‘ಕೈ’ಲಾಗದವರ ಕೊನೆಯ ಅಸ್ತ್ರವೇ ಅಪಪ್ರಚಾರ ಎಂಬುದು ಗೊತ್ತಿರುವ ವಿಷಯವೇ. ಕಾಂಗ್ರೆಸ್ ಸರ್ಕಾರ ರಾಜಕೀಯವಾಗಿ ಎದುರಿಸಲಾಗದೆ ನಮ್ಮ ಎಥನಾಲ್ ಕಾರ್ಖಾನೆಗೆ ನೋಟಿಸ್ ಕೊಡಿಸಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕಿಡಿಕಾರಿದ್ದಾರೆ.
ಈ ಕುರಿತು ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿರುವ ಅವರು, “ರೈತರಿಗೆ ನೆರವಾಗಲು ಹಾಗೂ ಹಿಂದುಳಿದ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ ಮಾಡಲು ಕಾರ್ಖಾನೆ ಸ್ಥಾಪಿಸಲಾಗಿದೆ” ಎಂದು ಹೇಳಿದ್ದಾರೆ.
“ಕಾನೂನು ರೀತ್ಯಾ ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸಲಾಗುತ್ತದೆ. ಈ ನೋಟಿಸ್, ಆದೇಶಗಳಿಗೆ ಹೆದರುವ ಜಾಯಮಾನ ನನ್ನದಲ್ಲ. ಕಾಂಗ್ರೆಸ್ ಆಡಳಿತದ ವಿರುದ್ಧ ಹೋರಾಟ ಮಾಡಲು ಶಕ್ತಿ ಇಮ್ಮಡಿಯಾಗಿದೆ” ಎಂದು ತಿಳಿಸಿದ್ದಾರೆ.
“ಬಡವರನ್ನು, ದೀನ-ದಲಿತರನ್ನು, ಪಕ್ಷದ ಕಾರ್ಯಕರ್ತರನ್ನು ಸಹಾನೂಭೂತಿಯಿಂದ ಕಾಣುತ್ತ ಬಂದಿರುವ ನಾನು, ನನ್ನ ಮಿತಿಯಲ್ಲಿ ನನ್ನದೇ ಕಾರ್ಖಾನೆಗಳಲ್ಲಿ ನೂರಾರು ಜನರಿಗೆ ಉದ್ಯೋಗ ಸೃಷ್ಟಿಸಿದ್ದೇನೆ. ಜಿಲ್ಲೆಯ ಆರ್ಥಿಕತೆಯನ್ನು ಸುಧಾರಿಸಲು ನನ್ನ ಅಳಿಲು ಸೇವೆಯೂ ಇದೆ” ಎಂದು ಹೇಳಿದ್ದಾರೆ.
ಕಾನೂನು ಹೋರಾಟ
“ರಾಜಕೀಯ ಒತ್ತಡಕ್ಕೆ ಮಣಿದು ನನ್ನ ಕಾರ್ಖಾನೆಯನ್ನು ಮುಚ್ಚಿಸುವುದರಿಂದ ಇವರು ಏನನ್ನೂ ಕೂಡ ಸಾಧಿಸಲು ಸಾಧ್ಯವಿಲ್ಲ. ಕಾರ್ಖಾನೆ ಮತ್ತೆ ತೆರೆಯುವುದು ನಿಶ್ಚಿತ, ಈ ನಿಟ್ಟಿನಲ್ಲಿ ನಾನು ಕಾನೂನು ಹೋರಾಟ ಮಾಡುತ್ತೇನೆ” ಎಂದು ಯತ್ನಾಳ ತಿಳಿಸಿದ್ದಾರೆ.
ಮುಚ್ಚಲು ಆದೇಶ
ಯತ್ನಾಳ ಮಾಲೀಕತ್ವದ ಸಕ್ಕರೆ ಕಾರ್ಖಾನೆ ಒಂದು ವರ್ಷದಿಂದಲೂ ಪರಿಸರ ನಿಯಮಾವಳಿ ಉಲ್ಲಂಘನೆ ಮಾಡಿರುವುದು ಪತ್ತೆಯಾಗಿದ್ದು, ಕಾರ್ಖಾನೆ ಮುಚ್ಚುವಂತೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ನೋಟಿಸ್ ಜಾರಿಗೊಳಿಸಿದೆ.