ಬಳ್ಳಾರಿ ನಗರ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಅವರ ಮನೆ ಮತ್ತು ಕಚೇರಿಯಲ್ಲಿ ಶನಿವಾರದಿಂದ ನಡೆಯುತ್ತಿದ್ದ ಜಾರಿ ನಿರ್ದೇಶನಾಲಯ (ಇ.ಡಿ)ದ ಅಧಿಕಾರಿಗಳ ಶೋಧ ಭಾನುವಾರ ರಾತ್ರಿ ಮುಗಿದಿದೆ.
ನಾರಾ ಭರತ್ ರೆಡ್ಡಿಗೆ ಶನಿವಾರ ಬೆಳ್ಳಂಬೆಳಗ್ಗೆ ಇ,ಡಿ ಅಧಿಕಾರಿಗಳು ಶಾಕ್ ನೀಡಿದ್ದರು. ಶಾಸಕರ ನಿವಾಸದ ಮೇಲೆ ಏಕಕಾಲದಲ್ಲಿ ನಾಲ್ಕು ಕಡೆ ದಾಳಿ ನಡೆಸಿರುವ ಅಧಿಕಾರಿಗಳು ಎರಡು ದಿನ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಗಾಂಧಿನಗರದಲ್ಲಿರುವ ಭರತ್ ರೆಡ್ಡಿ ಕಚೇರಿಯಲ್ಲಿ ಭಾನುವಾರ ರಾತ್ರಿ 11.30ರ ವರೆಗೆ ಪರಿಶೀಲನೆ ನಡೆಸಿದ ಅಧಿಕಾರಿಗಳು, ನಂತರ ನಿರ್ಗಮಿಸಿದರು. ಹಣ ಅಕ್ರಮ ವರ್ಗಾವಣೆ ಪ್ರಕರಣವೊಂದರ ತನಿಖೆಯ ಭಾಗವಾಗಿ ಭರತ್ ರೆಡ್ಡಿ ಮೇಲೆ ಇ.ಡಿ ದಾಳಿ ನಡೆದಿದೆ ಎನ್ನಲಾಗಿದೆ.
ಶಾಸಕರ ಬೆಂಗಳೂರು ಹಾಗೂ ಚೆನ್ನೈನ ಕಚೇರಿಗಳ ಮೇಲೂ ದಾಳಿ ನಡೆದಿದೆ ಎನ್ನಲಾಗಿದೆ. ಶಾಸಕ ಭರತ್ ರೆಡ್ಡಿ ಅವರ ಕುಟುಂಬ ಗ್ರಾನೈಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಕೊಪ್ಪಳ ಜಿಲ್ಲೆಯ ಕುಕನೂರು ಹಾಗೂ ಆಂಧ್ರ ಪ್ರದೇಶದ ಒಂಗೋಲ್‌ಗಳಲ್ಲಿ ಕ್ವಾರಿಗಳನ್ನು ಹೊಂದಿದೆ. ಇನ್ನು, ಇಡಿ ಅಧಿಕಾರಿಗಳ ತಂಡ ಬೆಂಗಳೂರಿನಿಂದ ಆಗಮಿಸಿದ್ದು, ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡದೆ ದಾಳಿ ನಡೆಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ.