Homeಕರ್ನಾಟಕನಮ್ಮ ರೈತರನ್ನು ಬಂಧಿಸಿರುವ ದುಷ್ಕೃತ್ಯದ ಹಿಂದಿನ ಕ್ರಿಮಿನಲ್ ಮೆದುಳು ಮೋದಿ: ಸಿದ್ದರಾಮಯ್ಯ ಕಿಡಿ

ನಮ್ಮ ರೈತರನ್ನು ಬಂಧಿಸಿರುವ ದುಷ್ಕೃತ್ಯದ ಹಿಂದಿನ ಕ್ರಿಮಿನಲ್ ಮೆದುಳು ಮೋದಿ: ಸಿದ್ದರಾಮಯ್ಯ ಕಿಡಿ

ದೆಹಲಿಯಲ್ಲಿ ನಾಳೆ (ಫೆ.13) ನಡೆಯಲಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದ ಹುಬ್ಬಳ್ಳಿಯ ರೈತರನ್ನು ಭೋಪಾಲ್ ನಲ್ಲಿ ಬಂಧಿಸಿರುವ ಮಧ್ಯಪ್ರದೇಶ ಸರ್ಕಾರದ ಕ್ರಮ ಅತ್ಯಂತ ಖಂಡನೀಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಬಂಧಿಸಲಾದ ರಾಜ್ಯದ ನಮ್ಮ ಎಲ್ಲ ರೈತರನ್ನು ತಕ್ಷಣ ಬಿಡುಗಡೆಗೊಳಿಸಿ ನಾಳೆ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸಿಕೊಳ್ಳಲು ಕಳಿಸಿಕೊಡಬೇಕು” ಎಂದು‌ ಮಧ್ಯಪ್ರದೇಶ ಸರ್ಕಾರವನ್ನು ಒತ್ತಾಯಿಸಿದ್ದಾರೆ.

“ಬಂಧಿಸಿರುವುದು ಮಧ್ಯಪ್ರದೇಶದ ಸರ್ಕಾರವಾದರೂ ಈ ದುಷ್ಕೃತ್ಯದ ಹಿಂದಿನ ಕ್ರಿಮಿನಲ್ ಮೆದುಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಎನ್ನುವುದು ಸ್ಪಷ್ಟ” ಎಂದು ಕಿಡಿಕಾರಿದ್ದಾರೆ.

“ಈ ರೀತಿ ಬಂಧಿಸಿ, ಬೆದರಿಸಿ ರೈತರ ಹೋರಾಟವನ್ನು ಹತ್ತಿಕ್ಕಲಾಗದು. ಇಂತಹ ದಬ್ಬಾಳಿಕೆಯಿಂದ ಇನ್ನಷ್ಟು ರೈತರು ಬೀದಿಗಿಳಿಯಬಹುದೇ ಹೊರತು ಮಣ್ಣಿನ ಮಕ್ಕಳ ಹೋರಾಟ ನಿಲ್ಲದು. ಶಾಂತಿ-ಸುವ್ಯವಸ್ಥೆಯ‌ ಕಾಳಜಿಯನ್ನು ಕೇಂದ್ರ ಸರ್ಕಾರ ಹೊಂದಿದ್ದರೆ ತಕ್ಷಣ ರೈತರ ಬೇಡಿಕೆಗಳನ್ನು ಈಡೇರಿಸಿ ಸಮಸ್ಯೆ ಬಗೆಹರಿಸಬೇಕೇ ಹೊರತು ಈ ರೀತಿ ದಮನ-ದೌರ್ಜನ್ಯ ನಡೆಸಿ ರೈತರ ಬಾಯಿ ಮುಚ್ಚಿಸುವುದಲ್ಲ” ಎಂದಿದ್ದಾರೆ.

“ಕೇಂದ್ರದಲ್ಲಿ ಇರಲಿ, ರಾಜ್ಯಗಳಲ್ಲಿ ಇರಲಿ‌ ಬಿಜೆಪಿ ಕೈಗೆ ಅಧಿಕಾರ ಬಂದ ಕೂಡಲೇ ಅವರು ಮೊದಲು ದಂಡ ಪ್ರಯೋಗ ಮಾಡುವುದು ಅನ್ನದಾತರ ಮೇಲೆ‌ ಎನ್ನುವುದಕ್ಕೆ ಇತಿಹಾಸ ಸಾಕ್ಷಿ. ಕರ್ನಾಟಕದಲ್ಲಿ ಮೊದಲ ಬಾರಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಗೊಬ್ಬರ ಕೇಳಿದ್ದ ರೈತರನ್ನು ನಿರ್ದಯವಾಗಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಗುಂಡಿಕ್ಕಿ ಕೊಂದಿತ್ತು. ಕೇಂದ್ರದ ನರೇಂದ್ರ ಮೋದಿಯವರ ಸರ್ಕಾರ ದೆಹಲಿ ಮತ್ತು ಉತ್ತರಪ್ರದೇಶಲ್ಲಿ ಪ್ರತಿಭಟನಾನಿರತ ರೈತರ ಮೇಲೆ ನಡೆಸಿದ್ದ ದೌರ್ಜನ್ಯದಲ್ಲಿ ಹಲವಾರು ರೈತರು ಸಾವಿಗೀಡಾಗಿದ್ದರು” ಎಂದು ನೆನಪಿಸಿದ್ದಾರೆ.

“ನರೇಂದ್ರ ಮೋದಿ ಅವರ ಸರ್ಕಾರದ ಈಗಿನ ಕ್ರಮಗಳನ್ನು ನೋಡಿದರೆ ರೈತರನ್ನು ಬೆದರಿಸಿ ತಲೆ ಎತ್ತದಂತೆ‌ ಮಾಡುವುದೇ ಮುಖ್ಯ ಉದ್ದೇಶವಿದ್ದಂತೆ ಕಾಣುತ್ತಿದೆ” ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments