ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆಯಿಂದ ಕೋಲಾರ ಲೋಕಸಭಾ ಕ್ಷೇತ್ರ ಜೆಡಿಎಸ್ಗೆ ಸಿಗುವುದು ಬಹುತೇಕ ಖಚಿತ ಎಂದು ಶ್ರೀನಿವಾಸಪುರ ಕ್ಷೇತ್ರದ ಜೆಡಿಎಸ್ ಶಾಸಕ ವೆಂಕಟಶಿವಾರೆಡ್ಡಿ ಬಹಿರಂಗಪಡಿಸಿದ್ದಾರೆ.
ಹಾಲಿ ಸಂಸದ ಮುನಿಸ್ವಾಮಿ ಅವರಿಗೆ ಬಿಜೆಪಿಯಿಂದ ಈ ಬಾರಿ ಟಿಕೆಟ್ ಸಿಗಲ್ಲ ಎನ್ನುವ ಚರ್ಚೆಗಳ ನಡುವೆ ವೆಂಕಟಶಿವಾರೆಡ್ಡಿ ಹೇಳಿರುವ ಈ ಮಾತು ರಾಜಕೀಯ ಆಸಕ್ತರ ಗಮನ ಸೆಳೆದಿದೆ.
ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಅಭ್ಯರ್ಥಿ ಆಯ್ಕೆ ಸೇರಿದಂತೆ ಗೆಲುವಿನ ತಂತ್ರಗಾರಿಕೆಯನ್ನು ಶುರು ಮಾಡಿವೆ. ಈ ಬಾರಿ ಬಿಜೆಪಿ–ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ರಾಜ್ಯದಲ್ಲಿ ಚಿತ್ರಣ ಏನಾಗಲಿದೆ ಎಂಬುದು ಸಹಜವಾಗಿ ಕುತೂಹಲ ಕೆರಳಿಸಿದೆ. ಜೆಡಿಎಸ್ಗೆ ಬಿಜೆಪಿ ಯಾವ ಯಾವ ಕ್ಷೇತ್ರ ಬಿಟ್ಟು ಕೊಡಲಿದೆ ಎಂಬುದು ಕೂಡ ಕುತೂಹಲ ಸಂಗತಿ.
ಕುಮಾರಸ್ವಾಮಿ ಮಹತ್ವದ ಸಭೆ
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಕೋಲಾರ ಲೋಕಸಭಾ ಕ್ಷೇತ್ರದ ಬಗ್ಗೆ ಮಹತ್ವದ ಸಭೆ ಮಾಡಿದ್ದಾರೆ. ಬಿಡದಿಯ ತೋಟದ ಮನೆಯಲ್ಲಿ ನಡೆದ ಈ ಸಭೆಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಇದೇ ವೇಳೆ ಪಕ್ಷ ಸಂಘಟನೆ, ಸಿದ್ದತೆ, ಆಕಾಂಕ್ಷಿಗಳ ಬಗ್ಗೆ ಚರ್ಚೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಮೂವರು ಶಾಸಕರು ಇರುವ ಕಾರಣ ಜೆಡಿಎಸ್‌ನಿಂದ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಸಲಹೆ ನೀಡಿದ್ದಾರೆ. ದಲಿತ ನಾಯಕರೊಬ್ಬರನ್ನು ಗೆಲ್ಲಿಸುವ ಬಗ್ಗೆ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಮೂವರ ಹೆಸರು ಅಂತಿಮ
“ಬಿಜೆಪಿಯೊಂದಿಗೆ ಹೊಂದಾಣಿಕೆಯಲ್ಲಿ ಕೋಲಾರ ಕ್ಷೇತ್ರ ಜೆಡಿಎಸ್ ಪಾಲಿಗೆ ಸಿಗುವುದು ಬಹುತೇಕ ಖಚಿತ. ಕೋಲಾರ ಕ್ಷೇತ್ರಕ್ಕೆ ಜೆಡಿಎಸ್ ನಿಂದ ಮೂವರ ಹೆಸರು ಅಂತಿಮಗೊಳಿಸಲಾಗಿದೆ. ಮುಳಬಾಗಿಲು ಶಾಸಕ ಸಂಮೃದ್ದಿ ಮಂಜುನಾಥ್, ದೇವನಹಳ್ಳಿ ಮಾಜಿ ಶಾಸಕ ನಿಸರ್ಗ ನಾರಾಯಣ ಸ್ವಾಮಿ, ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಬಂಗಾರಪೇಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಮಲ್ಲೇಶ್ ಬಾಬು, ಹೆಸರು ಅಂತಿಮ ಪಟ್ಟಿಯಲ್ಲಿದೆ. ಈ ಮೂವರ ಹೆಸರನ್ನು ಸರ್ವೆ ಮಾಡಿದ ನಂತರ ಒಬ್ಬರು ಅಂತಿಮ ಅಭ್ಯರ್ಥಿ ಆಗಲಿದ್ದಾರೆ” ಎಂದು ಶಾಸಕ ವೆಂಕಟಶಿವಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.