ಹಾಸನದ ಸಂಸದ, ಎನ್‌ಡಿಎ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಇದುವರೆಗೂ ನಡೆದ ಎಲ್ಲ ಮಹಿಳಾ ದೌರ್ಜನ್ಯಗಳ ದಾಖಲೆ ಮುರಿದು ಹಾಕಿದ್ದಾರೆ. ದೇಶದ ಪ್ರಧಾನಿ ತಮ್ಮ ಪ್ರತಿ ಭಾಷಣದಲ್ಲಿ ಕುಟುಂಬ ರಾಜಕಾರಣ ಹಾಗೂ ಬೇಟಿ ಬಚಾವೋ, ಬೇಟಿ ಪಡಾವೋ ಎಂದು ಹೇಳುತ್ತಲೇ ಇರುತ್ತಾರೆ. ಅವರ ಮಾತಿಗೆ ಏನಾದರೂ ಅರ್ಥವಿದೆಯೇ ಎಂದುಎಐಸಿಸಿ ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷೆ ಅಲಕಾ ಲಂಬಾ ಪ್ರಶ್ನಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿ, “ಮಹಿಳೆಯರ ಮೇಲೆ ದೌರ್ಜನ್ಯ ಎಸಗಿರುವ ಪ್ರಜ್ವಲ್ ರೇವಣ್ಣ, ಬಿಜೆಪಿಯ ಕುಲ್ ದೀಪ್ ಸಿಂಗ್, ಉತ್ತರ ಪ್ರದೇಶದ ರಾಮ್ ದುಲ್ಹಾರೆ, ಬ್ರಿಜ್ ಭೂಷಣ್ ಸಿಂಗ್, ಹರಿಯಾಣದ ಸಚಿವ ಸಂದೀಪ್ ಸಿಂಗ್ ಇವರೆಲ್ಲಾ ಮಹಿಳೆಯರು, ಬಾಲಕಿಯರ ಮೇಲೆ ದೌರ್ಜನ್ಯ ಎಸಗಿದವರು. ಇವರೇ ನಿಜವಾದ ಮೋದಿ ಪರಿವಾರದವರು. ಇದೇ ಮೋದಿ ಅವರ ಪರಿವಾರ ವಾದದ ಅರ್ಥ” ಎಂದು ಕುಟುಕಿದರು.
“ಪ್ರಜ್ವಲ್ ರೇವಣ್ಣ 2 ಸಾವಿರಕ್ಕೂ ಹೆಚ್ಚು ಬಾರಿ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ. ನಮ್ಮ ಹೆಣ್ಣು ಮಕ್ಕಳ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಮೋದಿಯವರು ಮಾತೆತ್ತಿದರೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ. ಆದರೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಜೊತೆ ನಿಂತು ಪ್ರಧಾನಿಗಳು ಫೋಟೋಗೆ ಪೋಜು ಕೊಡುತ್ತಾರೆ. ಆದರೆ ಭಾಷಣದಲ್ಲಿ ಮಾತ್ರ ಕುಟುಂಬ ರಾಜಕಾರಣ ಮತ್ತು ಬೇಟಿ ಬಚಾವೋ ಬಗ್ಗೆ ಮಾತನಾಡುತ್ತಾರೆ” ಎಂದು ವಾಗ್ದಾಳಿ ನಡಿಸಿದರು.
“ನಮ್ಮ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳನ್ನು ತಿಳಿಸಬೇಕು. ಏಕೆಂದರೆ ಈ ಘಟನೆ ಬೆಳಕಿಗೆ ಬಂದ ತಕ್ಷಣ ಗಂಭೀರತೆ ಅರಿತು ಎಸ್ ಐಟಿ ರಚನೆಗೆ ಆದೇಶ ನೀಡಿದ್ದಾರೆ” ಎಂದರು.
“ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಅನೇಕ ಜನ ವಿದೇಶಕ್ಕೆ ಓಡಿ ಹೋಗಿದ್ದಾರೆ. ಹಣಕಾಸಿನ ವಿಚಾರದಲ್ಲಿ ದೇಶಕ್ಕೆ ಮೋಸ ಮಾಡಿ ಹೋಗಿದ್ದಾರೆ. ಅದೇ ರೀತಿ ಪ್ರಜ್ವಲ್ ರೇವಣ್ಣನೂ ಸಹ ಅದೇ ಹಾದಿ ತುಳಿದಿದ್ದಾರೆ” ಎಂದು ಹೇಳಿದರು.
“2023 ಡಿಸೆಂಬರ್ ತಿಂಗಳಲ್ಲೇ ಬಿಜೆಪಿ ಮುಖಂಡ ದೇವರಾಜೇಗೌಡ ಈ ಕೃತ್ಯಗಳ ಬಗ್ಗೆ ಪತ್ರ ಬರೆದು ಈ ಘಟನೆಗಳ ಬಗ್ಗೆ ಎಚ್ಚರಿಕೆ ನೀಡಿದ್ದರು. ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡರೆ ಬಿಜೆಪಿಗೆ ಹೊಡೆತ ಬೀಳುವುದು ಖಂಡಿತಾ ಎಂದು ಕೇಳಿದ್ದರು. ಆದರೂ ಸಹ ಮೈತ್ರಿ ಮಾಡಿಕೊಳ್ಳಲಾಯಿತು. ಇಷ್ಟೊಂದು ಘೋರ ಘಟನೆ ನಡೆದಿದ್ದರೂ ಸಹ ಬಿಜೆಪಿಯ ಒಬ್ಬನೇ ಒಬ್ಬ ನಾಯಕನೂ ಬಾಯಿ ಬಿಟ್ಟಿಲ್ಲ. ಸ್ಮೃತಿ ಇರಾನಿ, ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರೇ, ಅಮಿತ್ ಶಾ, ಪ್ರಧಾನಿ ಮೋದಿ ಅವರೇ ಎಲ್ಲಿದ್ದೀರಿ? 2 ಜೂನ್ 2023 ರಲ್ಲಿ ನ್ಯಾಯಲಯದಿಂದ ಆದೇಶ ತಂದಿದ್ದ ಪ್ರಜ್ಷಲ್ ರೇವಣ್ಣ ಅವರ ವಿರುದ್ದ ಯಾವುದೇ ಸುದ್ದಿ, ವಿಡಿಯೋಗಳನ್ನು ಪ್ರಸಾರ ಮಾಡಬಾರದು ಎಂದು ತಡೆಯಾಜ್ಞೆ ತಂದಿದ್ದರು. ಅಂದರೆ ಈ ವಿಚಾರ ಎಲ್ಲರಿಗೂ ತಿಳಿದಿತ್ತು ಆದರೂ ಇದರ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ” ಎಂದು ಕೇಳಿದರು.
“ಅಧಿಕಾರದ ಮದದಿಂದ ಈ ಕೃತ್ಯಗಳು ನಡೆದಿದೆ. ತನ್ನ ಅಧಿಕಾರವನ್ನು ಬಳಸಿಕೊಂಡು ಬಡ, ಅಮಾಯಕ ಹೆಣ್ಣು ಮಕ್ಕಳ ಮಾನಹಾನಿಯಾಗಿದೆ. ಪ್ರಧಾನ ಮಂತ್ರಿಗಳೇ ಜೊತೆಗಿರುವಾಗ ಆತ ಏಕೆ ಭಯಪಡಬೇಕು. ಅದಕ್ಕೆ ಸಾವಿರಾರು ವಿಡಿಯೋಗಳನ್ನು ಮಾಡಿದ್ದಾನೆ. ಕಾನೂನಿನ ಭಯವಿಲ್ಲದೆ ಕೃತ್ಯ ಎಸಗಿದ್ದಾನೆ” ಎಂದು ಹರಿಹಾಯ್ದರು..
ಆನ್ ಲೈನ್ ಮೂಲಕ ದೂರು ದಾಖಲಿಸಿ
“ಎಸ್‌ಐಟಿಯಲ್ಲಿ ಮನವಿ ಮಾಡುತ್ತೇನೆ, ಶೋಷಣೆಗೆ ಒಳಗಾದ ಹೆಣ್ಣುಮಕ್ಕಳ ಗುರುತನ್ನು ಅದಷ್ಟು ಗುಪ್ತವಾಗಿ ಇರಿಸಿ ಹಾಗೂ ಅನ್ಯಾಯಕ್ಕೆ ಒಳಗಾದ ಎಲ್ಲಾ ಮಹಿಳೆಯರ ಪರವಾಗಿ ನಾವು ಇರುತ್ತೇವೆ. ನೀವು ಮುಂದೆ ಬಂದು ಆರೋಪಿ ತಪ್ಪಿಸಿಕೊಳ್ಳದಂತೆ ದೂರು ನೀಡಬೇಕು. ಪೊಲೀಸ್ ಠಾಣೆಗೆ ಬರಲು ಹೆದರಿಕೆಯಾದರೆ ಆನ್ ಲೈನ್ ಮೂಲಕ ದೂರು ದಾಖಲಿಸಿ” ಎಂದರು.
“ಕರ್ನಾಟಕದ ಇತಿಹಾಸದಲ್ಲಿ ಇಂತಹ ಹೀನ ಘಟನೆ ನಡೆಯುತ್ತದೆ ಎಂದು ಕನಸಿನಲ್ಲಿಯೂ ಎಣಿಸಿರಲಿಲ್ಲ. ದೇಶದ ಶೇ 50 ರಷ್ಟು ಜನಸಂಖ್ಯೆ ನಾವಿದ್ದೇವೆ. ನಮ್ಮನ್ನು ದೇವರ ಹೆಸರಿನಲ್ಲಿ ಪೂಜೆ ಮಾಡುತ್ತಾರೆ. ಹೆಣ್ಣು ದೇವರುಗಳಿಗೆ ಪೂಜೆ ಮಾಡುವುದು ಬೇಡ. ಗೌರವ ರಕ್ಷಣೆ ಕೊಟ್ಟರೇ ಸಾಕು” ಎಂದು ಸೌಮ್ಯರೆಡ್ಡಿ ಹೇಳಿದರು.
“ಮೈತ್ರಿ ಅಭ್ಯರ್ಥಿಯಾದ ಪ್ರಜ್ವಲ್ ರೇವಣ್ಣ ಅವರ ಈ ಹೀನ ಕೃತ್ಯಗಳ ಬಗ್ಗೆ ಬಿಜೆಪಿಯ ಅಧ್ಯಕ್ಷ ವಿಜಯೇಂದ್ರ, ಪ್ರಧಾನಿ ಮೋದಿ, ಅಮಿತ್ ಶಾ ಅವರಿಗೆ ಈ ವಿಚಾರಗಳು ಗೊತಿದ್ದರೂ ಟಿಕೆಟ್ ನೀಡಿದ್ದು ಮಹಿಳೆಯರಿಗೆ ಅವಮಾನ ಮಾಡಿದ್ದಾರೆ” ಎಂದು ಕಿಡಿಕಾರಿದರು.