ನಾನು ಏನಾದರೂ ಇವರ ದೃಷ್ಟಿಯಲ್ಲಿ ಫುಟ್ಬಾಲಾ? ಈ ಹಿಂದೆ ನನ್ನನ್ನು ದೆಹಲಿಗೆ ಹೋಗಿ ಎಂದು ಒಗೆದರು. ಈಗ 2ನೇ ಬಾರಿ ಒದೆಯಲು ನಿಂತಿದ್ದಾರೆ. ಮತ್ತೆ ದಿಲ್ಲಿಗೆ ಹೋಗಿ ಬೀಳುವ ಮಾತೇ ಇಲ್ಲ ಎಂದು ಕಾಂಗ್ರೆಸ್ ಎಂಎಲ್ಸಿ ಪ್ರಕಾಶ್ ಹುಕ್ಕೇರಿ ಹೇಳಿದರು.
ಚಿಕ್ಕೋಡಿ ಲೋಕಸಭಾ ಚುನಾವಣೆಗೆ ತಮ್ಮ ಹೆಸರು ಪ್ರಸ್ತಾಪವಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೆರೂರ ಗ್ರಾಮದಲ್ಲಿ ಮಾತನಾಡಿ, ಸ್ವಪಕ್ಷದ ವಿರುದ್ಧವೇ ಹರಿಹಾಯ್ದರು.
ಹೈಕಮಾಂಡ್ ಹೇಳಿದರೂ ಒಪ್ಪಲ್ಲ
“ಶಿಕ್ಷಕರ ಸೇವೆ ಮಾಡಲು ನನ್ನನ್ನು ಆಯ್ಕೆ ಮಾಡಿದ್ದಾರೆಯೇ ವಿನಹ ಚುನಾವಣೆಗೆ ನಿಲ್ಲಲು ನನ್ನನ್ನು ಆಯ್ಕೆ ಮಾಡಿಲ್ಲ. ಯಾವುದೇ ಸಂದರ್ಭದಲ್ಲಿ ಎಷ್ಟೇ ಒತ್ತಡ ಬಂದರೂ ಸಹ ನಾನು ಸ್ಪರ್ಧೆ ಮಾಡಲ್ಲ. ಹೈಕಮಾಂಡ್ ಹೇಳಿದರೂ ನಾನು ಒಪ್ಪಲ್ಲ. ಚಿಕ್ಕೋಡಿ ಕ್ಷೇತ್ರದಿಂದ ಬೇರೆಯವರು ಸ್ಪರ್ಧೆ ಮಾಡಲಿ ಎಂದು ನೀವು ಬೇಕಾದರೆ ಶಿಫಾರಸು ಮಾಡಿ” ಎಂದರು.
” ವರ್ಷ, ಒಂದೂವರೆ ವರ್ಷಕ್ಕೊಮ್ಮೆ ಒದೆಯುತ್ತಾರೆ? ಇದೇನು ಫುಟ್ಬಾಲ್ ಮ್ಯಾಚಾ? ನನ್ನ ಅವಧಿ ಇನ್ನೂ 5 ವರ್ಷ ಇದೆ, ಸಾಕಷ್ಟು ಕೆಲಸ ಮಾಡಿದ್ದೇನೆ. ಶಿಕ್ಷಕರ ಸಾಕಷ್ಟು ಬೇಡಿಕೆಗಳು ಈಡೇರಿಸಬೇಕಿದೆ. ಅದಕ್ಕಾಗಿ ಇಲ್ಲೇ ಕೆಲಸ ಮಾಡುವೆ” ಎಂದು ಪ್ರಕಾಶ್ ಹುಕ್ಕೇರಿ ಸ್ಪಷ್ಟಪಡಿಸಿದರು.
ಸಿಎಂ ಸಿದ್ದರಾಮಯ್ಯಗೆ ಬರೆದುಕೊಟ್ಟಿಲ್ಲ
ಚುನಾವಣೆಗೆ ಸ್ಪರ್ಧಿಸುವಂತೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರಂತೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, “ನಾನೇನು ಅವರಿಗೆ ಬರೆದಿಕೊಟ್ಟಿದ್ದೇನೆಯೇ? ಚುನಾವಣೆಯಲ್ಲಿ ಸ್ಪರ್ಧಿಸುವಂತೆ ನಾನೇನೂ ಸಿಎಂ ಅವರಿಗೆ ಮಾತು ಕೊಟ್ಟಿಲ್ಲ. ಶಿಕ್ಷಕರ ಬೇಡಿಕೆಗಳ ಈಡೇರಿಕೆಗೇ ಕೆಲಸ ಮಾಡುವೆ” ಎಂದರು.