ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿರುವ ಮಾಜಿ ಸಚಿವ ಹಾಗೂ ಶಾಸಕ ಎಚ್ ಡಿ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಜಾಮೀನು ಕೋರಿ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು, “ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ” ಯ ವಿಶೇಷ ನ್ಯಾಯಾಲಯ ಸೋಮವಾರ ವಿಚಾರಣೆ ನಡೆಸಿತು. ಅರ್ಜಿದಾರರ ಪರ ಹೈಕೋರ್ಟ್ ಹಿರಿಯ ವಕೀಲ ಸಿ ವಿ ನಾಗೇಶ್ ಹಾಗೂ ಪ್ರಾಸಿಕ್ಯೂಷನ್ ಪರ ಹೈಕೋರ್ಟ್ ಹಿರಿಯ ವಕೀಲೆ ಜಯನಾ ಕೊಠಾರಿ ಮತ್ತು ಅಶೋಕ್ ನಾಯಕ್ ವಾದ ಮಂಡಿಸಿದರು.
ಎಚ್ ಡಿ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶ ಗಜಾನನ ಭಟ್ ಅವರು, ಸುದೀರ್ಘವಾದ ವಾದ – ಪ್ರತಿವಾದ ಆಲಿಸಿ ತೀರ್ಪು ಪ್ರಕಟಿಸಿದ್ದಾರೆ.
ನ್ಯಾಯಾಲಯದಿಂದ ಜಾಮೀನು ಸಿಕ್ಕಿರುವ ಹಿನ್ನೆಲೆಯಲ್ಲಿ ಇಂದೇ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.
ಸೋಮವಾರ ಬೆಳಿಗ್ಗೆ ಸತತ ಎರಡು ಗಂಟೆಗಳ ಕಾಲ ಎಸ್ಐಟಿ ಪರ ಎಸ್ಪಿಪಿ ಹಾಗೂ ರೇವಣ್ಣ ಪರ ವಕೀಲರು ನ್ಯಾಯಾಲಯದ ವಾದ – ಪ್ರತಿವಾದ ಮಂಡಿಸಿದರು. ವಾದ ಮಂಡನೆಗೆ ಸಮಯಾವಕಾಶ ನೀಡಬೇಕೆಂಬ ರೇವಣ್ಣ ಪರ ಹಿರಿಯ ವಕೀಲ ಸಿ ವಿ ನಾಗೇಶ್ ಮಾಡಿದ ಮನವಿಯನ್ನ ಪುರಸ್ಕರಿಸಿ ವಿಚಾರಣೆಯನ್ನ ಸಂಜೆಗೆ ನ್ಯಾಯಾಲಯ ಮುಂದೂಡಿತ್ತು.
ಒಂದು ವೇಳೆ ಜಾಮೀನು ನೀಡಿದರೆ ಸಾಕ್ಷ್ಯ ನಾಶಪಡಿಸಬಹುದು. ಆರೋಪಿ ಪ್ರಭಾವಿ ಎಂದು ಅಂಶವನ್ನ ಪರಿಗಣಿಸಬೇಕು. ಮಹಿಳೆಯನ್ನ ಅಪಹರಿಸಿ ಬೆದರಿಕೆ ಹಾಕಿದ ಪ್ರಕರಣವಲ್ಲ. ಅಪಹರಣವಾದ ಮಹಿಳೆ ಅತ್ಯಾಚಾರ ಪ್ರಕರಣ ಸಂತ್ರಸ್ತೆಯಾಗಿದ್ದು, ದೂರು ನೀಡದಂತೆ ಮಾಡಿದ ಯತ್ನವಿದು. ಅಲ್ಲದೆ ಇತರೆ ಮಹಿಳೆ ದೂರು ನೀಡಿದರೆ ತಮಗೆ ತೊಡಕಾಗಬಹುದು ಎಂಬ ಅಪಹರಿಸಲಾಗಿತ್ತು. ಸಾಕ್ಷಿಗಳ ಹೇಳಿಕೆ ಇನ್ನೂ ದಾಖಲಿಸಿಕೊಳ್ಳಬೇಕು. ಇತರೆ ಮಹಿಳೆಯರು ದೂರು ಕೊಡಬೇಕಾದರೆ ರೇವಣ್ಣಗೆ ಜಾಮೀನು ನೀಡಕೂಡದು ಎಸ್‌ಐಟಿ ಪರ ವಕೀಲರು ವಾದಿಸಿದರು.
ನ್ಯಾಯಾಧೀಶ ಗಜಾನನ ಭಟ್ ಅವರು, ಸುದೀರ್ಘವಾದ ವಾದ – ಪ್ರತಿವಾದ ಆಲಿಸಿ, ಸಾಕ್ಷಿ ನಾಶಪಡಿಸದಂತೆ ಸೂಚಿಸಿ ಷರತ್ತುಬದ್ಧ ಜಾಮೀನು ನೀಡಿದ್ದಾರೆ. ಹಾಗೆಯೇ ಎಸ್‌ಐಟಿ ತನಿಖೆಗೆ ಸೂಕ್ತವಾಗಿ ಸ್ಪಂದಿಸಬೇಕು ಎಂದು ಹೇಳಿದೆ.