ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಕ್ಷಣ ರಾಜೀನಾಮೆ ನೀಡಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ. ಪ್ರಸ್ತುತ ಎಸ್‌ಐಆರ್ ಪ್ರಕ್ರಿಯೆಯನ್ನು ರದ್ದುಪಡಿಸಿ, ಹೊಸದಾಗಿ ಮತದಾರರ ಪಟ್ಟಿ ಪರಿಷ್ಕರಿಸಬೇಕು ಎಂದು ತಿಳಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಮತದಾನದ ಹಕ್ಕು ಬದುಕುವ ಹಕ್ಕಿಗೆ ಸಮಾನ. ಕೇಂದ್ರ ಸರ್ಕಾರ ಮತಗಳ್ಳತನ ಮಾಡಿ ನಾಗರಿಕರ ಹಕ್ಕನ್ನು ಕಸಿಯುತ್ತಿದೆ. ಈ ಅಕ್ರಮ ವ್ಯವಸ್ಥೆಯಿಂದಾಗಿ ಪಶ್ಚಿಮ ಬಂಗಾಳ, ಬಿಹಾರ ಸೇರಿದಂತೆ ಹಲವು ರಾಜ್ಯಗಳ ಸರ್ಕಾರಗಳನ್ನು ನುಂಗಲಾಗಿದೆ. ಕರ್ನಾಟಕದಲ್ಲೂ 1 ಕೋಟಿಗೂ ಅಧಿಕ ಮತಗಳನ್ನು ತೆಗೆದುಹಾಕಲಾಗಿದೆ” ಎಂದು ಆರೋಪಿಸಿದರು.
ಚುನಾವಣಾ ಆಯೋಗದಲ್ಲಿ ಭಿನ್ನಾಭಿಪ್ರಾಯಗಳಿವೆ. ಬಹುಮತದ ಬೆಂಬಲವಿಲ್ಲದೆ ಏಕಪಕ್ಷೀಯ ನಿರ್ಧಾರ ಸಾಧ್ಯವಿಲ್ಲ. ಫಾರ್ಮ್ 6, 7, 8 ಪ್ರಕ್ರಿಯೆ ಪ್ರಜಾಸತ್ತಾತ್ಮಕವಲ್ಲ. ಅನಕ್ಷರಸ್ಥರು ಮತ್ತು ದುರ್ಬಲ ವರ್ಗಗಳ ಧ್ವನಿ ಹತ್ತಿಕ್ಕಲಾಗುತ್ತಿದೆ ಎಂದು ಅವರು ಖಂಡಿಸಿದರು.
ರಾಜ್ಯದಲ್ಲಿ ಎಸ್‌ಐಆರ್‌ಗೆ ಹೆಚ್ಚುವರಿ ಸಮಯ ನೀಡುವಂತೆ ಈಗಾಗಲೇ ಮನವಿ ಮಾಡಿದ್ದೇನೆ. ದೊಡ್ಡ ಮಟ್ಟದ ಚರ್ಚೆ ಅಗತ್ಯ ಎಂದು ತಿಳಿಸಿದರು.


