ಪ್ರಧಾನಮಂತ್ರಿ ನರೇಂದ್ರ ಮೋದಿಯವರ ರಾಷ್ಟ್ರೀಯತೆ, ದೇಶ ಮೊದಲು ಎಂಬ ಚಿಂತನೆ ಮತ್ತು ಸಾಂಸ್ಕೃತಿಕ ಪ್ರಜಾಪ್ರಭುತ್ವದ ಆಧಾರದ ಮೇಲಿನ ಆಡಳಿತದಿಂದ ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ಹುಬ್ಬಳ್ಳಿಯ ಅಶೋಕ ನಗರದಲ್ಲಿರುವ ನವನೀಕೇತನ ಕೋ ಆಪ್ ಹೌಸಿಂಗ್ ಸೊಸಾಯಿಟಿಯಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾದ ಎಸ್.ವಿ ಸಂಕನೂರ ಅವರ ಪರ ಮತಯಾಚನೆಯನ್ನು ಮಾಡಿದರು. ಇಂದಿನ ತಂತ್ರಜ್ಞಾನ ಯುಗದಲ್ಲಿ ಜನಸಾಮಾನ್ಯರ ಅಭಿಪ್ರಾಯಗಳನ್ನು ರೂಪಿಸುವಲ್ಲಿ ಸಾಮಾಜಿಕ ಜಾಲತಾಣಗಳು ದೊಡ್ಡ ಪಾತ್ರವಹಿಸುತ್ತಿವೆ. ಆದರೆ ಇವೆಲ್ಲದರ ಹಿಂದಿನ ಅಜೆಂಡಾ ಪ್ರಧಾನಿ ಮೋದಿಯವರ ವಿರೋಧವಾಗಿದೆ ಎಂದು ಆರೋಪಿಸಿದರು.
ಪ್ರಧಾನಿ ಮೋದಿ ಅವರು ಒಬ್ಬ ನೈಜ ರಾಷ್ಟ್ರೀಯವಾದಿಯಾಗಿದ್ದು “ದೇಶ ಮೊದಲು” ಎನ್ನುವ ತತ್ವದಡಿ ಭಾರತದ ಬಗ್ಗೆ ಅತ್ಯಂತ ಅಭಿಮಾನದಿಂದ ಆಳವಾದ ಚಿಂತನೆ ನಡೆಸಿ ಶ್ರೇಷ್ಠ ಭಾರತ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ಹೆಚ್ಚುತ್ತಿದ್ದು, ಇದನ್ನು ಸಹಿಸದ ಕೆಲವು ಶಕ್ತಿಗಳು ದೇಶದೊಳಗೆ ವಿವಿಧ ರೀತಿಯಲ್ಲಿ ವಿರೋಧ ಹಾಗೂ ಅರಾಜಕತೆಯನ್ನು ಸೃಷ್ಟಿಸಲು ಯತ್ನಿಸುತ್ತಿವೆ ಎಂದು ಬೊಮ್ಮಾಯಿ ಕಿಡಿಕಾರಿದರು.
ಫ್ರಾನ್ಸ್ ಮತ್ತು ಸ್ಪೇನ್ ನಿದರ್ಶನ
ಫ್ರಾನ್ಸ್ ಮತ್ತು ಸ್ಪೇನ್ ದೇಶಗಳಲ್ಲಿ ಇತ್ತೀಚೆಗೆ ನಡೆದಿರುವ ಬೆಳವಣಿಗೆಗಳನ್ನು ಉಲ್ಲೇಖಿಸಿದ ಅವರು, ಅಲ್ಲಿ ಕೇವಲ ತಂತ್ರಜ್ಞಾನ ಹಾಗೂ ಕಮರ್ಷಿಯಲ್ ವ್ಯವಹಾರವಷ್ಟೇ ಇರುವುದರಿಂದ ಸುಲಭವಾಗಿ ಅರಾಜಕತೆಯನ್ನು ಮುಗಿಸಿ ಮುನ್ನಡೆಯಲು ಸಾಧ್ಯವಾಗುತ್ತಿದೆ. ಆದರೆ ಭಾರತದಲ್ಲಿ ಪರಿಸ್ಥಿತಿ ಭಿನ್ನವಾಗಿದ್ದು, ಇಲ್ಲಿ ನಮ್ಮದೇ ಆದ ಆಳವಾದ ಬೇರೂರಿದ ಸಂಸ್ಕೃತಿ ಇದೆ. ನಾವು ನಮ್ಮ ಸಂಸ್ಕೃತಿಯ ಆಧಾರದ ಮೇಲೆ ಬದುಕು ನಡೆಸುವಂತಹ ಜನ, ಸಂಸ್ಕೃತಿಯೊಂದಿಗೆ ನಾವು ಬದುಕನ್ನು ನಡೆಸಬೇಕಾಗಿದೆ ಎಂದು ಹೇಳಿದರು.
ದೇಶಾದ್ಯಂತ ಹಾಗೂ ವಿದೇಶಗಳಲ್ಲೂ ಕೂಡ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಕಲ್ಪಿಸುವ ನಾಯಕತ್ವ ಇಂದು ಭಾರತಕ್ಕೆ ಬಂದಿದ್ದರೆ, ಅದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾತ್ರ ಸಾಧ್ಯವಾಗಿದೆ. ಒಂದು ಕಾಲದಲ್ಲಿ ಯಾರಿಗೂ ಜಮೀನು ಇಲ್ಲದಿದ್ದರೂ ಜಗತ್ತನ್ನು ಆಳುತ್ತಿದ್ದರು. ಆದರೆ ಇಂದಿನ ತಂತ್ರಜ್ಞಾನ ಯುಗದಲ್ಲಿ ಜ್ಞಾನವನ್ನೇ ಸಂಪೂರ್ಣವಾಗಿ ಕೈಯಲ್ಲಿ ಹಿಡಿದುಕೊಂಡು ತಂತ್ರಜ್ಞಾನದ ಜ್ಞಾನವನ್ನು ವಿಕೃತಗೊಳಿಸಿ ಅದರ ಮುಖಾಂತರ ಜಗತ್ತನ್ನು ಆಳುವ ಪ್ರಯತ್ನ ನಡೆಯುತ್ತಿದೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಇಂದಿನ ಎಲ್ಲಾ ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳ ದಾಳಿಗಳು ಪ್ರಧಾನಿ ಮೋದಿಯವರ ವಿರುದ್ಧ ಹಾಗೂ ಚುನಾವಣೆಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿವೆ. ಈ ಅರಾಜಕತೆಯನ್ನು ಕೊನೆಗೊಳಿಸುವಂತಹ ಕೆಲಸ ಇಂದು ರಾಜ್ಯದಲ್ಲಿ ಆಗಬೇಕಿದೆ. ಆದರೆ ಪ್ರಸ್ತುತ ರಾಜ್ಯದಲ್ಲಿ ಸಂಪೂರ್ಣವಾಗಿ ಅಭಿವೃದ್ಧಿ ಕುಂಟಿತಗೊಂಡಿದ್ದು, ಸಾಲ ಹೆಚ್ಚಾಗಿದೆ, ಖಜಾನೆ ಖಾಲಿಯಾಗಿದೆ ಮತ್ತು ಬರೀ ಹಗರಣಗಳೇ ಸೃಷ್ಟಿಯಾಗುತ್ತಿವೆ ಎಂದು ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ
ರಾಜ್ಯದಲ್ಲಿ ಶಿಕ್ಷಕರಿಗೆ ಯಾವುದೇ ಕೆಲಸವನ್ನು ಈ ಸರ್ಕಾರ ಮಾಡಿಕೊಟ್ಟಿಲ್ಲ. ಖಾಸಗಿ ಸಂಸ್ಥೆಗಳಾಗಲಿ ಅಥವಾ ಸರ್ಕಾರದ ನೌಕರರಾಗಲಿ ಯಾವುದೇ ಅನುಕೂಲಗಳನ್ನು ಈ ಸರ್ಕಾರ ಒದಗಿಸಿಲ್ಲ ಎಂದು ಟೀಕಿಸಿದರು. ಮುಂಬರುವ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆದ್ದು ಬಂದರೆ, ಜನಪರವಲ್ಲದ ಈ ಸರ್ಕಾರಕ್ಕೆ ತಕ್ಕ ಪಾಠ ಕಲಿಸಿದಂತಾಗುತ್ತದೆ ಎಂದರು.
ಕಾಂಗ್ರೆಸ್ ಸರ್ಕಾರದ ಪತನ
ಕರ್ನಾಟಕದಲ್ಲಿ 2028ಕ್ಕೆ ಮತ್ತೆ ನರೇಂದ್ರ ಮೋದಿಯವರ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ಸರ್ಕಾರಿ ನೌಕರರ ಮೇಲೆ ಸರ್ಕಾರದ ಕಡೆಯಿಂದ ಬಹಳಷ್ಟು ಒತ್ತಡಗಳು ಬರುತ್ತಿದ್ದು, ನಿಮ್ಮ ಸ್ನೇಹಿತರ ಬಳಿ ಧೈರ್ಯವಾಗಿರಿ ಎಂದು ಹೇಳಬೇಕಿದೆ. ಸರ್ಕಾರಿ ನೌಕರರು 35 ವರ್ಷಗಳ ಕಾಲ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದು, ತಮ್ಮ ಆತ್ಮಸಾಕ್ಷಿಯಂತೆ ಸರಿಯಾದ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಕರೆ ನೀಡಿದರು.
ಬಿಜೆಪಿ ಅಭ್ಯರ್ಥಿ ಎಸ್. ವಿ. ಸಂಕನೂರ ಎರಡು ಬಾರಿ ಉತ್ತಮ ಕೆಲಸ ಮಾಡಿದ್ದು, ಉದ್ಯೋಗ ಮೇಳಗಳನ್ನು ಆಯೊಜನೆ ಮಾಡುವ ಮೂಲಕ ಪ್ರತಿಯೊಬ್ಬ ಉದ್ಯೋಗಿ ವರ್ಷಕ್ಕೆ 2300 ಜನರಿಗೆ ಉದ್ಯೋಗ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.
ಈ ಸಂಧರ್ಭದಲ್ಲಿ ಶಾಸಕರಾದ ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ ರವಿ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ, ಮುಖಂಡರುಗಳಾದ ವೀರಣ್ಣ ಸವಡಿ, ಸಂತೋಷ ಚವ್ಹಾಣ, ಬೀರಪ್ಪ ಕಂಡೇಕರ, ಈಶ್ವರಗೌಡ ಪಾಟೀಲ, ಎಮ.ವಾಯ್.ನರಗುಂದ, ರಾಜು ಕಾಳೆ, ಪ್ರೀತಂ ಅರಕೇರಿ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.


