ಶ್ರೀರಾಮುಲು ಅವರೇ, ನನ್ನನ್ನು ಗಡಿಪಾರು ಮಾಡಲು ಒತ್ತಾಯಿಸುವ ಬದಲು, ನೀವೇ ಗಡಿಪಾರಿನಿಂದ ಪಾರಾಗಿ ಮೊದಲು ಎಂದು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.
ಎಕ್ಸ್ ತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, “ಚುನಾವಣೆಯಲ್ಲಿ ನೀವೇ ಘೋಷಿಸಿರುವಂತೆ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನ ಎದುರಿಸುತ್ತಿದ್ದೀರಿ. ರಾಜ್ಯದ ಬೊಕ್ಕಸಕ್ಕೆ ದ್ರೋಹ ಮಾಡಿದ್ದೀರಿ. ಕಳ್ಳತನದಿಂದ ಗಣಿಗಾರಿಕೆ ನಡೆಸಿ, ಸರ್ಕಾರಕ್ಕೆ ತೆರಿಗೆ ನೀಡದೆ ವಂಚನೆ ಮಾಡಿರುವುದು ರಾಜದ್ರೋಹ ಅಲ್ಲವೇ” ಎಂದು ಪ್ರಶ್ನಿಸಿದ್ದಾರೆ.
“ಕೊಲೆ,ದೊಂಬಿ ಪ್ರಕರಣ ನಡೆಸಿದ ಕಾರಣಕ್ಕೆ ಗುಜರಾತಿಗೆ ಕಾಲಿಡಬಾರದು ಎಂದು ನಿಮ್ಮ ಕೇಂದ್ರ ಗೃಹ ಸಚಿವರಿಗೆ ನ್ಯಾಯಾಲಯ ಛಿಮಾರಿ ಹಾಕಿದ್ದು ನೆನಪಿದ್ಯಾ? ಇಂತಹ ಸರದಿಯ ಸಾಲಲ್ಲಿ ನಿಂತಿರುವ ನಿಮ್ಮ ಬಗ್ಗೆ ಕನಿಕರವಿದೆ!” ಎಂದು ಲೇವಡಿ ಮಾಡಿದ್ದಾರೆ.
“ಸಾರ್ವಜನಿಕ ಜೀವನದಲ್ಲಿ ಆಡುವ ಭಾಷೆ, ನಾಲಿಗೆ ಹಿಡಿತದಲ್ಲಿರಬೇಕು,ಬಿಜೆಪಿಯ ನಾಯಕರು ಎಚ್ಚರಿಕೆಯಿಂದ ಮಾತಾಡಿದರೆ ಒಳೀತು” ಎಂದು ಕಿವಿಮಾತು ಹೇಳಿದ್ದಾರೆ.