ಯಾವುದೇ ಸಮಾಜಕ್ಕೆ ಐತಿಹಾಸಿಕ ಶ್ರೀಮಂತಿಕೆ ಇದ್ದರಷ್ಟೇ ಸಾಲದು; ಅದಕ್ಕೆ ವರ್ತಮಾನದ ಜೀವಂತಿಕೆಯೂ ಅಷ್ಟೇ ಮುಖ್ಯ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹಾಗೂ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಈಶ್ವರ ಬಿ. ಖಂಡ್ರೆ ಹೇಳಿದ್ದಾರೆ.
ಬೆಂಗಳೂರಿನ ವೀರಶೈವ ಲಿಂಗಾಯತ ಮಹಾಸಭಾದಲ್ಲಿ ನಡೆದ ಮಹಿಳಾ ಘಟಕದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಮ್ಮ ಪೂರ್ವಿಕರು ಶ್ರೇಷ್ಠರಾಗಿದ್ದರು, ಹೀಗಾಗಿ ನಾವೂ ಶ್ರೇಷ್ಠ ಎಂದು ಕೂರದೆ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ವಯಂ ಪರಿಶ್ರಮದಿಂದ ನಾವು ಮೇಲೆ ಬರಬೇಕಾಗಿದೆ” ಎಂದು ಕಿವಿಮಾತು ಹೇಳಿದರು.
ರಾಜ್ಯ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಬೆಳೆಯುವಲ್ಲಿ ವೀರಶೈವ-ಲಿಂಗಾಯತ ಮಠಮಾನ್ಯಗಳ ಕೊಡುಗೆ ಅಪಾರವಾಗಿದೆ ಎಂದು ಅವರು ಹೇಳಿದರು. ಅನಕ್ಷರತೆ ತಾಂಡವವಾಡುತ್ತಿದ್ದ ಕಾಲದಲ್ಲಿ ಜಾತಿ, ಧರ್ಮ, ಪಂಥಗಳ ಭೇದವಿಲ್ಲದೆ ಎಲ್ಲರಿಗೂ ಅನ್ನ, ಆಶ್ರಯ, ಅಕ್ಷರ ನೀಡಿ ವಿದ್ಯಾವಂತರನ್ನಾಗಿ ಮಾಡಿ ಮೌಢ್ಯತೆಯನ್ನು ದೂರ ಮಾಡಿದ ಕೀರ್ತಿ ನಮ್ಮ ಮಠಗಳಿಗೆ ಸಲ್ಲುತ್ತದೆ ಎಂದರು.
ಹಾನಗಲ್ಲ ಕುಮಾರೇಶ್ವರರು 122 ವರ್ಷಗಳ ಹಿಂದೆ ಸ್ಥಾಪಿಸಿದ ಮಹಾಸಭಾ ಎಲ್ಲ ಉಪಪಂಗಡಗಳನ್ನೂ ಒಗ್ಗೂಡಿಸಿ ಸಮಾಜದ ಕ್ಷೇಮಾಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದೆ ಎಂದು ತಿಳಿಸಿದ ಅವರು, ಮಹಿಳಾ ಘಟಕದವರು ಮಹಿಳೆಯರಲ್ಲಿ ಧರ್ಮಜಾಗೃತಿ ಮೂಡಿಸಬೇಕು ಹಾಗೂ ಮಾತೆಯರು ತಮ್ಮ ಮಕ್ಕಳಿಗೆ ವಚನಗಳನ್ನು ಕಲಿಸುವ ಮೂಲಕ ಸಂಸ್ಕಾರವಂತರನ್ನಾಗಿ ಮಾಡುವಂತೆ ಪ್ರೇರೇಪಿಸಬೇಕು ಎಂದು ಕರೆ ನೀಡಿದರು.
ಬದುಕಿನ ಬಂಡಿ ಮುಂದೆ ಸಾಗಲು ಪುರುಷರು ಮತ್ತು ಮಹಿಳೆಯರು ಸರಿಸಮಾನವಾಗಿ ಹೋಗಬೇಕು. ಮಹಿಳೆಯಿಲ್ಲದೆ ಸೃಷ್ಟಿಯೇ ಇಲ್ಲ. ನಮ್ಮ ಸಮಾಜ ಮೊದಲಿನಿಂದಲೂ ಮಹಿಳೆಗೆ ಉನ್ನತ ಸ್ಥಾನ ಮತ್ತು ಸಮಾನತೆ ನೀಡಿದೆ. 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಮಹಿಳೆಯರಿಗೆ ಅನುಭವ ಮಂಟಪದಲ್ಲಿ ಮುಕ್ತವಾಗಿ ಚರ್ಚಿಸಲು ಮತ್ತು ತಮ್ಮ ವಿಚಾರ ಮಂಡಿಸಲು ಅವಕಾಶ ನೀಡಿದ್ದರು ಎಂದು ಅವರು ನೆನಪಿಸಿದರು.
“ತೊಟ್ಟಿಲು ತೂಗುವ ಕೈ ದೇಶವನ್ನು ಆಳಬಲ್ಲದು” ಎಂಬುದನ್ನು ಮಹಿಳೆಯರು ಸಾಬೀತುಪಡಿಸಿದ್ದಾರೆ. ವಿಜ್ಞಾನ, ತಂತ್ರಜ್ಞಾನ, ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಅವರು ಮುಂದಿದ್ದಾರೆ. ಕೆಳದಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಕಿತ್ತೂರು ರಾಣಿ ಚೆನ್ನಮ್ಮ ನಮ್ಮ ಸಮಾಜದ ಮಹಿಳೆಯರಿಗೆ ಆದರ್ಶಪ್ರಾಯರು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ಮತ್ತಿತರರು ಭಾಗವಹಿಸಿದ್ದರು.


