ರಾಜ್ಯ ಸರ್ಕಾರದ ‘ಭಾಗ್ಯಲಕ್ಷ್ಮಿ ಯೋಜನೆ’ಯಲ್ಲಿ 2010-11ನೇ ಸಾಲಿನಲ್ಲಿ ಸೀರೆ ವಿತರಣೆ ಸಂಬಂಧ ನಡೆದಿರುವ ಸುಮಾರು 23ಕೋಟಿ ರೂಪಾಯಿ ಅವ್ಯವಹಾರವನ್ನು ಎಸ್‌ಐಟಿ ತನಿಖೆಗೆ ಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಆಗ್ರಹಿಸಿದ್ದಾರೆ.
ಈ ಕುರಿತು ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, “ಮಹಿಳಾ ಮತ್ತು ಮಕ್ಕಳ ಕಲ್ಯಾಣ ವತಿಯಿಂದ 2011ನೇ ಸಾಲಿನಲ್ಲಿ ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಅಂದಿನ ಬಿಜೆಪಿ ಸರ್ಕಾರ ಸೀರೆ ವಿತರಿಸುವ ಕಾರ್ಯಕ್ರಮವನ್ನು ಜಾರಿಗೊಳಿಸಿ, ಸುಮಾರು 10,68,996 ಸೀರೆಗಳನ್ನು ಸರ್ಕಾರದಿಂದ ಕೊಳ್ಳಲಾಗಿದೆ” ಎಂದು ವಿವರಿಸಿದ್ದಾರೆ.
“ಕರ್ನಾಟಕದ ನೇಕಾರರನ್ನು ಹಾಗೂ ಸೀರೆ ಉತ್ಪಾದನೆಯ ಸಹಕಾರ ಸಂಘಗಳನ್ನು ನಿರ್ಲಕ್ಷ್ಯ ಮಾಡಿ ಗುಜರಾತಿನ ಸೂರತ್ ನಿಂದ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರವನ್ನು ನೀಡಿ ಆ ಸೀರೆಗಳನ್ನು ಕೊಳ್ಳಲಾಗಿದೆ. ಈ ವಹಿವಾಟಿನಲ್ಲಿ ಅಂದಿನ ಬಿಜೆಪಿಯ ವಿಧಾನ ಪರಿಷತ್ತಿನ ಸದಸ್ಯರು ಈಗಿನ ರಾಜ್ಯಸಭಾ ಸದಸ್ಯರು ಆದ ಲೆಹರ್ ಸಿಂಗ್ ರವರು ಭಾಗಿಯಾಗಿರುವ ಆರೋಪಗಳಿದೆ” ಎಂದು ತಿಳಿಸಿದ್ದಾರೆ.
“ಮಾರುಕಟ್ಟೆಯಲ್ಲಿ ಒಂದು ನೂರು ರೂಪಾಯಿಗಳಿಗೆ ದೊರೆಯಬಹುದಾದ ಸೀರೆಗಳನ್ನು ಹೆಚ್ಚಿನ ದರ ನಮೂದಿಸಿ ರಾಜ್ಯದ ಹೊರಭಾಗದಿಂದ ಅಂದಿನ ಬಿಜೆಪಿ ಸರ್ಕಾರ ಕೊಂಡಿರುತ್ತದೆ. ಈ ಸಂಬಂಧ ಮಾರ್ಚ್ 2011 ರಲ್ಲಿ ಕಾಂಗ್ರೆಸ್ ಪಕ್ಷ ಅಂದಿನ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕಿ ಮೋಟಮ್ಮ, ಸದಸ್ಯರಾದ ಆರ್.ವಿ.ವೆಂಕಟೇಶ್, ದಯಾನಂದ್ ಮುಂತಾದವರು ಚರ್ಚೆ ಮಾಡಿ ಹಗರಣದ ತನಿಖೆಗೆ ಒತ್ತಾಯ ಮಾಡಿದ್ದರು” ಎಂದು ವಿವರಿಸಿದ್ದಾರೆ.
“ಸದರಿ 23 ಕೋಟಿ ರೂಪಾಯಿಗಳ ಹಗರಣದಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರವಾಗಿದ್ದು, ಇದರ ತನಿಖೆ ಆಗಬೇಕು. ಭಾಗ್ಯಲಕ್ಷ್ಮಿ ಸೀರೆ ವಿತರಣೆಗೆ ಗುಜರಾತಿನ ಸೂರತ್ ನಿಂದ ಸೀರೆಗಳನ್ನು ಹೆಚ್ಚು ಹಣ ನೀಡಿ ಪಡೆಯುವ ಮೂಲಕ ದೊಡ್ಡ ಮಟ್ಟದ ಭ್ರಷ್ಟಾಚಾರ ಎಸಗಿ ರಾಜ್ಯ ಸರ್ಕಾರಕ್ಕೆ ನಷ್ಟವನ್ನು ಉಂಟು ಮಾಡಿರುತ್ತಾರೆ. ಈ ಹಗರಣದಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಮತ್ತು ಎಷ್ಟು ಸಾರ್ವಜನಿಕ ಹಣ ಲೂಟಿ ಆಗಿದೆ ಎಂಬುವ ಕುರಿತು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡದ ಮೂಲಕ ತನಿಖೆ ಮಾಡುವ ಅವಶ್ಯಕತೆ ಇರುತ್ತದೆ” ಎಂದು ರಮೇಶ್ ಬಾಬು ಕೋರಿದ್ದಾರೆ.
“ಕರ್ನಾಟಕದಲ್ಲಿ ಸೀರೆಗಳ ಪೂರೈಕೆಗೆ ವಿಸ್ತಾರವಾದ ಅವಕಾಶವಿದ್ದು, ನಮ್ಮ ರಾಜ್ಯದಲ್ಲೇ ಸೀರೆಗಳನ್ನು ಕ್ರಯಕ್ಕೆ ಪಡೆದುಕೊಂಡಿದ್ದರೆ ಇಲ್ಲಿನ ನೇಕಾರರಿಗೆ ಮತ್ತು ಕೈ ಮಗ್ಗದ ಸಹಕಾರ ಸಂಘಗಳಿಗೆ ಆರ್ಥಿಕವಾಗಿ ಶಕ್ತಿ ಬರುತ್ತಿತ್ತು. ಹೊರ ರಾಜ್ಯದಿಂದ ಸೀರೆಗಳನ್ನು ಹೆಚ್ಚು ದರಕ್ಕೆ ಪಡೆಯುವುದರ ಮೂಲಕ ಕರ್ನಾಟಕಕ್ಕೆ ಮತ್ತು ಕನ್ನಡಿಗರಿಗೆ ವಿಶೇಷವಾಗಿ ಇಲ್ಲಿನ ನೇಕಾರರಿಗೆ ಮೋಸ ಎಸಗಲಾಗಿದೆ. ಆದುದರಿಂದ ರಾಜ್ಯದ ಮತ್ತು ಸಾರ್ವಜನಿಕ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಭಾಗ್ಯಲಕ್ಷ್ಮಿ ಯೋಜನೆಯ 2011 ರ ಬಿಜೆಪಿ ಸರ್ಕಾರದ 23 ಕೋಟಿ ರೂಪಾಯಿಗಳ ಸೀರೆ ಹಗರಣವನ್ನು ವಿಶೇಷ ತನಿಖಾ ತಂಡದ ಮೂಲಕ ತನಿಖೆಗೆ ಒಳಪಡಿಸಬೇಕು” ಎಂದು ಪತ್ರ ಮೂಲಕ ಆಗ್ರಹಿಸಿದ್ದಾರೆ.