Homeಕರ್ನಾಟಕಪಂಚಾಯತ್ ರಾಜ್ ವ್ಯವಸ್ಥೆಗೆ ಇಡೀ ದೇಶದಲ್ಲೇ ಕರ್ನಾಟಕ ಮಾದರಿ: ಡಿಸಿಎಂ ಪರಮೇಶ್ವರ್

ಪಂಚಾಯತ್ ರಾಜ್ ವ್ಯವಸ್ಥೆಗೆ ಇಡೀ ದೇಶದಲ್ಲೇ ಕರ್ನಾಟಕ ಮಾದರಿ: ಡಿಸಿಎಂ ಪರಮೇಶ್ವರ್

ಪಂಚಾಯತ್ ರಾಜ್ ವ್ಯವಸ್ಥೆಗೆ ಇಡೀ ದೇಶದಲ್ಲೇ ಕರ್ನಾಟಕ ಮಾದರಿಯಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಹೇಳಿದರು.

ಇಂದು ತುಮಕೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ‌ ನಡೆದ 2026-27ನೇ ಸಾಲಿನ ಗ್ರಾಮ ಪಂಚಾಯಿತಿಯ ಆಡಳಿತಾಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು‌.

ಗ್ರಾಮ ಪಂಚಾಯಿತಿಗಳು ಕುಡಿಯುವ ನೀರು, ರಸ್ತೆ ಅಭಿವೃದ್ಧಿ ಮತ್ತು ಹಣಕಾಸು ನಿರ್ವಹಣೆಯ ಜೊತೆಗೆ ಜಾತಿ-ಧರ್ಮ ಭೇದವಿಲ್ಲದೆ ಸಮಾನತೆ ಹಾಗೂ ಶಾಂತಿಯ ವಾತಾವರಣ ನಿರ್ಮಿಸಲು ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಸಾರ್ವಜನಿಕರ ಹಣದ ಬಳಕೆಯಲ್ಲಿ ಪಾರದರ್ಶಕತೆ ಕಾಪಾಡಿ, ಯಾವುದೇ ಸಮುದಾಯಕ್ಕೆ ತಾರತಮ್ಯವಾಗದಂತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ವೆಚ್ಚಗಳ ಲೆಕ್ಕಪರಿಶೋಧನೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪಂಚಾಯತ್ ರಾಜ್ ಪರಿಕಲ್ಪನೆ ಮಹಾತ್ಮ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕನಸಿನಿಂದ ರೂಪುಗೊಂಡಿದ್ದು, 1993ರ ಸಂವಿಧಾನ ತಿದ್ದುಪಡಿ ಮತ್ತು 1994ರ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಕಾಯ್ದೆಯ ಮೂಲಕ ಕರ್ನಾಟಕದಲ್ಲಿ ಮೂರು ಹಂತದ ಪಂಚಾಯತ್ ವ್ಯವಸ್ಥೆ ಜಾರಿಗೆ ಬಂದು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವಿವರಿಸಿದರು.

ಕಂದಾಯ ಇಲಾಖೆಯ 1.44 ಕೋಟಿ ಪುಟಗಳ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ, ಇ-ಖಜಾನೆಯಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಮಾಡಿದಂತಹ ವ್ಯವಸ್ಥೆಗಳು ನಮ್ಮ ಜೊತೆಗೆ ಉಳಿದಿವೆ ಎಂದು ಸ್ಮರಿಸಿದ ಅವರು, ಶೀಘ್ರವಾಗಿ ಪಂಚಾಯಿತಿ ಚುನಾವಣೆ ನಡೆಸುವ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಲಬರುಗಿಯಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ಹೇಳಿದರು.

ಮಹಿಳಾ‌ ಸಬಲೀಕರಣದ ಉದ್ದೇಶದಿಂದ ರಾಜ್ಯದಲ್ಲಿ ಅನುಷ್ಟಾನಗೊಳಿಸಿರುವ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ವಿಶ್ವ ಬ್ಯಾಂಕ್‌ ಪ್ರಶಂಸೆ ವ್ಯಕ್ತಡಿಸಿದೆ. ಗೃಹಲಕ್ಷ್ಮಿ ಯೋಜನೆಯನ್ನು ನಮ್ಮ ರಾಜ್ಯದಲ್ಲಿ ಪರಿಚಯಿಸಿದಾಗ ವಿರೋಧ ಪಕ್ಷಗಳ ನಾಯಕರು ಟೀಕೆ ಮಾಡಿದರು. ಈಗ ದೇಶದಲ್ಲಿ 14 ರಾಜ್ಯಗಳಲ್ಲಿ ಗೃಹಲಕ್ಷ್ಮಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದರು.

ತುಮಕೂರಿನಲ್ಲಿ ಯಾವುದೇ ರೀತಿಯ ಸರ್ಕಾರಿ ಕಾರ್ಯಕ್ರಮಗಳನ್ನು ಕೈಗೊಂಡರು ತಾವೆಲ್ಲರೂ ಸಹಕರಿಸಿದ್ದೀರಿ. ಹಿಂದಿನ ಸಿಎಂ ಅವರು ನಾಲ್ಕು ಬಾರಿ ಜಿಲ್ಲೆಗೆ ಭೇಟಿ ನೀಡಿದ್ದರು‌. ಎಲ್ಲರೂ ಸೇರಿ ಒಟ್ಟಾಗಿ ರಾಜ್ಯದಲ್ಲೇ ಮಾದರಿ ಕಾರ್ಯಕ್ರಮವನ್ನು ಮಾಡಿಕೊಟ್ಟಿದ್ದೀರಿ ಎಂದು ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕೆಲಸಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾದ ಟಿ.ಬಿ.ಜಯಚಂದ್ರ, ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಅಶ್ವಿಜ ಬಿ.ವಿ, ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ ಮುಂತಾದವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments