ಶುಕ್ರವಾರ (ನ.17) ಬಿಜೆಪಿ ಶಾಸಕಾಂಗ ಸಭೆ ನಿಗದಿಯಾಗಿದ್ದು, ಈ ಸಭೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ ಪಿ ನಡ್ಡಾ ಅವರು ಬರಲಿದ್ದಾರೆ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕುರುಡುಮಲೆ ದೇವಸ್ಥಾನಕ್ಕೆ ಆಗಮಿಸಿ, ಕುರುಡುಮಲೆ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಪಕ್ಷದಲ್ಲಿ ಹಿರಿಯರಿದ್ದರೂ ಕೂಡ ನನಗೆ ಜವಾಬ್ದಾರಿ ಕೊಟ್ಟಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವೆ” ಎಂದರು.
“ಪಕ್ಷ ಬಲಪಡಿಸಿ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಜಯ ಸಾಧಿಸಬೇಕು. ಕರ್ನಾಟಕ ಲೋಕಸಭಾ ಚುನಾವಣೆಯಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಬೇಕು. ಮೋದಿಜಿ ಮೂರನೇ ಬಾರಿಗೆ ದೇಶದ ಪ್ರಧಾನ ಮಂತ್ರಿಯಾಗಬೇಕು” ಎಂದು ತಿಳಿಸಿದರು.
ಅಧ್ಯಕ್ಷ ಸ್ಥಾನ ನೀಡಿದ್ದಕ್ಕೆ ಬಿಜೆಪಿಯೊಳಗೆ ಅಸಮಾಧಾನ ಇದೆ ಅಲ್ವಾ? ಎಂದು ಪ್ರಶ್ನಿಸಿದಾಗ, “ರಾಷ್ಟ್ರೀಯ ನಾಯಕರು ತೀರ್ಮಾನ ಮಾಡಿ ಆಯ್ಕೆ ಮಾಡಿದ್ದಾರೆ. ಇದು ಅಮಿತ್ ಶಾ, ಜೆ.ಪಿ.ನಡ್ಡಾ ತೀರ್ಮಾನ. ಯಾರೂ ವಿರೋಧ ಮಾಡುವುದಿಲ್ಲ, ಸಂತೋಷದಿಂದ ಒಪ್ಪಿದ್ದಾರೆ” ಎಂದರು.