16ನೇ ವಿಧಾನಸಭೆಯ ಎರಡನೇ ಅಧಿವೇಶನ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸೋಮವಾರ ಆರಂಭವಾಗಿದ್ದು, ಮಧ್ಯಾಹ್ನ ನಡೆದ ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಪಿಎಸ್‌ಐ ಪರೀಕ್ಷಾರ್ಥಿಗಳ ಪರವಾಗಿ ಧ್ವನಿ ಎತ್ತಿದರು.
ಸಭಾಧ್ಯಕ್ಷರನ್ನು ಉದ್ದೇಶಿಸಿ ಮಾತನಾಡಿದ ಯತ್ನಾಳ, “ಪಿಎಸ್‌ಐ ಅಕ್ರಮದಲ್ಲಿ ಯಾರು ಭಾಗಿಯಾಗಿದ್ದಾರೋ ಅವರನ್ನು ಒದ್ದು ಒಳಗೆ ಹಾಕಬೇಕು. ಪಿಎಸ್‌ಐ ಅಕ್ರಮದ ಬಗ್ಗೆ ಧ್ವನಿ ಎತ್ತಿದ್ದ ಕಾಂಗ್ರೆಸ್ ಈಗ ಸರ್ಕಾರದ ಸ್ಥಾನದಲ್ಲಿದೆ. ದಯವಿಟ್ಟು ಆ ಪರೀಕ್ಷಾರ್ಥಿಗಳಿಗೆ ನ್ಯಾಯಕೊಡಿಸಬೇಕು. ಗೃಹ ಸಚಿವರು ಮರು ಪರೀಕ್ಷೆಗೆ ಆರು ತಿಂಗಳು ಸಮಯಕೊಡಬೇಕು” ಎಂದು ಆಗ್ರಹಿಸಿದರು.
ಮುಂದುವರಿದು, “ವಿರೋಧ ಪಕ್ಷದಲ್ಲಿ ಪ್ರಿಯಾಂಕ್ ಖರ್ಗೆ ಅವರು ಆಗ ವೀರಾವೇಶದಿಂದ ಪಿಎಸ್‌ಐ ಅಕ್ರಮದ ಬಗ್ಗೆ ಮಾತನಅಡಿದ್ದರು. ಆಗಿನ ಅವರ ವೀರಾವೇಶ ಈಗ ಎಲ್ಲಿ ಹೋಯಿತು? ಪಿಎಸ್‌ಐ ಅಕ್ರಮವನ್ನು ಸಿಬಿಐ ತನಿಖೆಗೆ ಸರ್ಕಾರ ಕೊಡಬೇಕು. ರಾಜ್ಯದ ಜನತೆ ಯಾರು ಯಾರು ಭಾಗಿಯಾಗಿದ್ದಾರೆ ಎಂಬುದು ಗೊತ್ತಾಗಬೇಕು” ಎಂದು ಒತ್ತಾಯಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರು ಯತ್ನಾಳ ಮಾತಿಗೆ ಪ್ರತಿಕ್ರಿಯಿಸಿ, “ನ್ಯಾಯಕೊಡಿಸಲು ನಾನು ಈಗಲೂ ಹೋರಾಡುತ್ತೇನೆ. ಅವರದ್ದೇ ಸರ್ಕಾರ ಹಗರಣ ನಡೆದಿಲ್ಲ ಎಂದಿತ್ತು. ನಮ್ಮ ಸರ್ಕಾರ ಬಂದ ಮೇಲೆ ಫಾಲೋ ಅಪ್ ಮಾಡಿದ್ದರಿಂದ ಹೈಕೋರ್ಟ್ ಮರು ಪರೀಕ್ಷೆಗೆ ಅವಕಾಶ ಮಾಡಿದೆ. ಯತ್ನಾಳ ಅವರ ಮನಸಲ್ಲಿ ಏನಿದೆ ಅದನ್ನು ನಮ್ಮ ಸರ್ಕಾರ ಮಾಡಲಿದೆ” ಎಂದು ಹೇಳಿದರು.
ಗೃಹ ಸಚಿವ ಪರಮೇಶ್ವರ್ ಉತ್ತರಿಸಿ, “ಹಿಂದಿನ ಸರ್ಕಾರ ಪರೀಕ್ಷೆ ಮಾಡಿ, ದೈಹಿಕ ಪರೀಕ್ಷೆ ನಡೆಸಿತ್ತು. ಇನ್ನೇನು ಎಲ್ಲ ಮುಗಿದು ಹೋಯಿತು ಎನ್ನುವಷ್ಟರಲ್ಲಿ ಅಕ್ರಮ ಬೆಳಕಿಗೆ ಬಂದಿತು. ಮರು ಪರೀಕ್ಷೆಗೆ ಹಿಂದಿನ ಸರ್ಕಾರ ನಿರ್ಧಾರ ಮಾಡಿತ್ತು. ಪರೀಕ್ಷಾರ್ಥಿಗಳು ಕೋರ್ಟ್ ಮೆಟ್ಟಿಲೇರಿ ಎರಡು ವರ್ಷದ ನಂತರ ತೀರ್ಪು ಬಂದಿದೆ. ಮರು ಪರೀಕ್ಷೆ ಮಾಡಿ ಎಂದಿದೆ. ಆ ಪ್ರಕಾರ ನಾವು ಮಾಡುತ್ತಿದ್ದೇವೆ” ಎಂದು ತಿಳಿಸಿದರು.
ಮುಂದುವರಿದು, “ಪರೀಕ್ಷೆ ದಿನಾಂಕ ವಿಸ್ತರಣೆ ಮಾಡಲು ಆಗುವುದಿಲ್ಲ. ಎಲ್ಲ ಚರ್ಚೆ ಮಾಡಿ ಒಂದು ತೀರ್ಮಾಣಕ್ಕೆ ಬಂದಿದ್ದೇವೆ. ಇನ್ನೂ 403 ಜನ ಸಬ್ ಇನ್ಸ್‌ಪೆಕ್ಟರ್ ನೇಮಕಾತಿಗಾಗಿ ಕಾಯುತ್ತಿದ್ದಾರೆ. ನಂತರ 600 ಸಬ್ ಇನ್ಸ್‌ಪೆಕ್ಟರ್ ಹುದ್ದೆ ತುಂಬಬೇಕಿದೆ. ನೇಮಕಾತಿ ಮುಂದೆ ಮುಂದೆ ಹಾಕಲು ಆಗುವುದಿಲ್ಲ. ದಯವಿಟ್ಟು ಅರ್ಥ ಮಾಡಿಕೊಳ್ಳಲಿ” ಎಂದು ಸದನಕ್ಕೆ ತಿಳಿಸಿದರು.
ಯತ್ನಾಳ ಮಧ್ಯೆ ಪ್ರವೇಶಿಸಿ, “ಜನವರಿ ಕೊನೆಯ ವಾರದಲ್ಲಿ ಆದರೂ ಅವಕಾಶ ಮಾಡಿಕೊಡಿ. 54 ಸಾವಿರ ವಿದ್ಯಾರ್ಥಿಗಳ ಭವಿಷ್ಯವಿದೆ. ದಯವಿಟ್ಟು ಸರ್ಕಾರ ಸರ್ಕಾರ ಅರ್ಥಮಾಡಿಕೊಳ್ಳಲಿ” ಎಂದು ಸಭಾಧ್ಯಕ್ಷರನ್ನು ಕೋರಿದರು. ಯತ್ನಾಳ ಮಾತಿಗೆ ವಿರೋಧ ಪಕ್ಷದ ನಾಯಕ ಆರ್ ಅಶೋಕ ಸೇರಿದಂತೆ ಹಲವು ಶಾಸಕರು ಧ್ವನಿಗೂಡಿಸಿದರು.
ಸಚಿವ ಪರಮೇಶ್ವರ್ ಮತ್ತೆ ಮಾತನಾಡಿ, “ಶೆಡ್ಯೂಲ್ ಮಾಡಿ ಪರೀಕ್ಷೆ ನಡೆಸಲಾಗುತ್ತಿದೆ. ಹಿಂದಿನ ಅಕ್ರಮ ಮತ್ತೆ ಮರುಕಳಿಸಬಾರದು ಎಂದು ಈ ಸಲ ಬೆಂಗಳೂರಿನಲ್ಲಿ ಪರೀಕ್ಷೆ ನಡೆಸುತ್ತಿದ್ದೇವೆ. ಹಿಂದೆ ಪರೀಕ್ಷೆ ನಡೆದಾಗ ಸರಿಯಾಗಿ ಕ್ರಮ ತೆಗದೆಕೊಂಡಿದ್ದರೆ ಈ ಪರಿಸ್ಥಿತಿಯೇ ಬರುತ್ತಿರಲಿಲ್ಲ. ಪರೀಕ್ಷಾರ್ಥಿಗಳ ಹಿತದೃಷ್ಟಿಯಿಂದ ಡಿಸೆಂಬರ್ 23ರ ಬದಲು ಜನವರಿ 23ಕ್ಕೆ ಪಿಎಸ್‌ಐ ಮರು ಪರೀಕ್ಷೆ ನಡೆಸುತ್ತೇವೆ” ಎಂದು ಘೋಷಿಸಿದರು.