Homeಕರ್ನಾಟಕಕರಾವಳಿಗರ ಕೈಗೆ ರಕ್ತ ಸವರುವುದನ್ನೇ ಕೆಲಸ ಮಾಡಿಕೊಂಡಿದ್ದ ಬಿಜೆಪಿಗೆ ನಮ್ಮ ಅಭಿವೃದ್ಧಿ ಕೆಲಸಗಳು ಮೂಗಿಗೆ ತುಪ್ಪ...

ಕರಾವಳಿಗರ ಕೈಗೆ ರಕ್ತ ಸವರುವುದನ್ನೇ ಕೆಲಸ ಮಾಡಿಕೊಂಡಿದ್ದ ಬಿಜೆಪಿಗೆ ನಮ್ಮ ಅಭಿವೃದ್ಧಿ ಕೆಲಸಗಳು ಮೂಗಿಗೆ ತುಪ್ಪ ಸವರಿದಂತೆ ಕಾಣುತ್ತಿವೆ: ಪ್ರಿಯಾಂಕ್ ಖರ್ಗೆ

ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಅಭಿವೃದ್ಧಿಗೆ ₹32,611 ಕೋಟಿ ಮೊತ್ತದ ಯೋಜನೆಗಳಿಗೆ ಅನುಮೋದನೆ ದೊರೆತಿರುವುದನ್ನು ಟೀಕಿಸುತ್ತಿರುವ ಬಿಜೆಪಿಯ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

“ಮಂಗಳೂರು ಸಚಿವ ಸಂಪುಟ ಸಭೆಯನ್ನು ‘ಮೂಗಿಗೆ ತುಪ್ಪ ಸವರುವ ಕ್ಯಾಬಿನೆಟ್’ ಎಂದು ಕರೆಯುವುದು ಬಿಜೆಪಿಗರ ಹತಾಶೆಯ ಟೀಕೆ. ಕರಾವಳಿಗರ ಕೈಗೆ ರಕ್ತ ಸವರುವುದನ್ನೇ ಕೆಲಸವನ್ನಾಗಿ ಮಾಡಿಕೊಂಡಿದ್ದ ಬಿಜೆಪಿಗೆ ನಮ್ಮ ಅಭಿವೃದ್ಧಿಪರ ನಿಲುವುಗಳನ್ನು ನೋಡಿ ತಳಮಳ ಶುರುವಾಗಿದೆ” ಎಂದು ಅವರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಬಿಜೆಪಿ ಕರಾವಳಿಯನ್ನು ಕೋಮುವಾದದ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡಿತ್ತು. ನಾವು ಕರಾವಳಿಯನ್ನು ಅಭಿವೃದ್ಧಿಯ ಪ್ರಯೋಗಶಾಲೆಯಾಗಿ ಪರಿವರ್ತಿಸುತ್ತಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

“ಬಿಜೆಪಿ ಕರಾವಳಿಯನ್ನು ಕೇವಲ ಮತಬ್ಯಾಂಕಿನ ಪ್ರದೇಶವಾಗಿ ನೋಡುತ್ತದೆ. ನಾವು ಕರಾವಳಿಯಲ್ಲಿ ಪ್ರಗತಿಯ ಸಾಧ್ಯತೆಗಳನ್ನು ಕಾಣುತ್ತಿದ್ದೇವೆ. ಬಿಜೆಪಿಗರು ಕರಾವಳಿಗೆ ಕಾಲಿಡುತ್ತಿದ್ದಿದ್ದು ‘ಹೊಡಿ, ಬಡಿ’ ಎಂಬ ಪ್ರಚೋದನೆಯ ಭಾಷಣ ಮಾಡಲು ಮಾತ್ರ. ನಾವು ಕರಾವಳಿಗರ ಆತ್ಮಗೌರವವನ್ನು ಗೌರವಿಸಲು ಹಾಗೂ ಅವರ ಅಭಿವೃದ್ಧಿಯ ಆಶಯಗಳಿಗೆ ಸ್ಪಂದಿಸಲು ಕಾಲಿಟ್ಟಿದ್ದೇವೆ” ಎಂದು ಅವರು ಹೇಳಿದ್ದಾರೆ.

“ಬಿಜೆಪಿ ಕರಾವಳಿಯಲ್ಲಿ ಕೋಮು ಕಲಹದ ಚರ್ಚೆಗಳನ್ನು ಹುಟ್ಟುಹಾಕುತ್ತಿತ್ತು. ನಾವು ಡೇಟಾ ಸೆಂಟರ್, ವಾಟರ್ ಮೆಟ್ರೋ, ಪ್ರವಾಸೋದ್ಯಮ, ಮರೀನ್ ಬಯೋಟೆಕ್ನಾಲಜಿ, ಮಾಹಿತಿ ತಂತ್ರಜ್ಞಾನ ಸೇರಿದಂತೆ ಪ್ರಗತಿಪರ ವಿಷಯಗಳ ಕುರಿತು ಚರ್ಚೆ ಆರಂಭಿಸಿದ್ದೇವೆ” ಎಂದು ತಿಳಿಸಿದ್ದಾರೆ.

ಕರಾವಳಿ ಭಾಗದ ಜನರ ಬಹುಕಾಲದ ಬೇಡಿಕೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದ್ದಾರೆ. ಮಂಗಳೂರು ಸಚಿವ ಸಂಪುಟ ಸಭೆಯಲ್ಲಿ ತುಳುವಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಆಡಳಿತ ಭಾಷೆಯ ಸ್ಥಾನಮಾನ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ.

“ದಕ್ಷಿಣ ಕನ್ನಡದ ಜನರ ಬೇಡಿಕೆಗಳನ್ನು ಕೇಳಿಸಿಕೊಳ್ಳುವ ಕೆಲಸವನ್ನು ಬಿಜೆಪಿಗರು ಮಾಡಿರಲಿಲ್ಲ. ತುಳುವಿಗೆ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ಮೂಲಕ ನಮ್ಮ ಸರ್ಕಾರ ಕರಾವಳಿಯ ಭಾಷೆ, ಸಂಸ್ಕೃತಿ ಮತ್ತು ಜನರ ಭಾವನೆಗಳಿಗೆ ಗೌರವ ನೀಡಿದೆ” ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಕೋಮು ಪ್ರಚೋದನೆ ಮತ್ತು ರಕ್ತದ ರಾಜಕಾರಣವನ್ನು ಹೊರತುಪಡಿಸಿದರೆ ಕರಾವಳಿಗೆ ಬಿಜೆಪಿ ನೀಡಿದ ಕೊಡುಗೆ ಶೂನ್ಯ ಎಂದು ಅವರು ಟೀಕಿಸಿದ್ದಾರೆ.

“ಕರಾವಳಿಯ ಮೂರು ಜಿಲ್ಲೆಗಳ ಅಭಿವೃದ್ಧಿಗೆ ₹32,611 ಕೋಟಿ ಮೊತ್ತದ ಯೋಜನೆಗಳು ಮತ್ತು ಪ್ರಸ್ತಾವನೆಗಳಿಗೆ ಅನುಮೋದನೆ ದೊರೆತಿರುವುದು ಮಹತ್ವದ ಹೆಜ್ಜೆ. ಗ್ರಾಮೀಣ ಅಭಿವೃದ್ಧಿ ಸೇರಿದಂತೆ ಕರಾವಳಿ ಭಾಗದ ಮೂಲಸೌಕರ್ಯ, ಪ್ರವಾಸೋದ್ಯಮ, ಬಂದರು, ಆರೋಗ್ಯ, ಶಿಕ್ಷಣ, ರಸ್ತೆ ಮತ್ತು ಇತರ ಕ್ಷೇತ್ರಗಳಿಗೆ ಒತ್ತು ನೀಡಲಾಗಿದೆ” ಎಂದು ಅವರು ಹೇಳಿದ್ದಾರೆ.

“ಕರಾವಳಿಯನ್ನು ಕೇವಲ ಮತಬ್ಯಾಂಕ್ ಮಾಡಿಕೊಂಡಿದ್ದ ಬಿಜೆಪಿಗೆ ಇಂತಹ ಅಭಿವೃದ್ಧಿಪರ ನಿಲುವುಗಳನ್ನು ತಳೆಯಲು ಸಾಧ್ಯವಾಗಲಿಲ್ಲ ಏಕೆ? ಜನತೆ ಕೋಮು ವಿಷಯಗಳನ್ನು ಬಿಟ್ಟು ಪ್ರಗತಿಯ ವಿಷಯಗಳತ್ತ ಚಿಂತನೆ ಆರಂಭಿಸಿರುವುದೇ ಬಿಜೆಪಿಗೆ ಅಸ್ತಿತ್ವದ ಭಯ ಕಾಡಲು ಕಾರಣವಾಗಿದೆ” ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments