ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಾರು ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು ಬಳಿ ಮಂಗಳವಾರ ಬೆಳಿಗ್ಗೆ ಅಪಘಾತ ಸಂಭವಿಸಿದ್ದು, ಸಚಿವರ ಬೆನ್ನಿನ ಎರಡು ಮೂಳೆಯಲ್ಲಿ (ಎಲ್1 ಎಲ್4) ಸೀಳು ಕಂಡುಬಂದಿದೆ.
ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ. ಕಾರಿನಲ್ಲಿದ್ದ ಅವರ ಸಹೋದರ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರ ಮುಖ, ತಲೆಗೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.
ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಸಚಿವೆ ಚೇತರಿಸಿಕೊಂಡಿದ್ದಾರೆ. ನಾಲ್ಕು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಬೆನ್ನುಮೂಳೆಯು ಎರಡು ಕಡೆ ಅಲ್ಪ ಪ್ರಮಾಣದಲ್ಲಿ ಸೀಳಿದೆ ಎಂದು ವೈದ್ಯರು ಹೇಳಿದ್ದಾರೆ.
ವಾಹನ ಚಾಲಕ, ಗನ್ ಮ್ಯಾನ್‌ಗೂ ಗಾಯಗಳಾಗಿವೆ. ಏರ್ ಬ್ಯಾಗ್ ತೆರೆದುಕೊಂಡಿದ್ದರಿಂದ ಅವರಿಗೂ ಅಪಾಯ ಸಂಭವಿಸಿಲ್ಲ.
ಸಿಎಲ್‌ಪಿ ಸಭೆ ಮುಗಿಸಿ ರಸ್ತೆ ಮಾರ್ಗವಾಗಿ ಬೆಂಗಳೂರಿನಿಂದ ಬೆಳಗಾವಿಯತ್ತ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಯಾಣಿಸುತ್ತಿದ್ದರು. ಅಂಬಡಗಟ್ಟಿ ಗ್ರಾಮದ ಬಳಿ ನಾಯಿ ದಿಢೀರ್ ಅಡ್ಡಲಾಗಿ ಬಂದಿದೆ. ಅದನ್ನು ತಪ್ಪಿಸಲು ಹೋಗಿ ಕಾರು ಚಾಲಕ ಕಾರನ್ನು ಎಡಕ್ಕೆ ತಿರುಗಿಸಿದಾಗ ಮರಕ್ಕೆ ಡಿಕ್ಕಿ ಹೊಡೆದಿದೆ. ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ.