Homeಕರ್ನಾಟಕತುಮಕೂರಿನಲ್ಲಿ ಒಂದು ಲಕ್ಷ ಕ್ವಿಂಟಲ್ ಮೇವಿನ ಬೀಜ ವಿತರಣೆ: ಡಿಸಿಎಂ ಜಿ.ಪರಮೇಶ್ವರ

ತುಮಕೂರಿನಲ್ಲಿ ಒಂದು ಲಕ್ಷ ಕ್ವಿಂಟಲ್ ಮೇವಿನ ಬೀಜ ವಿತರಣೆ: ಡಿಸಿಎಂ ಜಿ.ಪರಮೇಶ್ವರ

ನೀರಿನ ಸೌಲಭ್ಯ ಇರುವ ರೈತರು ಮೇವು ಬೆಳೆಸಲು ಉತ್ತೇಜಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 1 ಲಕ್ಷ ಕ್ವಿಂಟಲ್ ಮೇವಿನ ಬೀಜ ವಿತರಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ‌. ಜಿ.ಪರಮೇಶ್ವರ ಅವರು ಹೇಳಿದರು.

ಇಂದು ಪಾವಗಡ ತಾಲೂಕಿನ ಕಿಲಾರಹಳ್ಳಿಯಲ್ಲಿ ಬರ ಪರಿಸ್ಥಿತಿಯನ್ನು ವೀಕ್ಷಿಸಿದ ಬಳಿಕ ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ರೈತರಿಗೆ ಮೇವಿನ ಬೀಜ ಕಿಟ್‌ಗಳನ್ನು ವಿತರಿಸಿ ಅವರು ಮಾತನಾಡಿದರು.

ಪಾವಗಡ ತಾಲ್ಲೂಕಿನಲ್ಲಿ ಮುಂದಿನ 12 ವಾರಗಳಿಗೆ ಆಗುವಷ್ಟು ಮೇವು ಸಂಗ್ರಹವಿದೆ. ತದನಂತರ ಮೇವಿಗೆ ಯಾವುದೇ ರೀತಿಯ ಸಮಸ್ಯೆಯಾಗಬಾರದು. ಈ ನಿಟ್ಟಿನಲ್ಲಿ ಪ್ರತಿ ತಾಲೂಕಿಗೆ 10 ಸಾವಿರ ಕ್ವಿಂಟಲ್ ಮೇವಿನ ಬೀಜ ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 1 ಲಕ್ಷ ಕ್ವಿಂಟಲ್ ಮೇವಿನ ಬೀಜ ವಿತರಿಸಲಾಗುತ್ತಿದೆ. ನೀರಿನ ಲಭ್ಯತೆ ಇರುವ ರೈತರು ಮೇವು ಬೆಳೆಯುತ್ತಾರೆ. ಹೆಚ್ಚಿನ ಮೇವು ಬೆಳೆದ ರೈತರಿಂದ ಖರೀದಿಸಲಾಗುವುದು. ಜಾನುವಾರುಗಳನ್ನು ಉಳಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಮಳೆಯ ಪ್ರಮಾಣ‌ ತೀವ್ರ ಕಡಿಮೆಯಾಗಿದೆ. ರೈತರು ಕಂಗಾಲಾಗಿದ್ದಾರೆ. ಪಾವಗಡ ತಾಲೂಕಿನಲ್ಲಿ 19 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಬೇಕಿತ್ತು. ಆದರೆ, 4 ಸಾವಿರ ಹೆಕ್ಟೆರ್‌ನಲ್ಲಿ ಬಿತ್ತನೆಯಾಗಿದೆ. ಬಿತ್ತನೆಯಾಗಿರುವ ಬೆಳೆಯು ಮಳೆಯ ಕೊರತೆಯಿಂದ ಒಣಗುತ್ತಿದೆ. ಪಾವಗಡ ತಾಲ್ಲೂಕಿನಲ್ಲಿ ಶೇಂಗಾ ಬೆಳೆ ಸಂಪೂರ್ಣ ನಾಶವಾಗುತ್ತಿದೆ‌ ಎಂದರು.

ಅತ್ಯಂತ ಕಠಿಣ ಪರಿಸ್ಥಿತಿಯ ಸಂದರ್ಭದಲ್ಲಿ ಸರ್ಕಾರ ಕೈಕಟ್ಟಿ ಕೂರಲು ಆಗುವುದಿಲ್ಲ. ಜನರ ಕಷ್ಟಕ್ಕೆ ಸ್ಪಂದಿಸುವುದು ನಮ್ಮ ಆದ್ಯ ಕರ್ತವ್ಯ. ಜನರ ಕುಡಿಯುವ ನೀರಿಗೆ ತಾಪತ್ರಯ ಆಗದಂತೆ 5 ಕೋಟಿ ರೂ. ನೀಡಲಾಗಿದೆ. ಕುಡಿಯುವ ನೀರಿಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 1 ಕೋಟಿ ರೂ. ನೀಡಲಾಗಿದೆ. ಸನ್ನಿವೇಶ ಬಹಳ ಗಂಭೀರವಾಗಿದೆ. ನೀರನ್ನು ಮಿತವಾಗಿ ಬಳಸಬೇಕು. ಹಿಂಗಾರು ಮಳೆಯ ಬಗ್ಗೆ ನಿರೀಕ್ಷೆ ಮಾಡುತ್ತಿದ್ದೇವೆ. ಇಡೀ ದೇಶದಲ್ಲಿ ಬರದ ಪರಿಸ್ಥಿತಿ ಇದೆ. ನಿಮ್ಮ ಸಹಕಾರ ಸರ್ಕಾರಕ್ಕೆ ಅಗತ್ಯ. ಎಲ್ಲ ರೀತಿಯ ನೆರವಿಗೆ ನಿಮ್ಮೊಂದಿಗೆ ನಿಲ್ಲಲಾಗುವುದು ಎಂದು ಹೇಳಿದರು.

ತುಂಗಾಭದ್ರ ಜಲಾಶಯದ ಹಿನ್ನಿರಿನಿಂದ ಪಾವಗಡ ತಾಲೂಕಿಗೆ ಕುಡಿಯುವ ನೀರು ಯೋಜನೆ ಮಾಡಲಾಗಿದೆ. ಕಳೆದ ವರ್ಷ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಯೋಜನೆ ಇಲ್ಲವಾಗಿದ್ದರೆ ಪಾವಗಡ ತಾಲೂಕಿನಲ್ಲಿ ಕುಡಿಯುವ ನೀರಿಗೆ ತೀವ್ರತರ ಸಮಸ್ಯೆಯಾಗುತ್ತಿತ್ತು. ನಿಮ್ಮ ಅದೃಷ್ಟಕ್ಕೆ ಈ ವರ್ಷ ತುಂಗಾಭದ್ರ ಜಲಾಶಯ ಭರ್ತಿಯಾಗುತ್ತಿದೆ. ಪಾವಗಡ ತಾಲೂಕಿಗೆ ಕುಡಿಯುವ ನೀರು ಸಿಗುತ್ತದೆ. ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಎಲ್ಲ‌ ಸಚಿವರು ಬರ ಪರಿಸ್ಥಿತಿಯನ್ನು ಪರಿಶೀಲಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಬಳಿಕ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿ ಬರ ಪರಿಸ್ಥಿತಿಯನ್ನು ಗಮನಕ್ಕೆ ತರಲಾಗುವುದು. ಅಗತ್ಯ ಪರಿಹಾರ ಮಂಜೂರು ಮಾಡಲು ಒತ್ತಾಯಿಸಲಾಗುವುದು. ಈ ತಿಂಗಳ ಅಂತ್ಯದ ವೇಳೆಗೆ ವರದಿ ಸಲ್ಲಿಸುತ್ತೇವೆ ಎಂದು ಅವರು ತಿಳಿಸಿದರು.

ನಮ್ಮ ಕೆಲಸ ಕಾರ್ಯಗಳಿಗಾಗಿ ಜನ ಊರು ಬಿಡುತ್ತಿದ್ದು, ನಮಗೆ ಒಳಗಡೆ ಆತಂಕವಿದೆ. ಶಾಸಕ ಹೆಚ್.ವಿ.ವೆಂಕಟೇಶ್ ಅವರು ಪಾವಗಡ ತಾಲ್ಲೂಕಿನಲ್ಲಿ ಬರ ಪರಿಸ್ಥಿತಿಯನ್ನು ಗಂಭೀರವಾಗಿ ತೆಗೆದುಕೊಂಡು, ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments