Homeಕರ್ನಾಟಕಸಚಿವಗಿರಿ ಎಂದರೆ ಚಮಚಾಗಿರಿ ಅಲ್ಲ; ಕೆ ಎ‌ನ್‌ ರಾಜಣ್ಣ, ಪರಮೇಶ್ವರ್‌ ಅರ್ಥಮಾಡಿಕೊಳ್ಳಲಿ: ಕುಮಾರಸ್ವಾಮಿ

ಸಚಿವಗಿರಿ ಎಂದರೆ ಚಮಚಾಗಿರಿ ಅಲ್ಲ; ಕೆ ಎ‌ನ್‌ ರಾಜಣ್ಣ, ಪರಮೇಶ್ವರ್‌ ಅರ್ಥಮಾಡಿಕೊಳ್ಳಲಿ: ಕುಮಾರಸ್ವಾಮಿ

ಸಚಿವರಾದ ಕೆ ಎನ್‌ ರಾಜಣ್ಣ ಮತ್ತು ಪರಮೇಶ್ವರ್‌ ಅವರು ಕುಮಾರಸ್ವಾಮಿ ಏನೇನೋ ಹೇಳುತ್ತಾರೆ, ಅದಕ್ಕೆಲ್ಲ ಉತ್ತರಿಸುವ ಅಗತ್ಯವಿಲ್ಲ ಎಂದು ಜಾರಿಕೊಂಡಿದ್ದಾರೆ. ‘ಸಚಿವಗಿರಿ ಎಂದರೆ ಚಮಚಾಗಿರಿ ಅಲ್ಲ’ ಅನ್ನುವುದನ್ನು ಇವರು ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಎಕ್ಸ್‌ ತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, “ಕರ್ನಾಟಕದ ‘ನೀರೋ’ಗೆ ರಾಜಕೀಯ ಊಳಿಗ ಮಾಡುತ್ತಿರುವ ಗೃಹಮಂತ್ರಿ ಪರಮೇಶ್ವರ್‌, ಮತ್ತು ಸಿದ್ದಹಸ್ತರು ಹೇಳಿದ್ದಕ್ಕೆಲ್ಲ ‘ಪರಿಪೂರ್ಣ ಸಹಕಾರ’ ಕೊಡುವ ಹಾಸನ ಜಿಲ್ಲಾ ಉಸ್ತುವಾರಿ ಕೆ ಎನ್‌ ರಾಜಣ್ಣ ಅವರು ಸಂಸದ ಪ್ರತಾಪ್‌ ಸಿಂಹ ಅವರ ಸಹೋದರನ ಪ್ರಕರಣಕ್ಕೆ ಸಂಬಂಧಿಸಿ ನಾನು ಕೊಟ್ಟಿರುವ ಹೇಳಿಕೆಗಳಿಗೆ ನೀಡಿದ ಪ್ರತಿಕ್ರಿಯೆ ಗಮನಿಸಿದ್ದೇನೆ. ತಪ್ಪಿದರೆ, ಸತ್ಯದ ಪರ ನಿಲ್ಲುವ ಗಂಡಸ್ತನ ನಮಗಿಲ್ಲ ಎಂಬುದನ್ನು ಒಪ್ಪಿಕೊಳ್ಳುವ ನೈತಿಕತೆಯನ್ನಾದರೂ ತೋರಬೇಕು” ಎಂದು ಹೇಳಿದ್ದಾರೆ.

“ಮಾಧ್ಯಮಗೋಷ್ಠಿಯಲ್ಲಿ ನಾನು ಹೇಳಿದ್ದೆಲ್ಲವೂ ಸತ್ಯ.. ಅಪ್ಪಟ ಸತ್ಯ. ದಾಖಲೆ ಇಟ್ಟುಕೊಂಡೇ ಹೇಳಿದ್ದೇನೆ. ಆ ದಾಖಲೆಗಳನ್ನು ತೆಗೆದುಕೊಂಡು ಎಲ್ಲಿಗೆ ಬರಲಿ, ಹೇಳಿ? ಆಗ ಕ್ರಮ ಜರುಗಿಸುವ ದಮ್ಮು ತಾಕತ್ತನ್ನು ತೋರುವಿರಾ? ಅಥವಾ ಪಲಾಯನ ಮಾಡುವಿರಾ” ಎಂದು ಪ್ರಶ್ನಿಸಿದ್ದಾರೆ.

“ಬಹಿರಂಗ ಚರ್ಚೆಗೂ ನಾನು ತಯಾರು. ನೀವು ಸಿದ್ಧವೇ? ಎಲ್ಲಿ? ಯಾವಾಗ? ಎಷ್ಟೊತ್ತಿಗೆ? ನೀವು ಫಿಕ್ಸ್ ಮಾಡುತ್ತೀರಾ? ನಾನು ಫಿಕ್ಸ್ ಮಾಡಲಾ? ಅಲ್ಲಿ ನಾನು ಹೇಳಿದ್ದೇನು ಎಂಬ ಬಗ್ಗೆ ಚರ್ಚಿಸೋಣ. ಸರಿ, ವಿಕ್ರಂಸಿಂಹ ಮರ ಕಡಿದಿದ್ದರೆ ಎಫ್‌ಐಆರ್‌ನಲ್ಲಿ ಅವರ ಹೆಸರಿಲ್ಲ, ಯಾಕೆ!? ಆ ಎಫ್‌ಐಆರ್‌ ಪ್ರತಿ ಲಗತ್ತಿಸಿದ್ದೇನೆ. ಅದನ್ನು ನೋಡಿ, ಆಮೇಲೆ ಮಾತನಾಡಿ” ಎಂದು ತಿಳಿಸಿದ್ದಾರೆ.

“ದಲಿತರ ಹೆಸರಿನಲ್ಲಿ ರಾಜಕೀಯ ಬಾಳು ಕಟ್ಟಿಕೊಂಡ ಪರಮೇಶ್ವರ್, ರಾಜಣ್ಣನವರೇ.. ನಿಮ್ಮ ರೋಷಾವೇಷ ಆ ದಲಿತ ಅಧಿಕಾರಿಯನ್ನು ಅಮಾನತು ಮಾಡುವ ಕ್ಷಣದಲ್ಲಿ ಯಾರ ಬೂಟಿನ ಕೆಳಗೆ ಬಿದ್ದು ಹೊರಳಾಡುತ್ತಿತ್ತು? ಒಬ್ಬ ಗಾರ್ಡ್ ಅಮಾನತಿಗೂ ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯೇ ಆದೇಶ ಹೊರಡಿಸಬೇಕೆ?” ಎಂದು ವಾಗ್ದಾಳಿ ನಡೆಸಿದ್ದಾರೆ.

“ಅಹಿಂದ ಅಹಿಂದ ಎಂದು ಬೆಳಗೆದ್ದರೆ ಭಜನೆ ಮಾಡುವ ನೀವು, ಆ ಅಧಿಕಾರಿಯಿಂದ ₹50 ಲಕ್ಷ ಕಿತ್ತ ನಿಮ್ಮ ನೀತಿಗೆಟ್ಟ ಹೊಲಸು ಶಾಸಕನ ಬಗ್ಗೆ ನಿಮ್ಮ ಮೌನ ಅಸಹ್ಯ. ನಿಮ್ಮದೇ ಲಜ್ಜೆಗೆಟ್ಟ ಸರಕಾರ ಎಸಗಿದ ತಪ್ಪಿಗೆ ದಲಿತ ಅಧಿಕಾರಿಗೆ ಶಿಕ್ಷೆಯೇ? ಇದೆಲ್ಲದರ ಚಿದಂಬರ ರಹಸ್ಯ ಯಶವಂತಪುರ ಫ್ಲಾಟ್ ನಲ್ಲಿ ಅಡಗಿದೆ. ಯಾವ ತನಿಖೆ ಮಾಡುತ್ತೀರಿ?” ಎಂದು ಕೇಳಿದ್ದಾರೆ.

“ಮೈಸೂರು ಲೋಕಸಭೆ ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಅವರನ್ನು ಮುಗಿಸಲು ಹೂಡಿದ ಟರ್ಮಿನೇಟರ್ ಸಿನಿಮಾ ಇದು. ಅದರ ಹಿಂದಿರುವ ಸಿದ್ಧಸೂತ್ರದಾರನ ಕಳ್ಳಹೆಜ್ಜೆಗಳನ್ನು ನಾನು ಕಾಣದವನೇನೂ ಅಲ್ಲ. ಇಡೀ ವಿಕ್ರಂಸಿಂಹ ಅಂಕಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಹಿನ್ನೆಲೆ ಸಂಗೀತ, ಎಲ್ಲವೂ ಒಬ್ಬರದೇ. ಅವರೇ ಶ್ರೀಮನ್ ಸಿದ್ದರಾಮಣ್ಣ!” ಎಂದು ವ್ಯಂಗ್ಯವಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments