ಬಣ್ಣದಾಚೆಯ ಬದುಕಿನಲ್ಲೂ ನಟನೆಯನ್ನೇ ಸಿಂಗರಿಸಿಕೊಂಡೇ ಬಂದ ಅಪರೂಪದ ಕಥಾನಾಯಕಿಯರಲ್ಲಿ ಲೀಲಾವತಿ ಅಗ್ರರ ಸಾಲಿನಲ್ಲಿ ನಿಲ್ಲುವ ಮೇರು ವ್ಯಕ್ತಿತ್ವದವರು. ಚಂದನವನದ ಚೆಲುವೆಯ ಬದುಕಿನ ಪುಟಗಳನ್ನು ಶಣೈ ಅವರು ಇಲ್ಲಿ ಕಟ್ಟಿಕೊಟ್ಟಿದ್ದಾರೆ.
ನೀವು ಸಖಿಯೋ.. ನಾಯಕಿಯೋ.. ಪೋಷಕಿಯೋ.. ಅಮ್ಮನೋ.. ತಂಗಿಯೋ.. ಅಕ್ಕನೋ.. ಅಜ್ಜಿಯೋ.. ಮಡದಿಯೋ.. ಮಾನಿನಿಯೋ..? ಸಿನಿಮಾ ಎನ್ನುವ ಗಡಿ ದಾಟಿದಾಗ ಕೃಷಿ ತಜ್ಞೆ ಎನ್ನಲೋ.. ಪಶು ತಜ್ಞೆ ಎನ್ನಲೋ.. ಕೃತಿ-ಕರ್ಮ ಮೀರಿ ಕಣ್ಣಾಯಿಸಿದಾಗ ವೀರನಾರಿ ಎನ್ನಲೋ.. ಕುಲದ ಕನಲಿಕೆಗಳ ಕಂಪನದೊಳಗೆ ಭಾವನೆಗಳ ಅದುಮಿಟ್ಟ ಕುಲವಧು ಎನ್ನಲೋ.. ಇದೆಲ್ಲವೂ ಒಟ್ಟಾದ ಅಮ್ಮಾ ಎನ್ನಲೋ..? ನೀನೋದ ಕ್ಷಣದಲ್ಲಿ ನನ್ನಗನ್ನಿಸಿದ ಮಾತಿದು.
ಏನೆಂದು ಕರೆಯಲಿ ಲೀಲಾವತಮ್ಮ ನಿನ್ನನು..? ಬದುಕಿನ ಪಾಠ ಹೇಳುವ ಕಾರಣಕ್ಕೆ ನಿನ್ನ ಹೆಸರನ್ನು ಲೀಲಾವತಿ ಎಂದು ಬದಲಿಸಿಕೊಂಡೆ ಎನ್ನಲಾ..? ಬಹುಷಃ ಬಣ್ಣದಾಚೆಯ ಬದುಕಿನಲ್ಲೂ ನಟನೆಯನ್ನೇ ಸಿಂಗರಿಸಿಕೊಂಡೇ ಬಂದ ಅಪರೂಪದ ಕಥಾನಾಯಕಿಯರಲ್ಲಿ ಲೀಲಾವತಿ ಅಗ್ರರ ಸಾಲಿನಲ್ಲಿ ನಿಲ್ಲುವ ಮೇರು ವ್ಯಕ್ತಿತ್ವ ಎಂದರೆ ತಪ್ಪಿಲ್ಲ.
ಬೆಳ್ತಂಗಡಿಯಿಂದ ಬೆಂಗಳೂರು.. ಬೆಂಗಳೂರಿನಿಂದ ಚೆನ್ನೈ.. ಕೊನೆಗೆ ಆರಿಸಿಕೊಂಡಿದ್ದು ಸೋಲದೇವನಹಳ್ಳಿ.. ಪಂಚ ಭೂತಗಳಲ್ಲಿ ಲೀಲಾವತಮ್ಮ ಅವರು ಲೀನವಾದ ಊರಿನ ಹೆಸರಲ್ಲೇ ಆ ಅಪ್ರತಿಮೆ ತ್ಯಾಗಮಯಿಯ ಇಡೀ ವ್ಯಕ್ತಿತ್ವಕ್ಕೆ ಅಂತಿಮ ವ್ಯಾಖ್ಯೆ ಇದೆ ಎಂದರೆ ಯಾರೂ ನಂಬಲಾರರು.. ಸೋಲದೇವನಹಳ್ಳಿ..! ಸೋಲದ ದೇವನ ಹಳ್ಳಿಯಲ್ಲಿ ಬದುಕಿದ್ದು ಚಂದನವನದ ಈ ಕುಸುಮ..
ಸಖಿಯಾಗಿ.. ನಾಯಕಿಯಾಗಿ.. ಸಮಾಜ ಮುಖಿಯಾಗಿ, ಸಮಾನದುಃಖಿಯಾಗಿ.. ಹೀಗೆ ಎಲ್ಲವೂ ಆಗಿ ಬದುಕಿ ಹೋಗುವುದೆಂದರೆ ಅದಕ್ಕಿಂತ ಪರಿಪೂರ್ಣತೆ ಇನ್ನೊಂದಿಲ್ಲ. ಜೀವಿಸಿದ್ದು 85 ವರ್ಷ.. ಬಣ್ಣ ಹಚ್ಚಿದ್ದು 50 ವರ್ಷ.. ಬಣ್ಣ ಅಳಿಸಿದ ಮೇಲೂ ಬದುಕಿನೊಳಗೊಂದು ಸಾರ್ಥಕ ಪಾತ್ರ ನಿರ್ವಹಿಸಿದ್ದ ಲೀಲಾವತಿ ತೆರೆಯ ಮೇಲಲ್ಲ.. ನಿಜ ಜೀವನದಲ್ಲೂ ಮಾದರಿ ನಟಿ.
ಬದುಕಿನ ಹೆಜ್ಜೆ-ಹೆಜ್ಜೆಗೂ ಸವಾಲು ಎನ್ನುವುದು ಸಾಲು ಗಟ್ಟಿ ನಿಂತಿದ್ದರೂ ಬಣ್ಣ ಹಚ್ಚಿದಾಗ ಅದು ಬಯಲಾಗಲಿಲ್ಲ.. ಸಂತೋಷವಿರಲಿ.. ಸಲ್ಲಾಪವಿರಲಿ.. ಸಂಕೋಚವಿರಲಿ.. ಸಂಭ್ರಮವಿರಲಿ.. ಸಂಘರ್ಷವಿರಲಿ.. ಸಂಕೋಲೆಗಳಿರಲಿ ಸಹಿಸಿ ಬದುಕುವುದೇಗೆ ಎನ್ನುವುದನ್ನು ಪಾತ್ರಗಳಲ್ಲಷ್ಟೇ ಅಲ್ಲ.. ಜೀವನದಲ್ಲೂ ಉದಾಹರಣೆಯಾಗಿ ನಿಂತು ತೋರಿಸಿದವರು ಲೀಲಾವತಿ.
ಜೀವನದ ಗುಟ್ಟುಗಳನ್ನು ಗಟ್ಟಿಯಾಗಲೂ ಬಿಡದೇ.. ಗಾಳಿ ಗೋಪುರದಲ್ಲಿ ತೇಲಾಡಲೂ ಬಿಡದೇ.. ಹೀಗೂ ಬದುಕಿ ತೋರಿಸಬಹುದು ಎನ್ನುವುದಕ್ಕೆ ಉದಾಹರಣೆಯಾಗಿ ನಿಂತವರು ಲೀಲಾವತಿ.. 600 ಸಿನಿಮಾಗಳಲ್ಲಿ ವಿಜೃಂಭಿಸಿದ ಕಲಾಚತುರೆ ಲೀಲಾವತಿ ತನಗಾಗಿ ಏನನ್ನೂ ಕೂಡಿಡಲಿಲ್ಲ.. ಆ ಕಾಲಕ್ಕೆ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ ಎನ್ನುವ ಮಟ್ಟಕ್ಕೆ ಬೆಳೆದು ನಿಂತರೂ ಸಂಪತ್ತಿನ ಕೋಟೆ ಕಟ್ಟಿಕೊಳ್ಳಲಿಲ್ಲ. ಸೇವೆಯ ಸೆರಗೊದ್ದು ಮಾತೃ ಹೃದಯದಿಂದ ಸಲಹಿದವರು ಲೀಲಾವತಮ್ಮ.
ಇವತ್ತಿಗೂ ಕನ್ನಡ-ತಮಿಳು ಸಿನಿಮಾ ರಂಗದಲ್ಲಿ ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿರುವ ಕಲಾವಿದರುಗಳಿಗೆ ತಿಂಗಳಿಷ್ಟು ಅಂತಾ ಜೀವನಾಧಾರವಾಗಲು ನಿಧಿಯೊಂದನ್ನು ಬೆಳೆಸಿಟ್ಟಿದ್ದರೆಂದರೆ ಆಕೆಯ ಮಾತೃ ಮಮತೆ ಎಷ್ಟಿತ್ತು ಎನ್ನುವುದನ್ನು ಊಹಿಸಿ ನೋಡಿ.
ಬಣ್ಣ ಹಚ್ಚಿ ಇನ್ನೊಬ್ಬರ ಆಕ್ಷನ್-ಕಟ್ಗೆ ನಟಿಸಿ ತೋರಿಸುವುದು ಸುಲಭ ಆದರೆ ನಿಜ ಜೀವನದಲ್ಲೂ ನಾನು ನಾಯಕಿ ಎಂದು ಬದುಕಿ ತೋರಿಸುವುದು ಬಹುತೇಕರಿಗೆ ದುಸಾಧ್ಯ. ಆದರೆ ಲೀಲಾವತಿ ಅವರು ಬದುಕಿ ತೋರಿಸಿದ್ದರು. ಬೆಂಗಳೂರಿನಲ್ಲಿ, ಚೆನ್ನೈನಲ್ಲಿ ಭವ್ಯ ಬಂಗಲೆಗಳನ್ನು ಕಟ್ಟಿ ಮೆರೆಯುವ ಅವಕಾಶಗಳಿದ್ದರೂ ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ಕೃಷಿ ಮಾಡಿದ್ದ ಲೀಲಾವತಿಯವರು ಮಣ್ಣಿಂದ ಹುಟ್ಟಿ ಮಣ್ಣಿಗೆ ಮರಳುವ ನಡುವೆ ನಾನು ಹೇಗಿರಬೇಕು ಎನ್ನುವುದನ್ನು ಸಾರಿ ಸಾರಿ ಹೇಳಿದ್ದವರು ಲೀಲಾವತಿ.
ಅಮ್ಮನ ಮಮತೆ, ಮಗನ ಆಪ್ಯತೆಗೆ ಮೂರ್ತಿ ಪ್ರಜ್ಞೆಯಾದವರು ಲೀಲಾವತಿ ಮತ್ತು ಪುತ್ರ ವಿನೋದ್ ರಾಜ್. ಅಮ್ಮನೇ ಎಲ್ಲ, ಅಮ್ಮನಿಲ್ಲದೇ ನಾನಿಲ್ಲ ಎನ್ನುವುದನ್ನು ವಿನೋದ್ ರಾಜ್ ತೋರಿಸಿಕೊಟ್ಟರು. ಅಮ್ಮ-ಮಗನ ಕರುಳ ಕೊಂಡಿಗೆ ಲೀಲಾ-ವಿನೋದಕ್ಕಿಂತಲೂ ಇನ್ನೊಂದು ಉದಾಹರಣೆ ಸಿಗದು.
ಜನರಿಗಾಗಿ ಸರ್ಕಾರಿ ಆಸ್ಪತ್ರೆ, ಮೂಕ ಜೀವಿಗಳಿಗಾಗಿ ಪಶು ಆಸ್ಪತ್ರೆ. ಬೇಸಾಯಕ್ಕೊಂದು ತೋಟವನ್ನು ಮಾಡಿ ಬದುಕಿ ಮಾದರಿಯಾಗಿ ಬದುಕಿ ತೋರಿಸಿದವರು ಲೀಲಾವತಿ.. ಹೀಗಾಗಿಯೇ ಅವರು ಒಬ್ಬ ನಟಿಯಾಗಿರಲಿಲ್ಲ, ಅದನ್ನೂ ಮೀರಿ ಸ್ಪೆಷಲ್ ಎನಿಸಿದ್ದರು. ಅವರು ಐದು ದಶಕಗಳ ಸುದೀರ್ಘವಾಗಿ ಬಣ್ಣದ ಲೋಕದಲ್ಲಿ ಅಪ್ರತಿಮ ಕಲಾವಿದೆಯಾಗಿ ಮೆರೆದಿದ್ದಾರೆ. ಮಿಂಚಿದ್ದಾರೆ. ಈ ಸ್ವಾಭಿಮಾನದ ಮೆಲ್ಲುಸಿರ ನಲ್ಲೆಯ ಸಾಧನೆಯನ್ನು ಪ್ರೇಕ್ಷಕ ಹೇಗೆ ತಾನೆ ಮರೆಯಲು ಸಾಧ್ಯ?
ಕನ್ನಡ ಚಿತ್ರರಂಗದ ಮೇರು ನಟ ಡಾ.ರಾಜ್ ಕುಮಾರ್ ಅವರೊಬ್ಬರ ಜತೆಯೇ 46 ಸಿನಿಮಾಗಳಲ್ಲಿ ನಾಯಕಿಯಾಗಿದ್ದರು ಎಂದರೆ ಸಾಮಾನ್ಯ ಸಂಗತಿಯಲ್ಲ. ಡಾ.ರಾಜ್ ಕುಮಾರ್ ಅವರ ಜತೆ ಮಗಳಾಗಿ (ಭೂದಾನ), ಸಹೋದರಿಯಾಗಿ (ವಾತ್ಸಲ್ಯ) ಕಾಣಿಸಿಕೊಂಡಿದ್ದ ಲೀಲಾವತಿಯವರು ಜಯಂತಿಯವರನ್ನು ಬಿಟ್ಟರೆ ಡಾ.ರಾಜ್ ಕುಮಾರ್ ಅವರ ಜತೆ ಹೆಚ್ಚು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಕಪ್ಪು-ಬಿಳುಪು ಕಾಲದಿಂದ ಕಲರ್ಫುಲ್ ಸಿನಿಮಾಸ್ಕೋಪ್ವರೆಗಿನ ಎಲ್ಲ ನಾಯಕ ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡವರು ಲೀಲಾವತಿ. ಅವರು ಸುಮಾರು ಐದು ದಶಕಗಳ ಕಾಲ, ಅರ್ಥಾತ್ ಮೂರು ತಲೆಮಾರಿನ ಪ್ರೇಕ್ಷಕರನ್ನು ರಂಜಿಸಲು ಸಾಧ್ಯವಾಯ್ತು. ಬಹುಷಃ ಅಂದಿಗೂ, ಇಂದಿಗೂ, ಎಂದೆಂದಿಗೂ ಸಲ್ಲುವ ಲೀಲಾವತಿ ಅವರಂತಹ ಮತ್ತೊಬ್ಬ ನಟಿ ಸಿನಿ ರಂಗಕ್ಕೆ ಸಿಗುವುದು ದುಸ್ಸಾಧ್ಯ?
ಸ್ವತಂತ್ರ ಭಾರತ ಎರಡು ವರ್ಷ ಸವೆಸಿದ್ದ ಸಂದರ್ಭದಲ್ಲಿ ಸಖಿಯಾಗಿ ಸಿನಿಮಾ(ನಾಗಕನ್ನಿಕೆ-೧೯೪೯)ಗೆ ಕಾಲಿಟ್ಟ ಲೀಲಾವತಿ ಅವ್ರು ನಾಯಕಿಯಾಗಿದ್ದು 1958ರಲ್ಲಿ ಮಾಂಗಲ್ಯಯೋಗ ಚಿತ್ರದಿಂದ. ಆ ಮಡಿವಂತಿಕೆಯ ಕಾಲದಲ್ಲಿ ಕರಾವಳಿಯ ದೂರದ ಬೆಳ್ತಂಗಡಿಯಿಂದ ಬಂದ ಈ ಬಾಲಕಿ ತನ್ನ ಸ್ವಂತ ಪ್ರತಿಭೆ ಮತ್ತು ಪರಿಶ್ರಮದಿಂದ ಇಷ್ಟು ಎತ್ತರಕ್ಕೆ ಬೆಳೆದು ನಿಂತರು. ರಂಗಭೂಮಿಯ ನಂಟು ಇವರನ್ನು ಸಿನಿಮಾ ರಂಗಕ್ಕೆ ಎಳೆತಂತು.
ಪಾತ್ರವೇ ಪವಿತ್ರ!
ಈ ಮೊದಲೇ ಹೇಳಿದಂತೆ 10-15 ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ನಂತರ ಅತ್ತೆ, ಅಮ್ಮ, ಅಜ್ಜಿ ಪಾತ್ರಗಳನ್ನು ನಿರಾಕರಿಸಿದ್ದ ಉದಾಹರಣೆ ಪುಟಗಟ್ಟಲೆ ಇವೆ. ಎಲ್ಲಾ ಪಾತ್ರಗಳಿಗೂ ಜೀವತುಂಬಿದ ರೀತಿ ಒಬ್ಬ ಕಲಾವಿದೆಗೆ ಮಾದರಿ ಎನಿಸುವಂತಿತ್ತು.
ಡಾ.ರಾಜ್‌ಕುಮಾರ್ ಅವರ ಜತೆ 46 ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ಪಾತ್ರಗಳ ಮುಖಾಂತರ ಅಮ್ಮ ಎಂದು ಮೊದಲಿಗೆ ಕರೆಸಿಕೊಂಡವರು ಫಂಡರಿ ಬಾಯಿ. ಅವರು ಕೇವಲ ಸಾತ್ವಿಕ ಪಾತ್ರಗಳಿಂದ ಮಾತ್ರ ಅಮ್ಮನಾಗಿ ಫೇಮಸ್ ಆಗಿದ್ರು. ಆದರೆ ಲೀಲಾವತಿಯವರು ಅಮ್ಮನ ಪಾತ್ರಕ್ಕೆ ಇನ್ನೊಂದು ಆಯಾಮ ಕೊಟ್ಟರು. ಮಮತೆ, ಕರುಣೆ, ವಾತ್ಸಲ್ಯಕ್ಕೆ, ತ್ಯಾಗ ಮಯಿ, ಬಿಂಕದ ಸಿಂಗಾರಿ.. ದರ್ಪ, ಹಾಸ್ಯ, ಗಾಂಭೀರ್ಯ, ಅಸೂಯೆ ಇದೆಲ್ಲ ರೂಪದ ಅಮ್ಮಂದಿರ ಪಾತ್ರಗಳನ್ನು ಲೀಲಾಜಾಲವಾಗಿ ನಟಿಸಿದ್ದರಿಂದ ಕನ್ನಡಿಗರ ಎರಡನೇ ಅಮ್ಮ ಎನಿಸಿಕೊಂಡಿದ್ದರು.
ಬೆಳಗಿನ ಜಾವ 4-5 ಗಂಟೆಗೆ ಎದ್ದು ಸೋಲದೇವನಹಳ್ಳಿಯ ತಮ್ಮ ತೋಟದಲ್ಲಿ ಗಿಡಗಳಿಗೆ ನೀರುಣಿಸುತ್ತಾ, ಪ್ರಾಣಿ-ಪಕ್ಷಿಗಳಿಗೆ ಆಹಾರ ನೀಡುತ್ತಾ ತೋಟದ ಕೆಲಸ ಮಾಡುತ್ತಿದ್ದರು. 1980ರ ಕಾಲಘಟ್ಟದಲ್ಲೇ ಲೀಲಾವತಿ ಪ್ರತಿ ದಿನವೂ 12,000 ಬೆಲೆ ಬಾಳುವ ತರಕಾರಿಗಳನ್ನು ಹೋಟೆಲ್‌ಗೆ ಸರಬರಾಜು ಮಾಡುತ್ತಿದ್ದರಂತೆ. ಹೀಗೆ ಪ್ರತಿ ದಿನವೂ ತರಕಾರಿಗಳನ್ನು ಕೊಡುವಷ್ಟು ಬೆಳೆಯ ಬಹುದು ಎಂದು ತೋರಿಸಿಕೊಟ್ಟಿದ್ದರು. ಅಷ್ಟೊಂದು ಅಪಾರವಾದ ಕೃಷಿ ಜ್ಞಾನ ಲೀಲಾವತಿ ಅವರಿಗಿತ್ತು. ಯುಗವು ದಾಟಿದರೂ ಲೀಲಾವತಿ ಕನ್ನಡದ ಕುಲವಧು.. ಕಲಾವಧು..
ಬರೆಹ: ಶಣೈ