“ವೇದಂಗಳ ಹಿಂದೆ ಹರಿಯದಿರು, ಹರಿಯದಿರು,
ಶಾಸ್ತ್ರಂಗಳ ಹಿಂದೆ ಸುಳಿಯದಿರು, ಸುಳಿಯದಿರು,
ಪುಠಾಣಂಗಳ ಹಿಂದೆ ಬಳಸದಿರು, ಬಳಸದಿರು,
ಆಗಮಂಗಳ ಹಿಂದೆ ತೊಳಲದಿರು, ತೊಳಲದಿರು
ಸೌರಾಷ್ಟ್ರ ಸೋಮೇಶ್ವರನ ಕೈವಿಡಿದು
ಶಬ್ದಜಾಲಂಗಳಿಗೆ ಬಳಲದಿರು, ಬಳಲದಿರು.”
ಎಂದು ಶರಣ ಆದಯ್ಯನವರು ೧೨ನೇ ಶತಮಾನದಲ್ಲೇ ಹೇಳಿದ್ದಾರೆ.
ಬಸವಣ್ಣನವರ ಲಿಂಗವಂತ ಧರ್ಮ ಸೇರುವ ಮೊದಲು ಶೈವರಾಗಿದ್ದ ಇವರು ವೇದ,
ಶಾಸ್ತ್ರ, ಪುರಾಣ ಮತ್ತು ಆಗಮಗಳ ಹಿಂದೆ ಹರಿದಾಡಿ, ಸುಳಿದಾಡಿ, ತೊಳಲಿ, ಬಳಲಿ
ಬಂದವರೇ ಆಗಿದ್ದಾರೆ. ಇವು “ಶಬ್ದಜಾಲ” ಎಂದು ಸ್ವಾನುಭವದಿಂದ ಕರೆದಿದ್ದಾರೆ.
ಮನುಷ್ಯರ ಮೆದುಳಿಗೆ ಶಬ್ದಗಳ ಮೂಲಕ ಜಾಲ ಬೀಸಿ ಬೌದ್ಧಿಕ ಗುಲಾಮಗಿರಿಗೆ
ತಳ್ಳುವಂಥವು ಇವೆಲ್ಲ ಎಂಬುದನ್ನು ಸೂಚಿಸಿದ್ದಾರೆ.
“ವೇದದವರನೊಲ್ಲದೆ ನಮ್ಮ ಮಾದಾರ ಚೆನ್ನಯ್ಯಂಗೊಲಿದ. ಶಾಸ್ತ್ರದವರನೊಲ್ಲದೆ
ನಮ್ಮ ಶಿವರಾತ್ರಿ ಸಂಕಣ್ಣಂಗೊಲಿದ, ಆಗಮದವರನೊಲ್ಲದೆ ತೆಲುಗು
ಜೊಮ್ಮಯ್ಯಂಗೊಲಿದ” ಹೀಗೆ ಕೆಳಜಾತಿ, ಕೆಳವರ್ಗದವರಿಗೆ ಒಲಿದ ದೇವರು
“ಹಾರುವಣ್ಣಗಳಿಗೆ ಹೇಸಿ ಕದವನಿಕ್ಕಿಕೊಂಡನು” ಎ೦ದು ಸೊಡ್ಡಳ ಬಾಚರಸ ಹೇಳುತ್ತಾರೆ.
“ಅಜ್ಞಾನವೆಂಬ ತೊಟ್ಟಿಲೊಳಗೆ ಜ್ಞಾನವೆಂಬ ಶಿಶುವ ಮಲಗಿಸಿ, ಸಕಲ ವೇದ
ಶಾಸ್ತ್ರವೆಂಬ ನೇಣ ಕಟ್ಟಿ ಹಿಡಿದು ತೂಗಿ ಜೋಗುಳವಾಡುತ್ತಾ ಇದ್ದಾಳೆ ಭ್ರಾಂತಿ ಎಂಬ ತಾಯಿ” ಎಂದು ಅಲ್ಲಮಪ್ರಭುಗಳು ವೇದಗಳು ಮತ್ತು ಮನುಸ್ಮೃತಿಯಂಥ ಶಾಸ್ತ್ರಗಳು ಹೇಗೆ ಅಜ್ಞಾನ ಮತ್ತು ಭ್ರಾಂತಿಯ ಜೊತೆಗಿವೆ ಎಂಬುದನ್ನು ಸೂಚಿಸಿದ್ದಾರೆ.
“ವೇದ ಶಾಸ್ತ್ರ ಆಗಮಂಗಳನೋದಿದವರು ಹಿರಿಯರೆ?.. ಡೊಂಬನೇನು
ಕಿರಿಯನೆ?” ಎಂದು ಬಸವಣ್ಣನವರು ಪ್ರಶ್ನಿಸುತ್ತ ಜನಸಾಮಾನ್ಯರ ಅನುಭವಜನ್ಯ
ಜ್ಞಾನವನ್ನು ಎತ್ತಿಹಿಡಿದಿದ್ದಾರೆ. “ಏನಯ್ಯಾ ವಿಪ್ರರು ನುಡಿದಂತೆ ನಡೆಯರು” ಎಂದು
ಟೀಕಿಸಿದ್ದಾರೆ. ವಿಪ್ರರು ಕೀಳು ನೋಡಾ ಜಗವೆಲ್ಲ ಅರಿಯಲು” ಎಂದು ಸಾರಿದ್ದಾರೆ.
“ವೇದ ನಡನಡುಗಿತ್ತು ಶಾಸ್ತ್ರವಗಲಿ ಕೆಲಕ್ಕೆ ಸಾರಿದ್ದಿತ್ತಯ್ಯಾ!
ತರ್ಕ ತರ್ಕಿಸಲರಿಯದೆ ಮೂಗುವಟ್ಟಿದ್ದಿತ್ತಯ್ಯಾ! |
ಆಗಮ ಹೊರತೊಲಗಿ ಅಗಲಿದ್ದಿತ್ತಯ್ಯಾ!
ನಮ್ಮ ಕೂಡಲಸಂಗಯ್ಯನು ಮಾದಾರ ಚೆನ್ನಯ್ಯನ ಮನೆಯಲ್ಲುಂಡ ಕಾರಣ.”
ಎಂದು ಬಸವಣ್ಣನವರು ವೈದಿಕರು ಸೃಷ್ಟಿಸಿದ ಅಮಾನವೀಯ ಶ್ರೇಣೀಕೃತ ಸಮಾಜ ವ್ಯವಸ್ಥೆಯನ್ನು ಟೀಕಿಸುತ್ತಾರೆ.
ಮನುವಾದಿ ಸಮಾಜದ ಕಟ್ಟಕಡೆಯ ಮಾದಾರ ಜಾತಿಯಿಂದ ಬಂದ ಮಾದಾರ ಚೆನ್ನಯ್ಯನವರ ಮನೆಯಲ್ಲಿ ಬಸವಣ್ಣನವರ ದೇವರು ಉಣ್ಣುವ ಮೂಲಕ ಇಡೀ ವರ್ಣ ಮತ್ತು ಜಾತಿ ವ್ಯವಸ್ಥೆಯನ್ನು ತಿರಸ್ಕರಿಸುತ್ತಾರೆ. “ಕುಲಕ್ಕೆ ತಿಲಕ ನಮ್ಮ ಮಾದಾರ ಚೆನ್ನಯ್ಯ, ನಿಮ್ಮಿಂದಧಿಕ ಕೂಡಲಸಂಗಮದೇವಾ” “ಎಂದು ಹೇಳಿದ ಬಸವಣ್ಣನವರು ವ್ಯಕ್ತಿಯೊಬ್ಬ ತನದನ ಘನತೆಯಿಂದ ಉನ್ನತ ಸ್ಥಾನ ಹೊಂದುವನು ಹೊರತಾಗಿ ಮೇಲ್ಬಾತಿಯಲ್ಲಿ ಜನಿಸಿದ ಮಾತ್ರಕ್ಕೆ ದೊಡ್ಡವನಾಗುವುದಿಲ್ಲ ಎಂದು ಸೂಚಿಸಿದ್ದಾರೆ.
“ಧರ್ಮಸ್ಯ ಬ್ರಾಹ್ಮಣೋ ಮೂಲಂ।
ಮನುಸ್ಮತಿ (೧೧ – ೮೩)
ಬ್ರಾಹ್ಮಣಃ ಸಂಭವೇನಮೈವ ದೇವಾನುನಾಮಪಿ ದೈವತಂ।
ಪ್ರಮಾಣ ಚೈವ ಲೋಕಸ್ಯ ಬ್ರಹ್ಮಾತೈವ ಹಿ ಕರಣಂ॥
-ಮನುಸ್ಮತಿ (೧೧ – ೮೪)
(ಬ್ರಾಹ್ಮಣನೇ ಧರ್ಮದ ಮೂಲ. ತನ್ನ ಹುಟ್ಟನಿಂದಲೇ ಅವನು ದೇವತೆಗಳಿಗೂ ದೇವರಾಗಿದ್ದಾನೆ. ಅವನ ಮಾತು ಜನರಿಗೆ ಪ್ರಮಾಣೀಭೂತವಾದುದು.)
ಎಂಬ ಮನುವಾದಿಗಳ ಮಾತು ಬಸವಣ್ಣನವರ ನಿಲವಿಗೆ ತದ್ದಿರುದ್ಧವಾದುದು. ಬಸವಾದಿ ಶರಣರು ಪ್ರತಿ ಹಂತದಲ್ಲೂ ವೇದ, ಆಗಮ ಮತ್ತು ಮನುಸ್ಮೃತಿಯನ್ನು ಅಲ್ಲಗಳೆಯುತ್ತ ಅವೈದಿಕವಾದವನ್ನು ಎತ್ತಿ ಹಿಡಿದಿದ್ದಾರೆ ಎಂಬ ಸತ್ಯವನ್ನು “ಲಿಂಗಾಯತ, ವೀರಶೈವ ಮತ್ತು ಹಿಂದೂ” ಒಂದೇ ಎಂದು ಸಾಧಿಸಲು ಹೆಣಗುವ ಸಂಶೋಧಕ ಮಹಾಶಯರು ಅಲ್ಲಗಳೆಯಲು ಯಾವ ಕಾಲಕ್ಕೂ ಸಾಧ್ಯವಿಲ್ಲ.
ಕೆಲವರು ಭಗವದ್ಗೀತೆಯನ್ನು ರಾಷ್ಟ್ರಗಂಥ ಮಾಡಲು ಹೊರಟಿದ್ದಾರೆ. ಬಹುಧರ್ಮೀಯ ಮತ್ತು ಬಹುಸಂಸ್ಕೃತಿಯ ದೇಶದಲ್ಲಿ ಯಾವುದೇ ಒಂದು ಧರ್ಮದ ಗ್ರಂಥ ರಾಷ್ಟೀಯ ಗ್ರಂಥವಾಗಲಾರದು. ಸಂವಿಧಾನ ರಾಷ್ಟ್ರಗ್ರಂಥವಾಗಿರುವುದರಿಂದ ಎಲ್ಲ ಧರ್ಮ ಮತ್ತು ಧರ್ಮಗ್ರಂಥಗಳನ್ನು ರಕ್ಷಿಸುವ ಜವಾಬ್ದಾರಿ ಅದಕ್ಕಿದೆ. “ವೇದ ಶಾಸ್ತ್ರದವರ ಹಿರಿಯರೆನ್ನೆ. ಮಾಯಾಭ್ರಾಂತಿ ಕವಿದ ಗೀತಜ್ಞರ ಹಿರಿಯರೆನ್ನೆ ಇವರು ಹಿರಿಯರುಗಳೆ?” ಎಂದು ಬಸವಣ್ಣನವರು ದೇದ ಮತ್ತು ಗೀತೆಯ ಹಿರಿಮೆಯನ್ನು ಪ್ರಶ್ನಿಸಿದ್ದಾರೆ.
ʼವರ್ಣ, ಜಾತಿ ಮತ್ತು ಅಸ್ಪೃಶ್ಯತೆಗೆ ಜನ್ಮಜನ್ಮಾಂತರದ ಪುಣ್ಯ ಪಾಪಗಳೇ ಕಾರಣʼ ಎಂದು ಕರ್ಮಸಿದ್ಧಾಂತ ಹೇಳುತ್ತದೆ. ಈ ಕರ್ಮ ಸಿದ್ಧಾಂತವು ಮನುವಾದಿ ಹಿಂದೂ ಧರ್ಮದ ತಾಯಿಬೇರಾಗಿದೆ. “ಮನೆಯೊಳಗೆ ಕತ್ತಲೆ ಹರಿಯದೊಡಾ ಜ್ಯೋತಿಯದೇಕೊ? ಕೂಡಲಸಂಗಮದೇವರ ಮನಮುಟ್ಟಿ ಪೂಜಿಸಿ ಕರ್ಮ ಹರಿಯದೊಡಾ ಪೂಜೆಯದೇಕೊ?” ಎಂದು ಬಸವಣ್ಣನವರು ಪ್ರಶ್ನಿಸುವ ಮೂಲಕ ಕರ್ಮಸಿದ್ಧಾಂತವನ್ನು ಕೊಚ್ಚಿಹಾಕಿದ್ದಾರೆ.
“ಇಪ್ಪತ್ತುನಾಲ್ಕು ತಿಥಿಯಿಂದ ವೆಗ್ಗಳ,
ಗ್ರಹಣ ಸಂಕ್ರಾಂತಿಯಿಂದ ವೆಗ್ಗಳ,
ಏಕಾದಶಿ ವ್ಯತೀಪಾತದಿಂದ ವೆಗ್ಗಳ,
ಸೂಕ್ಷ್ಮ ಶಿವಪಥನರಿದಂಗೆ
ಹೋಮ, ನೇಮ, ಜಪ, ತಪದಿಂದ ವೆಗ್ಗಳ
ಕೂಡಲಸಂಗಮದೇವಾ ನಿಮ್ಮ ಮಾಣದೆ ನೆನೆವಂಗೆ.”
ಎಂದು ಬಸವಣ್ಣನವರು ಕೂಡಲಸಂಗಮದೇವರನ್ನು ನಿರಂತರವಾಗಿ ನೆನೆಯುವುದು ಇವೆಲ್ಲವುಗಳಿಗಿಂತ ವೆಗ್ಗಳ (ಅಧಿಕ) ಎಂದು ಹೇಳಿದ್ದಾರೆ. ಹೀಗೆ ಬಸವಾದಿ ಶರಣರು ಪುರೋಹಿತಶಾಹಿಯ ಎಲ್ಲ ಅನಿಷ್ಟಗಳ ವಿರುದ್ಧ ಬಂಡೆದ್ದಿದ್ದಾರೆ. ಪಂಚಾಂಗದ ಗುಲಾಮರು ತಮ್ಮ ಉದ್ಧಾರಕ್ಕಾಗಿ ಬಸವಣ್ಣನವರ ಈ ಮಾತಿನ ಕಡೆಗೆ ಗಮನ ಹರಿಸುವುದು ಅವಶ್ಯವಾಗಿದೆ.
“ಬ್ರಾಹ್ಮಣ ಭಕ್ತನಾದರೇನಯ್ಯಾ? ಸೂತ ಪಾತಕಂಗಳ ಬಿಡ.
ಕ್ಹತ್ತಿಯ ಭಕ್ತನಾದರೇನಯ್ಯಾ? ಕ್ರೋಧವ ಬಿಡ.
ವೈಶ್ಯ ಭಕ್ತನಾದರೇನಯ್ಯಾ? ಕಪಟವ ಬಿಡ.
ಶೂದ್ರ ಭಕ್ತನಾದರೇನಯ್ಯಾ? ಸ್ವಜಾತಿಯೆಂಬುದ ಬಿಡ.
ಇಂತೀ ಜಾತಿಡಂಬರ ಮೆಚ್ಚುವನೆ ಕೂಡಲಚೆನ್ನಸಂಗಮದೇವ.”
ಎಂದು ಚೆನ್ನಬಸವಣ್ಣನವರು ಸವರ್ಣೀಯರು ಸವರ್ಣೀಯರ ಬೂಟಾಟಿಕೆಯನ್ನು ಬಯಲಿಗೆಳೆದಿದ್ದಾರೆ.
“ಶಿವತಂತ್ರದಿಂದ ಸುಖದುಃಖಗಳು ಬರುತಿಹವೆಂದರಿಯದೆ
ನರಗುರಿಗಳಿಗೆ, ರೋಗ ದಾರಿದ್ರ್ಯ ಅಪಜಯಂಗಳು ಬರುತ್ತಿರಲು
ವಿಪ್ರಗೆ ಕೈಮುಗಿದು ಕಾಣಿಕೆಯನಿಕ್ಕಿ ತನ್ನ ಹೆಸರ ಹೇಳಿ
ಸೂರ್ಯಬಲ, ಚಂದ್ರಬಲ, ಬೃಹಸ್ಪತಿ ಬಲ, ನವಗ್ರಹ ಬಲವ
ಕೇಳುವವರಿಗೆ ಎಲ್ಲಿಹದೋ ಶಿವಭಕ್ತಿ?”
ಎಂದು ಚೆನ್ನಬಸವಣ್ಣನವರು ಬಸವಣ್ಣನವರು ಪುರೋಹಿತಶಾಹಿಗಳ ಎಲ್ಲ ಕುತಂತ್ರಗಳನ್ನು ಬಯಲಿಗೆಳೆಯುವುದರ ಬಗ್ಗೆ ಅರಿವಿಲ್ಲವೆ ನಮ್ಮ ಕೆಲ ಪಂಡಿತರಿಗೆ?
“ಲಿಂಗಭಕ್ತನ ವಿವಾಹದಲ್ಲಿ ಶಿವಗಣಂಗಳಿಗೆ
ವಿಭೂತಿ ವೀಳೆಯವ ಕೊಟ್ಟು ಆರೋಗಣೆಯ ಮಾಡಿಸಿ
ಶಿವಗಣಂಗಳು ಸಾಕ್ಷಿಯಾಗಿ ಪ್ರಸಾದವನಿಕ್ಕುವುದೆ ಸದಾಚಾರವಲ್ಲದೆ
ವಾರ, ತಿಥಿ, ಸುಮುಹೂರ್ತವೆಂಬ ಲೌಕಿಕದ ಕರ್ಮವ ಮಾಡಿದಡೆ
ನಿಮ್ಮ ಸದ್ಭಕ್ತರಿಗೆ ದೂರವಯ್ಯಾ ಕೂಡಲಚೆನ್ನಸಂಗಮದೇವಾ.”
ಎಂದು ಚೆನ್ನಬಸವಣ್ಣನವರು ಹೇಳುವ ಮೂಲಕ ಇಡೀ ಪಂಚಾಂಗ ವ್ಯವಸ್ಥೆಯನ್ನು ತಿರಸ್ಕರಿಸಿದ್ದಾರೆ.
“ಪಂಚಾಂಗ ಕೇಳಿದ ದಕ್ಷಬ್ರಹ್ಮನ ತಲೆಯೇಕೆ ಹೋಯಿತು? ಪಂಚಾಂಗ ಕೇಳಿದ ಪಂಚಪಾಂಡವರು ದೇಶಭ್ರಷ್ಟರಾದರೇಕೆ? ಪಂಚಾಂಗ ಕೇಳಿದ ಶ್ರೀರಾಮನ ಹೆಂಡತಿ ರಾವಣಗೆ ಸೆರೆಯಾದಳೇಕೆ?” ಎಂದು ಮುಂತಾಗಿ ನಿರಾಲಂಬ ಪ್ರಭುದೇವರು
ಪಂಚಾಂಗದ ಅಸ್ತಿತ್ತವನ್ನೇ ಅಲ್ಲಗಳೆಯುತ್ತಾರೆ.
“ಸತ್ತು ಮಣ್ಣಾಗಿ ಹೋದ ಮಾತಾ ಪಿತರುಗಳು
ತಮ್ಮ ಸಂತಾನವಾಗಿ ಜನಿಸಿ ಬಂದರೆಂದು
ಹೆತ್ತು ಹೆಸರಿಟ್ಟು ಕರೆವರಯ್ಯಾ .. ಕಲಿದೇವರದೇವ.”
ಎಂದು ಮಡಿವಾಳ ಮಾಚಿದೇವರು ಪುನರ್ಜನ್ಮವಾದವನ್ನು ತಿರಸ್ಕರಿಸುತ್ತಾರೆ.
“ಉದಯ ಮಧ್ಯಾಹ್ನ ಸಂಧ್ಯಾಕಾಲವ ನೋಡಿ
ಮಾಡುವ ಕರ್ಮಿ ನೀ ಕೇಳಾ:
ಮಹಾಮೇರುವಿನ ಮರೆಯಲ್ಲಿರ್ದು
ತಮ್ಮ ನೆಳಲನರಸುವ ಭಾವಭ್ರಮಿತರ ಮೆಚ್ಚ
ನಮ್ಮ ಕೂಡಲಸಂಗಮದೇವ.”
ಎಂದು ಸಂಧ್ಯಾವಂದನೆಯನ್ನು ತಿರಸ್ಕರಿಸುತ್ತಾರೆ. “ವಾರ, ದಿನ, ಹಗಲು, ಇರುಳು ಏನೆಂದರಿಯದೆ ನಿಮ್ಮುವ ಪೂಜಿಸಿ ಎನ್ನುವ ಮರೆದೆ ಕೂಡಲಸಂಗಮದೇವಾ” ಎಂದು ಇನ್ನೊಂದು ವಚನದಲ್ಲಿ ಬಸವಣ್ಣನವರು ಹೇಳುವ ಮೂಲಕ “ಕೂಡಲಸಂಗನ ಶರಣರು ಅಚ್ಚ ಲಿಂಗೈಕ್ಯರು” ಎಂಬುದನ್ನು ಸೂಚಿಸಿದ್ದಾರೆ.
“ಭಕ್ತಿಯ ಪಿತ್ತ ತಲೆಗೇರಿ ಕೈಲಾಸ ಬಟ್ಟೆಯ ಹತ್ತುವ ವ್ಯರ್ಥರ ಕಂಡು ಎನ್ನ್ನ ಮನ ನಾಚಿತ್ತು. ನಾಚಿತ್ತು. ಕೈಲಾಸವೆಂಬುದೇನೋ ಪೃಥ್ವಿಯ ಮೇಲೊಂದು ಮೊರಡಿ” ಎಂದು ಬಸವಣ್ಣನವರು ಕೈಲಾಸದ. ಅಸ್ತಿತ್ವವನ್ನೇ ಅಲ್ಲಗಳೆದಿದ್ದಾರೆ.
“ಕೈಲಾಸವೆಂಬುದೊಂದು ಭೂಮಿಯೊಳಗಿರುವ ಹಾಳುಬೆಟ್ಟ. ಅಲ್ಲಿರುವ ಮುನಿಗಳೆಲ್ಲ ಜೀವಗಳ್ಳರು. ಅಲ್ಲಿರ್ದ ಚಂದ್ರಶೇಖರನು ಬಹು ಎಡ್ಡ” ಎ೦ದು ಸಿದ್ಧರಾಮೇಶ್ವರರು ಹೇಳುತ್ತಾರೆ.
“ಜಲ ದೈವವೆಂದಡೆ ಶೌಚವ ಮಾಡಲಿಲ್ಲ. ನೆಲ ದೈವವೆಂದಡೆ ಕಾಲೂರಿ ನಡೆಯಲಿಲ್ಲ.” ಎಂದು ಮುಂತಾಗಿ ಮಡಿವಾಳ ಮಾಚಿದೇವರು ಹೇಳುವ ಮೂಲಕ ಪಂಚಮಹಾಭೂತಗಳ ದೈವತ್ವವನ್ನು ಅಲ್ಲಗಳೆಯುತ್ತಾರೆ.
“ಕಲ್ಲುದೇವರು ದೇವರಲ್ಲ, ಮಣ್ಣು ದೇವರು ದೇವರಲ್ಲ
ಮರ ದೇವರು ದೇವರಲ್ಲ, ಪಂಚಲೋಹದಲ್ಲಿ ಮಾಡಿದ ದೇವರು ದೇವರಲ್ಲ.
ಸೇತುರಾಮೇಶ್ವರ, ಗೋಕರ್ಣ, ಕಾಶಿ, ಕೇದಾರ ಮೊದಲಾಗಿ
ಅಷ್ಟಾಷಷ್ಟಿ ಕೋಟಿ ಪುಣ್ಯಕ್ಷೇತ್ರಂಗಳಲ್ಲಿಯ ದೇವರು ದೇವರಲ್ಲ.
ತನ್ನ ತಾನರಿದು ತಾನಾರೆಂದು ತಿಳಿದಡೆ ತಾನೇ ದೇವ ನೋಡಾ
ಅಪ್ರಮಾಣ ಕೂಡಲ ಸಂಗಮದೇವಾ.”
ಎಂದು ೧೬ನೇ ಶತಮಾನದ ಬಾಲಸಂಗಯ್ಯನವರು ಹಿಂದೂಧರ್ಮ ಎಂದು ಕರೆಯಿಸಿಕೊಳ್ಳುವ ವೈದಿಕ ಅಥವಾ ಮನುಧರ್ಮದ ಎಲ್ಲವನ್ನೂ ಅಲ್ಲಗಳೆಯುತ್ತಾರೆ.
ತಮ್ಮದು ಸ್ವತಂತ್ರ ಧರ್ಮ ಅಥವಾ ಜೀವನವಿಧಾನ ಎಂಬುದನ್ನು ಶರಣರು ಸಹಸ್ರಾರು ವಚನಗಳಲ್ಲಿ ಸಾಬೀತುಪಡಿಸಿದ್ದಾರೆ. ಆದರೆ ಕೆಲ ಸಂಶೋಧಕರು ಸ್ವತಂತ್ರಧರ್ಮಗಳಾದ ಹಿಂದೂ, ವೀರಶೈವ ಮತ್ತು ಲಿಂಗಾಯತ ಧರ್ಮಗಳನ್ನು ಒಂದೆಡೆ ಕಟ್ಟಿಹಾಕಲು ಶತಪ್ರ ಪ್ರಯತ್ನ ಮಾಡುತ್ತಿದ್ದಾರೆ.
ವರ್ಣ, ಕುಲ, ಮತ, ಜಾತಿ ಮತ್ತು ಉಪಜಾತಿಗಳಲ್ಲೇ ಉಸಿರಾಡುವ ಜನರನ್ನು ಒಟ್ಟಾರೆಯಾಗಿ ಹಿಂದೂ ಎಂದು ಕರೆಯುವ ಮೂಲಕ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಸ್ವಾರ್ಥ ಸಾಧಿಸುವಲ್ಲಿ ಶತಮಾನಗಳಿಂದ ಯಶಸ್ಸನ್ನು ಗಳಿಸಿವೆ. ಹಬ್ಬ ಹರಿದಿನಗಳು ಮತ್ತು ಇತರ ಸಾಂಪ್ರದಾಯಿಕ ಸಂಬಂಧಗಳು ಇವರನ್ನು ಒಂದುಗೂಡಿಸಿರುವುದರಿಂದ ‘ಹಿಂದು’ ಎಂಬ ಒಂದೇ ಒಂದು ಶಬ್ದಜಾಲದಲ್ಲಿ ಇವರೆನ್ನೆಲ್ಲ ಹಿಡಿದಿಡುವಲ್ಲಿ ಶೋಷಕ ಶಕ್ತಿಗಳು ಸಫಲವಾಗಿವೆ.
ಬ್ರಾಹ್ಮಣರಲ್ಲಿನ ತ್ರಿಮಸ್ಥರೇ ಒಂದಾಗಿ ಇರಲು ಸಾಧ್ಯವಿಲ್ಲ. ದ್ವೈತ, ಅದ್ವೈತ ಮತ್ತು ವಿಶಿಷ್ಟಾದ್ವೈತ ಮತಗಳ ಮಧ್ಯದ ಜಿಜ್ಞಾಸೆ ಶತಮಾನಗಳಿಂದ ಮುಂದುವರಿಯುತ್ತಲೇ ಇದೆ. ಈ ತ್ರಿಮತಗಳ ನಿಲವು ಭಿನ್ನ ವಿಭಿನ್ನವಾಗಿವೆ. ಇನ್ನು ಉಳಿದ ಸಹಸ್ರಾರು ಜಾತಿ ಉಪಜಾತಿಗಳಲ್ಲಿನ ವೈರುಧ್ಯಗಳು ಜನಜೀವನದ ಮಧ್ಯೆ ಭಾರಿ ಕಂದರಗಳನ್ನೇ ಉಂಟುಮಾಡಿವೆ.
ದಲಿತರು, ಹಿಂದುಳಿದವರು ಮತ್ತು ಇತರೆ ಹಿಂದುಳಿದವರು ದಿನನಿತ್ಯ ಸಂಪ್ರದಾಯಗಳ ದೈಹಿಕ ಮತ್ತು ಮಾನಸಿಕ ಹಿಂಸೆಗೆ ಬಲಿಯಾಗುತ್ತಲೇ ಇರುತ್ತಾರೆ. ಇಂಥ. ಅನಿಷ್ಟಗಳ ಕಡೆಗೆ ಗಮನ ಹರಿಸಿ ಸಮಾನತೆಯ ಬದುಕನ್ನು ಸಾಧಿಸುವುದಕ್ಕಾಗಿ ಬದುಕನ್ನು ಸವೆಸದೆ ಅಸತ್ಯವನ್ನು ಸತ್ಯ ಎಂದು ಹೇಳುವುದಕ್ಕೇ ಬದುಕನ್ನು ಮುಡಿಪಾಗಿಡುವುದು ಅಸಹ್ಯಕರವಾದುದು.
ಆದರೆ ಈ ಎಲ್ಲ ವೈರುಧ್ಯಗಳನ್ನು ತಿರಸ್ಕರಿಸುವ “ಲಿಂಗಾಯತ” ಎಂಬ ಸರ್ವಸಮತ್ವದಿಂದ ಕೂಡಿದ ಹೊಸ ಜೀವನವಿಧಾನದ ಧರ್ಮವನ್ನು ಸ್ಥಾಪಿಸಲು ಬಸವಾದಿ ಶರಣರು ತಮ್ಮ ಇಡೀ ಬದುಕನ್ನು ಸವೆಸಿದರು.
ಈ ಮಾನವಧರ್ಮದ ನಿಜಸ್ವರೂಪವನ್ನು ಉಳಿಸಿಕೊಳ್ಳುವುದಕ್ಕಾಗಿ ಶ್ರಮಿಸುವುದು ಪ್ರತಿಯೊಬ್ಬ ಮಾನವತಾವಾದಿಯ ಆದ್ಯ ಕರ್ತವ್ಯವಾಗಿದೆ.
ಹಿಂದೂಧರ್ಮದ ಹೆಸರಿನಲ್ಲಿ ತಲೆಯೆತ್ತುತ್ತಿರುವ ಕೋಮುವಾದಿಗಳು ಮತ್ತು ಇಸ್ಲಾಂಧರ್ಮದ ಹೆಸರಿನಲ್ಲಿ ತಲೆಯೆತ್ತುತ್ತಿರುವ ಮೂಲಭೂತವಾದಿಗಳು ಹೆಚ್ಚಿದಂತೆಲ್ಲ ಶರಣ ಮತ್ತು ಸೂಫಿ ಸಿದ್ಧಾಂತಗಳಿಗೆ ಗಂಡಾಂತರ ಬಂದೊದಗುವುದರಲ್ಲಿ ಸಂಶಯವಿಲ್ಲ.
ಸೂಫಿ, ಶರಣ, ದಾಸ ಮತ್ತು ಸಂತರ ಭಕ್ತಿಪಂಥ ಆಂತರ್ಯದಲ್ಲಿ ಅತ್ಯಂತ ಕ್ರಾಂತಿಕಾರಿಯಾಗಿದೆ. ಭಕ್ತಿಪಂಥ ಚಳವಳಿಯಿಂದಾಗಿಯೆ ಇಲ್ಲಿಯವರೆಗೆ ನಮ್ಮ ದೇಶ, ಕೋಮುವಾದಿಗಳು ಮತ್ತು ಮೂಲಭೂತವಾದಿಗಳ ಹಿಡಿತಕ್ಕೆ ಸಿಗದೆ ಹೋಗಿದೆ.
ಲೋಕಾಯತರು, ಬುದ್ಧ ಮತ್ತು ಭಕ್ತಿ ಚಳವಳಿಗಳು ರಕ್ಷಿಸಿದ ಭಾರತವನ್ನು ಕೋಮುವಾದಿ, ಮೂಲಭೂತಾದಿ ಮತ್ತು ಉಗ್ರಗಾಮಿ ಶಕ್ತಿಗಳ ಹಿಡಿತಕ್ಕೆ ಸಿಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಪ್ರಜ್ಞಾವಂತರ ಆದ್ಯ ಕರ್ತವ್ಯವಾಗಿದೆ. ಅದಕ್ಕಾಗಿ ಸೂಫಿ, ಶರಣ, ದಾಸ, ಸಂತ ಮತ್ತು ತತ್ತ್ವಪದಕಾರರ ಸಾಹಿತ್ಯದಿಂದ ಸ್ಫೂರ್ತಿ ಪಡೆಯುವುದು ಅವಶ್ಯವಾಗಿದೆ.
-ರಂಜಾನ್ ದರ್ಗಾ