Homeಕರ್ನಾಟಕಗಣಿ ಲೂಟಿ ನಡೆಸುವ ಕುಮಾರಸ್ವಾಮಿ ಪ್ಲ್ಯಾನ್‌ ಈಗ ಬಹಿರಂಗ: ಕಾಂಗ್ರೆಸ್‌ ಆರೋಪ

ಗಣಿ ಲೂಟಿ ನಡೆಸುವ ಕುಮಾರಸ್ವಾಮಿ ಪ್ಲ್ಯಾನ್‌ ಈಗ ಬಹಿರಂಗ: ಕಾಂಗ್ರೆಸ್‌ ಆರೋಪ

ಕರ್ನಾಟಕದ ಭೂಮಿ ಭಗೆಯುವುದು ಕುಮಾರಸ್ವಾಮಿಯವರ ಅತ್ಯಂತ ಆಸಕ್ತಿದಾಯಕ ವಿಷಯ.
ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಕೇವಲ ಅಧಿಕಾರ ಹಪಹಪಿತನಕ್ಕೆ ಮಾತ್ರವಲ್ಲ, ಅಧಿಕಾರ ಬಳಸಿ ಗಣಿಯಲ್ಲಿ ಲೂಟಿಗಾರಿಕೆ ನಡೆಸುವುದು ಅವರ ಪ್ಲ್ಯಾನ್‌ ಆಗಿತ್ತು ಎನ್ನುವುದು ಈಗ ಜಗಜ್ಜಾಹೀರಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ವಿರುದ್ದ ಗಣಿ ಅಕ್ರಮ ವಿಚಾರದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಲೋಕಾಯುಕ್ತ ಸಲ್ಲಿಸಿರುವ ಮನವಿಯನ್ನು ರಾಜ್ಯಪಾಲರು 10 ತಿಂಗಳಿನಿಂದ ತಮ್ಮ ಬಳಿಯೇ ಇಟ್ಟುಕೊಂಡಿರುವ ಮಾಧ್ಯಮಗಳು ವರದಿ ಮಾಡಿದ ಬೆನ್ನಲ್ಲೇ ಕೆಪಿಸಿಸಿ ಕುಮಾರಸ್ವಾಮಿ ವಿರುದ್ಧ ಎಕ್ಸ್‌ ತಾಣದಲ್ಲಿ ಕಿಡಿಕಾರಿದೆ.

“2023ರ ನವೆಂಬರ್ ತಿಂಗಳಲ್ಲೇ ಗಣಿ ಹಗರಣದ ಕುರಿತಂತೆ ಕೇಂದ್ರ ಸಚಿವ ಕುಮಾರಸ್ವಾಮಿಯವರ ತನಿಖೆ ನಡೆಸಲು ಲೋಕಾಯುಕ್ತ ರಾಜ್ಯಪಾಲರ ಅನುಮತಿ ಕೇಳಿದೆ. ಕುಮಾರಸ್ವಾಮಿ ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ ತನಿಖೆ ಎದುರಿಸುವ ನೈತಿಕತೆ ತೋರಿಸಲಿ, ಗಣಿ ಹಗರಣದ ಬಗ್ಗೆ ರಾಜ್ಯದ ಜನರಿಗೆ ಉತ್ತರ ನೀಡಲಿ” ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

“ಸಹಿ ನನ್ನದಲ್ಲ ಎಂದಿದ್ದ ಕುಮಾರಸ್ವಾಮಿಯವರ ಸುಳ್ಳು ಎಫ್‌ಎಸ್‌ಎಲ್‌ ವರದಿಯಲ್ಲಿ ಬಹಿರಂಗವಾಗಿದೆ. ಸುಳ್ಳು ಹೇಳಿ ಕಾನೂನಿನ ದಿಕ್ಕು ತಪ್ಪಿಸಿದ್ದಕ್ಕಾಗಿ ಅವರು ರಾಜೀನಾಮೆ ಕೊಟ್ಟು ಪ್ರಾಯಶ್ಚಿತ್ತ ಮಾಡಿಕೊಳ್ಳಲಿ” ಎಂದು ಕುಟುಕಿದೆ.

“ಕುಮಾರಸ್ವಾಮಿಯವರ ಮೇಲೆ ಗುರುತರವಾದ ಗಣಿ ಹಗರಣದ ಪ್ರಕರಣ ಲೋಕಾಯುಕ್ತ ಮುಂದಿದೆ. ರಾಜ್ಯಪಾಲರ ಟೇಬಲ್ ಮೇಲೆ ಕುಮಾರಸ್ವಾಮಿಯವರ ವಿರುದ್ದ ತನಿಖೆಗೆ ಅನುಮತಿ ಕೋರಿದ ಕಡತ ಕುಳಿತಿದೆ. ಯಡಿಯೂರಪ್ಪನವರ ಮೇಲೆ ಗಂಭೀರವಾದ ಪೋಕ್ಸೋ ಪ್ರಕರಣವಿದೆ. ವಿಜಯೇಂದ್ರರ ಮೇಲೆ ಆರ್‌ಟಿಜಿಎಸ್‌ ಲಂಚದ ಆರೋಪವಿದೆ. ಆರ್. ಅಶೋಕ್ ಅವರ ವಿರುದ್ಧ ಬಗರ್ ಹುಕುಂ ಹಗರಣದ ಕಪ್ಪು ಚುಕ್ಕೆ ಇದೆ. ಭ್ರಷ್ಟಾಚಾರದ ಆರೋಪಿಗಳೆಲ್ಲಾ ಒಟ್ಟಿಗೆ ಸೇರಿ ಪಾದಯಾತ್ರೆ ಮಾಡುತ್ತಿರುವುದು ಪಾಪ ತೊಳೆದುಕೊಳ್ಳುವುದಕ್ಕೋ, ಮತ್ತಷ್ಟು ಪಾಪ ಮಾಡಲು ಪ್ರೇರಣೆ ಪಡೆಯುವುದಕ್ಕೋ? ಬಿಜೆಪಿ ಜೆಡಿಎಸ್ ಪಾದಯಾತ್ರೆ ಆಲಿಬಾಬಾ ಮತ್ತು 40 ಕಳ್ಳರ ಕತೆ ನೆನಪಿಸುವಂತೆ ಇದೆ” ಎಂದು ಕಾಂಗ್ರೆಸ್‌ ಲೇವಡಿ ಮಾಡಿದೆ.

“ಕೇಂದ್ರ ಮಂತ್ರಿಯಾಗಿ ಕೃಷಿ ಖಾತೆಯನ್ನೇ ಕೇಳುತ್ತೇನೆ ಎನ್ನುತ್ತಿದ್ದ ಬ್ರದರ್ ಸ್ವಾಮಿಗಳು ಕರ್ನಾಟಕದ ಜನರ ಕಿವಿ ಮೇಲೆ ಹೂವು ಇಟ್ಟಿದ್ದಾರೆ. ಅವರ ಕಣ್ಣು ಇದ್ದಿದ್ದು ಗಣಿ ಖಾತೆ ಮೇಲೆಯೇ ಹೊರತು ಕೃಷಿ ಖಾತೆಯ ಮೇಲಲ್ಲ. ಮುಖ್ಯಮಂತ್ರಿಯಾಗಿದ್ದಾಗ ಸಂಡೂರಿನ 550 ಎಕರೆ ಭೂಮಿ ಭಗೆಯಲು ಬ್ರದರ್ ಸ್ವಾಮಿಗಳು ಅಕ್ರಮ ಮಾರ್ಗ ಅನುಸರಿಸಿದ್ದರು, ಈಗ ಕೇಂದ್ರ ಗಣಿ ಸಚಿವರಾಗಿ ದೇವದಾರಿ ಗಣಿ ಭಗೆಯಲು ಕೈ ಇಡುವ ಪ್ರಯತ್ನ ಮಾಡಿದ್ದಾರೆ” ಎಂದು ಆರೋಪಿಸಿದೆ.

“ಕಳೆದ ನವೆಂಬರ್ ನಲ್ಲೇ ಲೋಕಾಯುಕ್ತ ಕುಮಾರಸ್ವಾಮಿಯವರ ವಿಚಾರಣೆಗೆ ಅನುಮತಿ ಕೇಳಿದ್ದ ಸಂಗತಿಯನ್ನು ಮುಚ್ಚಿಟ್ಟಿದ್ದೇಕೆ, ಕೇವಲ ಒಂದು ಖಾಸಗಿ ದೂರಿಗೆ 24 ಗಂಟೆಯ ಒಳಗೆ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿದ ರಾಜ್ಯಪಾಲರು ಲೋಕಾಯುಕ್ತರು ಅನುಮತಿ ಕೇಳಿದ್ದರೂ ಕುಮಾರಸ್ವಾಮಿಯವರಿಗೆ ನೋಟಿಸ್ ನೀಡದೆ, ವಿಚಾರಣೆಗೂ ಅನುಮತಿ ನೀಡದೆ ಕಡತವನ್ನು ಮೂಲೆಗೆ ಎಸೆದು ಕುಳಿತಿದ್ದೇಕೆ” ಎಂದು ಪ್ರಶ್ನಿಸಿದೆ.

“ಕನ್ನಡಮ್ಮನ ಒಡಲು ಭಗೆಯಲು ಹಾತೊರೆಯುವ ಕುಮಾರಸ್ವಾಮಿಯವರಿಂದ ಕರ್ನಾಟಕವನ್ನು ರಕ್ಷಿಸಲು ರಾಜ್ಯಪಾಲರಿಗೆ ಇಷ್ಟವಿಲ್ಲವೇ?” ಎಂದು ಕಾಂಗ್ರೆಸ್‌ ಕೇಳಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments