ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಡುವೆ ಬಹಳ ದಿನದಿಂದ ಮಡುಗಟ್ಟಿದ ಅಸಮಾಧಾನ ಕೊನೆಗೂ ಸ್ಫೋಟಗೊಂಡಿದೆ.
ಆದಷ್ಟು ಶೀಘ್ರವೇ ಕೆಪಿಸಿಸಿಗೆ ಹೊಸ ಅಧ್ಯಕ್ಷರ ನೇಮಕ ಮಾಡಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರನ್ನು ಭೇಟಿ ಮಾಡಿ ಬೇಡಿಕೆ ಇಟ್ಟಿದ್ದೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, “ಸುರ್ಜೆವಾಲಾರನ್ನು ಭೇಟಿ ಮಾಡಿದ್ದೇನೆ. ಪಕ್ಷದ ಆಗು ಹೋಗುಗಳು ಹಾಗೂ ಸಂಘಟನೆ ಬಗ್ಗೆ ಚರ್ಚೆ ಮಾಡಿರುವೆ. ಆದಷ್ಟು ಬೇಗ ಹೊಸ ಅಧ್ಯಕ್ಷರ ನೇಮಕ ಆಗಬೇಕು ಎಂದು ಹೇಳಿದ್ದೇನೆ. ಡಿ ಕೆ ಶಿವಕಮಾರ್ ಅವರನ್ನೇ ಮುಂದುವರಿಸುವುದಾದರೆ ಅದನ್ನೂ ಸ್ಪಷ್ಟಪಡಿಸಿ ಅಂತ ಹೇಳಿದ್ದೇನೆ. ನಮಗೆ ಪೂರ್ಣಪ್ರಮಾಣದ ಅಧ್ಯಕ್ಷರು ಬೇಕು. ಮತ ಸೆಳೆಯುವವರನ್ನು ಹಾಗೂ ವರ್ಚಸ್ಸು ಇರುವವರನ್ನು ಅಧ್ಯಕ್ಷರನ್ನಾಗಿ ಮಾಡಿ ಅಂತ ಹೇಳಿದ್ದೇನೆ” ಎಂದರು.
“ನನ್ನನ್ನು ಅಧ್ಯಕ್ಷ ಮಾಡಿ ಅಂತ ಕೇಳಿಲ್ಲ. ಆದರೆ ಪೂರ್ಣ ಪ್ರಮಾಣದ ಅಧ್ಯಕ್ಷರನ್ನು ಮಾಡಿ ಎಂದು ಹೇಳಿದ್ದೇನೆ. ಇವರು ಇರಬೇಕು ಬೇಡ ಎಂಬ ಬಗ್ಗೆ ಗೊಂದಲಗಳಿವೆ. ಹೀಗಾಗಿ ಎಲ್ಲ ಗೊಂದಲಗಳಿಗೆ ತೆರೆಎಳೆಯಿರಿ” ಎಂದು ಸುರ್ಜೆವಾಲಾಗೆ ಮನವಿ ಮಾಡಿರುವೆ” ಎಂದು ಹೇಳಿದರು.
ಒಂದು ಕಡೆ ತೆರೆಮರೆಯಲ್ಲೇ ಸಿಎಂ ಕುರ್ಚಿ ಫೈಟ್ ನಡೆಯುತ್ತಿದೆ. ಇದೀಗ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗು ಎಬ್ಬಿಸಿರೋ ಸಚಿವ ಸತೀಶ್ ಜಾರಕಿಹೊಳಿ, ನೇರಾ ನೇರವಾಗಿಯೇ ಹೊಸ ಅಧ್ಯಕ್ಷರ ನೇಮಕಕ್ಕೆ ಪಟ್ಟು ಹಿಡಿದಿದ್ದಾರೆ. ಕೊನೆಯ ಎರಡ್ಮೂರು ವರ್ಷವದಾರೂ ಸಿಎಂ ಆಗಬೇಕೆಂದು ಡಿ ಕೆ ಶಿವಕುಮಾರ್ ಕಸರತ್ತು ನಡೆಸಿದ್ದಾರೆ. ಆದರೆ ಇತ್ತ ಸತೀಶ್ ಜಾರಕಿಹೊಳಿ ಡಿ ಕೆ ಶಿವಕುಮಾರ್ ಬಳಿ ಇರುವ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರಾ ಎನ್ನುವ ಅನುಮಾನ ಅವರ ಮಾತುಗಳಿಂದಲೇ ವ್ಯಕ್ತವಾಗಿದೆ.