಟಕಕ್ಕೆ ಭೇಟಿ ಕೊಟ್ಟಾಗ ಆ ಸಂದರ್ಭದಲ್ಲಿ ನಮ್ಮ ಸಿದ್ದರಾಮಯ್ಯನವರ ಸರಕಾರವೇ ಇತ್ತು. ಸಿದ್ದರಾಮಯ್ಯನವರ ಸರಕಾರ ಸಮರ್ಪಕ ಮಾಹಿತಿ ಕೊಟ್ಟು ಆಯೋಗಕ್ಕೆ ಮನವರಿಕೆ ಮಾಡುವ ಕೆಲಸ ಮಾಡಿಲ್ಲ. ಹಾಗಾಗಿ ಅದರಲ್ಲಿ ಏನಾದರೂ ದೋಷ ಇದ್ದರೆ ಸಿದ್ದರಾಮಯ್ಯನವರೇ ಹೊಣೆ” ಎಂದು ತಿಳಿಸಿದರು.

2004-14ರವರೆಗೆ 10 ವರ್ಷದಲ್ಲಿ ರಾಜ್ಯಕ್ಕೆ 81 ಸಾವಿರ ಕೋಟಿ ರೂ. ತೆರಿಗೆ ಹಂಚಿಕೆಯನ್ನು (ಟ್ಯಾಕ್ಸ್ ಡೆವೊಲ್ಯೂಷನ್) ಯುಪಿಎ ಸರಕಾರ ಮಾಡಿತ್ತು. ಕಳೆದ 10 ವರ್ಷಗಳಲ್ಲಿ ಮೋದಿ ಸರಕಾರ ಕೊಟ್ಟ ತೆರಿಗೆ ಹಂಚಿಕೆ 2.85 ಲಕ್ಷ ಕೋಟಿ. ಇಲ್ಲಿನವರೆಗೆ ಶೇ 250 ಅಧಿಕ ಹಣ ಕೊಡಲಾಗಿದೆ. ಇನ್ನೂ 18 ಸಾವಿರ ಕೋಟಿ ಕೊಡಲಿಕ್ಕಿದೆ. ವಾಸ್ತವವಾಗಿ ಅವರು ನರೇಂದ್ರ ಮೋದಿಯವರನ್ನು ಅಭಿನಂದಿಸಬೇಕಿತ್ತು. ಆದರೆ, ಸಿದ್ದರಾಮಯ್ಯ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ” ಎಂದು ಕಿಡಿಕಾರಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ರಾಜ್ಯ ಉಪಾಧ್ಯಕ್ಷರಾದ ಮಾಲವಿಕಾ ಅವಿನಾಶ್, ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ಶಾಸಕರುಗಳಾದ ಅಭಯ್ ಪಾಟೀಲ್, ಮಹೇಶ್ ಟೆಂಗಿನಕಾಯಿ ಹಾಗೂ ಎಂ.ಆರ್.ಪಾಟೀಲ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments