ಮಹರ್ಷಿ ವಾಲ್ಮೀಕಿಯವರ ಆದರ್ಶಗಳು, ಜೀವನ ಸಂದೇಶ ಹಾಗೂ ಕೊಡುಗೆಗಳನ್ನು ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ತಿಳಿಸಿದ್ದಾರೆ.
ಬೆಂಗಳೂರಿನ ವಿಕಾಸಸೌಧದಲ್ಲಿ ಸಚಿವ ಟಿ.ರಘುಮೂರ್ತಿ ಅಧ್ಯಕ್ಷತೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯ ಕುರಿತು ಶನಿವಾರ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಪರಿಶಿಷ್ಟ ಪಂಗಡಗಳ ಸಮುದಾಯದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಬೇಡಿಕೆಗಳ ಕುರಿತು ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರೊಂದಿಗೂ ಸಮಾಲೋಚನೆ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಪರಿಶಿಷ್ಟ ಪಂಗಡಗಳ ಸಮುದಾಯದ ಪ್ರಮುಖ ಹಬ್ಬಗಳು, ಜಯಂತಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಗೌರವಯುತವಾಗಿ ಆಚರಿಸಲು ಅಗತ್ಯ ಪ್ರೋತ್ಸಾಹ ಮತ್ತು ಸಹಕಾರ ನೀಡುವಂತೆ ಮುಖಂಡರು ಮನವಿ ಮಾಡಿದರು.
ಶಾಸಕರ ಭವನದ ವಾಲ್ಮೀಕಿ ಉದ್ಯಾನವನ ಅಭಿವೃದ್ಧಿಗೆ ಸಲಹೆ
ಬೆಂಗಳೂರಿನ ಶಾಸಕರ ಭವನದಲ್ಲಿರುವ ವಾಲ್ಮೀಕಿ ಉದ್ಯಾನದಲ್ಲಿ ಮಹರ್ಷಿ ವಾಲ್ಮೀಕಿಯವರ ಜೀವನ ಚರಿತ್ರೆ, ಆದರ್ಶಗಳು ಹಾಗೂ ಮಹತ್ವದ ಸಂದೇಶಗಳನ್ನು ಸಾರುವ ಸುಂದರ ಉದ್ಯಾನವನ ನಿರ್ಮಿಸುವ ಉದ್ದೇಶದಿಂದ ಸಿದ್ಧಪಡಿಸಲಾದ ಸಾಕ್ಷ್ಯಚಿತ್ರವನ್ನು ಸಭೆಯಲ್ಲಿ ಪ್ರದರ್ಶಿಸಲಾಯಿತು.
ಉದ್ಯಾನವನದ ವಿನ್ಯಾಸ, ಅಭಿವೃದ್ಧಿ ಹಾಗೂ ಮಹರ್ಷಿ ವಾಲ್ಮೀಕಿಯವರ ಜೀವನ ಸಂದೇಶಗಳನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಕುರಿತು ಸಮುದಾಯದ ಮುಖಂಡರಿಂದ ಸಲಹೆ ಮತ್ತು ಸೂಚನೆಗಳನ್ನು ಪಡೆಯಲಾಯಿತು. ಮಹರ್ಷಿ ವಾಲ್ಮೀಕಿಯವರ ಜೀವನ ಸಾಧನೆ, ಸಾಹಿತ್ಯಿಕ ಕೊಡುಗೆ ಹಾಗೂ ಆದರ್ಶಗಳನ್ನು ಸಾರ್ವಜನಿಕರಿಗೆ ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಉದ್ಯಾನವನವನ್ನು ಅಭಿವೃದ್ಧಿಪಡಿಸುವ ಕುರಿತು ಚರ್ಚಿಸಲಾಯಿತು.
ವಾಲ್ಮೀಕಿ ಭವನ, ಆಡಳಿತ ಸೌಧ ಹಾಗೂ ಸಭಾಭವನ ನಿರ್ಮಾಣದ ಕುರಿತು ಚರ್ಚೆ
ವಾಲ್ಮೀಕಿ ಭವನ, ಆಡಳಿತ ಸೌಧ ಹಾಗೂ ಸಭಾಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಿದ್ಧಪಡಿಸಲಾದ ಸಾಕ್ಷ್ಯಚಿತ್ರವನ್ನೂ ಸಭೆಯಲ್ಲಿ ಪ್ರದರ್ಶಿಸಲಾಯಿತು. ಕಟ್ಟಡದ ವಿನ್ಯಾಸ, ಅಗತ್ಯ ಮೂಲಸೌಕರ್ಯಗಳು ಹಾಗೂ ಸಮುದಾಯದ ಸಾಂಸ್ಕೃತಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಅನುಕೂಲವಾಗುವ ವ್ಯವಸ್ಥೆಗಳ ಕುರಿತು ಸಮುದಾಯದ ಮುಖಂಡರಿಂದ ಸಲಹೆ ಮತ್ತು ಸೂಚನೆಗಳನ್ನು ಸಂಗ್ರಹಿಸಲಾಯಿತು.
ಬೆಂಗಳೂರಿನ ವಿಧಾನಸೌಧದ ಸಮೀಪ ಸೂಕ್ತ ಸ್ಥಳ ಗುರುತಿಸಿ ವಾಲ್ಮೀಕಿ ಭವನ ನಿರ್ಮಿಸಬೇಕು ಎಂಬ ಬೇಡಿಕೆಯನ್ನೂ ಮುಖಂಡರು ಪ್ರಸ್ತಾಪಿಸಿದರು.
ಮೀಸಲಾತಿ ಹೆಚ್ಚಳದ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ
ಪರಿಶಿಷ್ಟ ಪಂಗಡಗಳ ಸಮುದಾಯದ ಮೀಸಲಾತಿ ಹೆಚ್ಚಳದ ವಿಚಾರವನ್ನು ಸಭೆಯಲ್ಲಿ ಮುಖಂಡರು ಪ್ರಸ್ತಾಪಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಟಿ. ರಘುಮೂರ್ತಿ ಅವರು, ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದ ಬೇಡಿಕೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರದೊಂದಿಗೆ ಚರ್ಚಿಸಿ, ಸೂಕ್ತ ಪರಿಶೀಲನೆಯ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇಲಾಖೆಯ ಸೌಲಭ್ಯಗಳು ಅರ್ಹ ಬಡವರಿಗೆ ತಲುಪಬೇಕು
ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಿಂದ ಸಮುದಾಯದ ಜನರಿಗೆ ದೊರೆಯಬೇಕಾದ ವಿವಿಧ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುತ್ತಿಲ್ಲ ಎಂಬ ವಿಚಾರವನ್ನು ಮುಖಂಡರು ಸಚಿವರ ಗಮನಕ್ಕೆ ತಂದರು.
ಇದಕ್ಕೆ ಉತ್ತರಿಸಿದ ಸಚಿವರು, ಇಲಾಖೆಯಲ್ಲಿ ಜಾರಿಯಲ್ಲಿರುವ ವಿವಿಧ ಯೋಜನೆಗಳ ಕುರಿತು ಮಾಹಿತಿ ಸಂಗ್ರಹಿಸಿ ಅವುಗಳ ಅನುಷ್ಠಾನ ಹಾಗೂ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಶಿಕ್ಷಣ, ವಸತಿ, ಭೂಮಿ ಹಾಗೂ ಸಮುದಾಯದ ಸಮಗ್ರ ಅಭಿವೃದ್ಧಿ
ಪರಿಶಿಷ್ಟ ಪಂಗಡಗಳ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವುದು, ವಿದ್ಯಾರ್ಥಿನಿಲಯಗಳ ಮೂಲಸೌಕರ್ಯ ಸುಧಾರಿಸುವುದು, ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಾಣದ ಸೌಲಭ್ಯ ಕಲ್ಪಿಸುವುದು ಹಾಗೂ ಸಮುದಾಯದ ಜನರು ಎದುರಿಸುತ್ತಿರುವ ಭೂಮಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಪರಿಶಿಷ್ಟ ಪಂಗಡಗಳ ವಿಶ್ವವಿದ್ಯಾಲಯದ ಅಭಿವೃದ್ಧಿ ಹಾಗೂ ಸಮುದಾಯದ ಇತಿಹಾಸ, ಪರಂಪರೆ, ಸಂಸ್ಕೃತಿ ಮತ್ತು ಜೀವನಶೈಲಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ವಸ್ತುಸಂಗ್ರಹಾಲಯದ ಅಭಿವೃದ್ಧಿಯ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದ್ದು, ಈ ಕುರಿತ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವ ಟಿ. ರಘುಮೂರ್ತಿ ಭರವಸೆ ನೀಡಿದರು.


