Homeಕರ್ನಾಟಕಬಲಿಷ್ಠ ಕರ್ನಾಟಕಕ್ಕೆ ನವ ಸಂಕಲ್ಪ: ಸಿಎಂ ಡಿ ಕೆ ಶಿವಕುಮಾರ್

ಬಲಿಷ್ಠ ಕರ್ನಾಟಕಕ್ಕೆ ನವ ಸಂಕಲ್ಪ: ಸಿಎಂ ಡಿ ಕೆ ಶಿವಕುಮಾರ್

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ನೂರು ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಗುರುವಾರ ಆಯೋಜಿಸಲಾಗಿದ್ದ ‘ದೃಢ ಕರ್ನಾಟಕದ ಸಂಕಲ್ಪ’ ಕಾರ್ಯಕ್ರಮ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಯಿತು. ಇದು ಕೇವಲ ನೂರುದಿನಗಳ ಸಂಭ್ರಮವಾಗಿರಲಿಲ್ಲ. ಈ ಅವಧಿಯಲ್ಲಿ ಸರ್ಕಾರ ಇಟ್ಟ ಜನಪರ ಹೆಜ್ಜೆಗುರುತುಗಳ ಪುನರ್ ಅವಲೋಕನ ಹಾಗೂ ಸದೃಢ ಕರ್ನಾಟಕ ನಿರ್ಮಾಣದ ಸಂಕಲ್ಪವಾಗಿತ್ತು.

ಸಿಎಂ ಡಿ.ಕೆ. ಶಿವಕುಮಾರ್ ಅವರು ವೇದಿಕೆ ಏರುವ ಮುನ್ನ, ಸಮಾರಂಭಕ್ಕೆ ಆಗಮಿಸಿದ್ದ ವಿವಿಧ ಯೋಜನೆಗಳ ಫಲಾನುಭವಿಗಳ ಬಳಿಗೆ ತಾವೇ ತೆರಳಿ ಉಭಯ ಕುಶಲೋಪರಿ ವಿಚಾರಿಸಿ ಎಲ್ಲರ ಮನ ಗೆದ್ದರು. ಬ್ಯಾಂಕ್ವೆಟ್ ಹಾಲ್ ಮುಂಭಾಗದಲ್ಲಿ ತೆರೆದಿದ್ದ ಅಕ್ಕಾ ಕೆಫೆ ಹಾಗೂ ಅರಿವು ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗಳೊಂದಿಗೆ ಮಾತುಕತೆ ನಡೆಸಿದರು.

ಫಲಾನುಭವಿಗಳಿಂದಲೇ ಉದ್ಘಾಟನೆ

ವೇದಿಕೆ ಮುಂಭಾಗದಲ್ಲಿ ಕುಳಿತಿದ್ದ ರಾಜ್ಯದ ಎಲ್ಲಾ ಸಚಿವ ಸಂಪುಟ ಸಚಿವರು ಮತ್ತು ಶಾಸಕ ಮಿತ್ರರ ಬಳಿಗೆ ಸಿಎಂ ಖುದ್ದಾಗಿ ಹೋಗಿ ಪ್ರತಿಯೊಬ್ಬರಿಗೂ ಹಸ್ತಲಾಘವ ನೀಡಿ ಸ್ವಾಗತಿಸಿದ್ದು ಸಮಾರಂಭಕ್ಕೆ ವಿಶೇಷ ಮೆರುಗು ನೀಡಿತು. ಕಾರ್ಯಕ್ರಮ ಉದ್ಘಾಟನೆಯ ವೇಳೆ ಗ್ಯಾರಂಟಿ ಫಲಾನುಭವಿಗಳು, ರೈತರು, ವಿದ್ಯಾರ್ಥಿಗಳು ಮತ್ತು ಪೌರಕಾರ್ಮಿಕರನ್ನು ವೇದಿಕೆಗೆ ಕರೆದು ಅವರೊಂದಿಗೆ ದೀಪ ಬೆಳಗಿಸಿದರು.

ಗೃಹಲಕ್ಷ್ಮೀ ಹಣವನ್ನು ಬಳಸಿ ಸ್ವಯಂ ಉದ್ಯೋಗ ಆರಂಭಿಸಿದ ಮಹಿಳೆಯರು ತಾವು ತಯಾರಿಸಿದ್ದ ಖಾದ್ಯವನ್ನು ಸಮಾರಂಭಕ್ಕೆ ತಂದಿದ್ದರು. ಮುಖ್ಯಮಂತ್ರಿಗಳು, ಸಚಿವರು ಮತ್ತು ಶಾಸಕರೆಲ್ಲಾ ಈ ಖಾದ್ಯವನ್ನು ಸವಿಯುವಂತೆ ಮನವಿ ಮಾಡಿದರು.

ಹೊಸ ಯೋಜನೆಗಳಿಗೆ ಚಾಲನೆ

ನೂರುದಿನಗಳ ನೆನಪಿಗಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಮತ್ತು ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮಕ್ಷಮದಲ್ಲಿ ನೂತನ ಜನಪರ ಯೋಜನೆಗಳನ್ನು ಘೋಷಿಸಿ ಅಭಿವೃದ್ಧಿಯ ಮೈಲಿಗಲ್ಲು ನೆಟ್ಟರು. ಸೇವಾಒನ್, ಮುಖ್ಯಮಂತ್ರಿ ರೈತ ಚೈತನ್ಯ ಯೋಜನೆ, ಶಾಲೆಗಳಿಗೆ ಸಿಎಸ್ಆರ್ ಪೋರ್ಟಲ್, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಬಿಎಂಟಿಸಿ 2.0 ಆ್ಯಪ್, ಒನ್ ಕರ್ನಾಟಕ ಮೊಬಿಲಿಟಿ ಆ್ಯಪ್ ಅವತಾರ್ 2.0 ಹಾಗೂ ಮಾಲಿನ್ಯ ನಿಯಂತ್ರಣ ಸಾಧನ (ರೆಟ್ರೋಫಿಟ್ ಎಮಿಷನ್ ಕಂಟ್ರೋಲ್ ಡಿವೈಸ್–ಆರ್‌ಇಸಿಡಿ) ಅಳವಡಿಕೆ ಯೋಜನೆಗಳಿಗೆ ಸಿಎಂ ಚಾಲನೆ ನೀಡಿದರು.

ರಾಜ್ಯದ ಬಡವರು, ವಿಶೇಷವಾಗಿ ಗ್ರಾಮೀಣ ಭಾಗದ ನಿವೇಶನರಹಿತರಿಗಾಗಿ ಸೂರು ಒದಗಿಸಲು 5 ಲಕ್ಷ ನಿವೇಶನ ಹಂಚಿಕೆ ಯೋಜನೆ ಹಾಗೂ ಸೈನಿಕ ಸಮ್ಮಾನ ಯೋಜನೆ ಆದೇಶಕ್ಕೆ ಸಿಎಂ ಸಹಿ ಹಾಕಿದರು. ಈ ಐತಿಹಾಸಿಕ ಕ್ಷಣಗಳಿಗೆ ಇಡೀ ಸಮಾರಂಭ ಸಾಕ್ಷಿಯಾಯಿತು.

ಫಲಾನುಭವಿಗಳೊಂದಿಗೆ ಬಾಳೆಎಲೆ ಭೋಜನ

ಸಮಾರಂಭ ಪೂರ್ಣಗೊಂಡ ನಂತರ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳೊಂದಿಗೆ ಕುಳಿತು ಮುಖ್ಯಮಂತ್ರಿಗಳು ಬಾಳೆಎಲೆ ಭೋಜನ ಸೇವಿಸಿದರು. ಈ ವೇಳೆ ಪಕ್ಕದಲ್ಲಿ ಕುಳಿತ ರೈತನೊಂದಿಗೆ “ಯಾವ ಊರು? ಏನು ಬೆಳೆ ಹಾಕಿದ್ದೀಯಾ? ಮಳೆ ಏನಾದರೂ ಬಿತ್ತಾ? ಏನು ಭಯ ಬೀಳಬೇಡ, ನಮ್ಮ ಸರ್ಕಾರ ಇದೆ” ಎಂದು ಊಟದ ಜೊತೆಗೆ ಅಭಯ ತುಂಬಿದರು.

ನೂರು ದಿನಗಳ ಸಮಾರಂಭದಲ್ಲಿ ಪ್ರಗತಿಯ ರಥ ಎಳೆಯುವ ಒಕ್ಕೊರಲಿನ ಸಂಕಲ್ಪ ಮಾಡಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments